ಹುಬ್ಬಳ್ಳಿ: ಎಟಿಎಂ ವಾಹನ ತಡೆದು 7 ಕೋಟಿ ದರೋಡೆ ಮಾಡಿದ ಪ್ರಕರಣ ಸುದ್ದಿಯಲ್ಲಿರುವಾಗಲೇ ಹುಬ್ಬಳ್ಳಿಯಲ್ಲಿ ಕೇರಳದ ಬಂಗಾರದ ಆಭರಣ ಮಾರಾಟಗಾರನಿಗೆ ಇಡಿ ಅಧಿಕಾರಿಗಳ ಹೆಸರಿನಲ್ಲಿ ಐವರು ಸೇರಿ ಬರೋಬ್ಬರಿ 3 ಕೋಟಿ 2 ಲಕ್ಷ ಮೌಲ್ಯದ 2 ಕೆ.ಜಿ 942 ಗ್ರಾಂ ಬಂಗಾರದ ಆಭರಣ ಹಾಗೂ 2 ಲಕ್ಷ ನಗದು ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಕೇರಳದ ಸುದೀನ್ ಎಂ.ಎಸ್. ಎಂಬ ಬಂಗಾರದ ವ್ಯಾಪಾರಿಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ವಿಚಾರಣೆ ನೆಪದಲ್ಲಿ ವಂಚಿಸಲಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿಗೆ ವರ್ಗಾಯಿಸಲಾಗಿದೆ.
ಏನಿದು ಘಟನೆ?: ಕೇರಳದ ಸುದೀನ್ ಬಂಗಾರದ ವ್ಯಾಪಾರಿ. ರಾಜ್ಯದ ವಿವಿಧೆಡೆ ಆಭರಣ ಮಳಿಗೆಗೆ ತೆರಳಿ ತನ್ನ ಬಳಿಯಿರುವ ಆಭರಣ ತೋರಿಸಿ, ಆರ್ಡರ್ ಪಡೆಯುವುದು, ಮಾರಾಟ ಮಾಡುವ ಕೆಲಸ ಮಾಡುತ್ತಾನೆ.
ಈತ ನ. 15ರಂದು ಮಂಗಳೂರಿನಿಂದ ಹೊರಟು, ನ. 16ರಂದು ಬೆಳಗಾವಿ, ನ. 17ರಂದು ಗೋಕಾಕ್‌ಗೆ ತೆರಳಿ ಕೆಲವು ಆರ್ಡರ್ ಪಡೆದು ಅಲ್ಲಿಂದ ಹುಬ್ಬಳ್ಳಿಗೆ ಬಂದು ಲಾಡ್ಜ್ ಒಂದರಲ್ಲಿ ವಾಸ್ತವ್ಯ ಮಾಡಿದ್ದಾನೆ. ನಂತರ ನ. 18ರಂದು ಹುಬ್ಬಳ್ಳಿಯ ಕೆಲವು ಆಭರಣ ಮಾರಾಟ ಮಳಿಗೆಗಳಿಗೆ ಭೇಟಿ ಕೊಟ್ಟು ಆರ್ಡರ್ ಪಡೆದು ವಾಸ್ತವ್ಯ ಮಾಡಿದ್ದಾನೆ.
ನ. 19ರಂದು ಧಾರವಾಡಕ್ಕೆ ಹೋಗಿ ಆರ್ಡರ್ ಪಡೆದು ಮರಳಿ ಹುಬ್ಬಳ್ಳಿಗೆ ಬಂದು ನೀಲಿಜನ್ ರಸ್ತೆಯಲ್ಲಿ ತನ್ನೊಂದಿಗೆ ಬಂದಿದ್ದ ಕೆಲಸಗಾರ ವಿವೇಕನೊಂದಿಗೆ ನಡೆದುಕೊಂಡು ಹೋಗುವಾಗ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಅಪರಿಚಿತ ಐವರು ಇಡಿ ಅಧಿಕಾರಿಗಳ ಹೆಸರಿನಲ್ಲಿ ನಿಮ್ಮನ್ನು ಚೆಕ್ ಮಾಡಬೇಕು ಎಂದು ಕಚೇರಿಗೆ ಬನ್ನಿ ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿ ಕಾರಿನಲ್ಲಿ ಹತ್ತಿಸಿಕೊಂಡು ಅಪಹರಿಸಿದ್ದಾರೆ.
ಅಲ್ಲಿಂದ ಧಾರವಾಡ ಮಾರ್ಗವಾಗಿ ಸುದೀನ್ ಅವರಿಗೆ ಬೈದಾಡುತ್ತಾ ನೀವು ಸ್ಮಗ್ಲಿಂಗ್ ಮಾಡುತ್ತೀರಾ ಎಂದು ಮೊಬೈಲ್ ಕಸಿದುಕೊಂಡು ಬ್ಯಾಗಿನಲ್ಲಿದ್ದ ಆಭರಣ ಹಾಗೂ 2 ಲಕ್ಷ ತೆಗೆದುಕೊಂಡಿದ್ದಾರೆ. ಅಲ್ಲಿಂದ ಬೆಳಗಾವಿಯ ಕಿತ್ತೂರು ಬಳಿ ಹೋಗಿ ಕೆಲಸಗಾರ ವಿವೇಕನನ್ನು ಕೆಳಗೆ ಇಳಿಸಿದರು. ಸುದೀನ್ ಅವರನ್ನು ಎಂ.ಕೆ. ಹುಬ್ಬಳ್ಳಿ ಹತ್ತಿರ ಕರೆದುಕೊಂಡು ಹೋಗಿ ಕಾರಿನಿಂದ ಇಳಿಸಿ ಬ್ಯಾಗಿನಲ್ಲಿದ್ದ ಒಟ್ಟು 3 ಕೋಟಿ 2 ಲಕ್ಷ ಮೌಲ್ಯದ 2 ಕೆಜಿ 942 ಗ್ರಾಂ ಬಂಗಾರದ ಆಭರಣ ಹಾಗೂ 2 ಲಕ್ಷ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

























