ಗೆದ್ದರೂ ಸೋತ ಆಸ್ಟ್ರೇಲಿಯಾ ಮಂಡಳಿ: ಟ್ರಾವಿಸ್ ಹೆಡ್ ಸಿಡಿಲಬ್ಬರಕ್ಕೆ 17 ಕೋಟಿ ಸ್ವಾಹ!

0
5

ಕ್ರಿಕೆಟ್‌ನಲ್ಲಿ ಆಟಗಾರನೊಬ್ಬ ಅಬ್ಬರಿಸಿದರೆ ತಂಡಕ್ಕೆ ಸಂಭ್ರಮ, ಅಭಿಮಾನಿಗಳಿಗೆ ಹಬ್ಬ. ಆದರೆ, ವಿಚಿತ್ರವೆಂಬಂತೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಅಬ್ಬರದ ಆಟದಿಂದಾಗಿ ಖುದ್ದು ಅವರದೇ ಕ್ರಿಕೆಟ್ ಮಂಡಳಿಗೆ ಬರೋಬ್ಬರಿ 17 ಕೋಟಿ ರೂಪಾಯಿ ನಷ್ಟವಾಗಿದೆ! ನಂಬಲು ಕಷ್ಟವಾದರೂ ಇದು ಸತ್ಯ.

ಪರ್ತ್‌ನಲ್ಲಿ ನಡೆದ ಪ್ರತಿಷ್ಠಿತ ‘ಆ್ಯಶಸ್ 2025’ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ ಎಂದರೆ 5 ದಿನಗಳ ತಾಳ್ಮೆಯ ಆಟ. ಆದರೆ, ಈ ಪಂದ್ಯದಲ್ಲಿ ನಡೆದಿದ್ದು ಕೇವಲ ಎರಡು ದಿನಗಳ ಕಾದಾಟ ಮಾತ್ರ.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 172 ರನ್‌ಗಳಿಗೆ ಕುಸಿದರೆ, ಆಸ್ಟ್ರೇಲಿಯಾ ಕೂಡ 132 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಗಳಿಸಿದ 164 ರನ್ ಸೇರಿ, ಆಸ್ಟ್ರೇಲಿಯಾಗೆ ಗೆಲ್ಲಲು 205 ರನ್‌ಗಳ ಸಾಧಾರಣ ಗುರಿ ಸಿಕ್ಕಿತು.

ಹೆಡ್ ರುದ್ರನರ್ತನ ಮತ್ತು ನಷ್ಟದ ಲೆಕ್ಕಾಚಾರ: ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ ಟೆಸ್ಟ್ ಪಂದ್ಯವನ್ನು ಟಿ20ಯಂತೆ ಆಡಿದರು. ಕೇವಲ 83 ಎಸೆತಗಳಲ್ಲಿ 123 ರನ್ ಸಿಡಿಸಿದ ಹೆಡ್, ಇಂಗ್ಲೆಂಡ್ ಬೌಲರ್‌ಗಳನ್ನು ಧೂಳೀಪಟ ಮಾಡಿದರು. ಪರಿಣಾಮವಾಗಿ, 5 ದಿನ ನಡೆಯಬೇಕಿದ್ದ ಪಂದ್ಯವು 2ನೇ ದಿನದಂದೇ ಮುಕ್ತಾಯವಾಯಿತು.

ಇಲ್ಲಿಯೇ ಆಗಿದ್ದು ಎಡವಟ್ಟು! ಭಾನುವಾರ ರಜಾದಿನವಾಗಿದ್ದರಿಂದ 3ನೇ ದಿನದಾಟವನ್ನು ವೀಕ್ಷಿಸಲು ಬರೋಬ್ಬರಿ 60 ಸಾವಿರ ಪ್ರೇಕ್ಷಕರು ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿದ್ದರು. ಕ್ರೀಡಾಂಗಣ ಹೌಸ್‌ಫುಲ್ ಆಗುವ ನಿರೀಕ್ಷೆಯಿತ್ತು.

ಆದರೆ, ಹೆಡ್ ವೇಗದ ಆಟದಿಂದ ಪಂದ್ಯವು ಶನಿವಾರವೇ ಮುಗಿದುಹೋಯಿತು. ಇದರಿಂದಾಗಿ ಭಾನುವಾರ ಮತ್ತು ನಂತರದ ದಿನಗಳ ಟಿಕೆಟ್ ಹಣ, ಪ್ರಸಾರ ಹಕ್ಕು ಹಾಗೂ ಕ್ರೀಡಾಂಗಣದ ಫುಡ್ ಅಂಡ್ ಬೆವರೇಜಸ್ ಆದಾಯ ಸೇರಿದಂತೆ ‘ಕ್ರಿಕೆಟ್ ಆಸ್ಟ್ರೇಲಿಯಾ’ ಬರೋಬ್ಬರಿ 3 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (ಭಾರತೀಯ ಮೌಲ್ಯದಲ್ಲಿ ಸುಮಾರು 17.35 ಕೋಟಿ ರೂ.) ನಷ್ಟ ಅನುಭವಿಸಿದೆ ಎಂದು ಎಬಿಸಿ ಸ್ಪೋರ್ಟ್ಸ್ ವರದಿ ಮಾಡಿದೆ.

ಟ್ರಾವಿಸ್ ಹೆಡ್ ಈ ‘ಸುಂಟರಗಾಳಿ’ ಇನ್ನಿಂಗ್ಸ್ ಆಸ್ಟ್ರೇಲಿಯಾಗೆ ಸರಣಿಯಲ್ಲಿ 1-0 ಮುನ್ನಡೆ ತಂದುಕೊಟ್ಟಿತಾದರೂ, ಕ್ರಿಕೆಟ್ ಮಂಡಳಿಯ ಖಜಾನೆಗೆ ಮಾತ್ರ ಭಾರೀ ಕನ್ನ ಹಾಕಿದ್ದಂತೂ ಸುಳ್ಳಲ್ಲ.

Previous articleಪರೀಕ್ಷೆ ಮುಗಿದ ಮೂರು ಗಂಟೆಯಲ್ಲಿ ಫಲಿತಾಂಶ – ಜಾನಪದ ವಿಶ್ವವಿದ್ಯಾಲಯ ಸಾಧನೆಗೆ ಪ್ರಶಂಸೆ
Next articleಪಾಕ್ ಸೇನಾ ಕಚೇರಿ ಮೇಲೆ ಆತ್ಮಾಹುತಿ ದಾಳಿ 6 ಮಂದಿ ಸುಟ್ಟು ಕರಕಲು!

LEAVE A REPLY

Please enter your comment!
Please enter your name here