ಮುಖ್ಯಮಂತ್ರಿ ಬದಲಾವಣೆ ಮಾತು ಬಾಯಿ ಚಪಲಕ್ಕಾಗಿ

0
10

ಮೂಡಿಗೆರೆ: ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿರೋಧ ಪಕ್ಷಗಳು ಹತಾಶೆಯಿಂದ ಬಾಯಿ ಚಪಲಕ್ಕಾಗಿ ಮಾತನಾಡುತ್ತಿವೆ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದಲ್ಲಿ ಪದೇ ಪದೇ ಮೂಗು ತೂರಿಸುವ ಬಿಜೆಪಿ, ಕೇಂದ್ರದಲ್ಲಿ 11 ವರ್ಷದ ಆಡಳಿತ ವಿಫಲತೆಯನ್ನು ಬಿಜೆಪಿ ನಾಯಕರು ಏಕೆ ಪ್ರಶ್ನಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ನಾಯಕತ್ವದ ಬಗ್ಗೆ ಯಾರೊಬ್ಬರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು, ಸಂಸದರು ಪಕ್ಷದ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಒಂದಿಬ್ಬರು ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜಿವಾಲ ಜತೆ ಚರ್ಚಿಸಿದ್ದೇನೆ. ನಾಯಕತ್ವ ಬದಲಾವಣೆ ಬಗ್ಗೆ ಯಾರೊಬ್ಬರೂ ಅಪಸ್ವರ ಎತ್ತದಂತೆ ಹೈಕಮಾಂಡ್ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದೇನೆ’ ಎಂದರು.

ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯಲ್ಲಿ ಸಿ.ಆರ್. ಸಗೀರ್ ಅಹ್ಮದ್, ಡಿ.ಬಿ. ಚಂದ್ರೇಗೌಡ, ನಾನು ಸೇರಿದಂತೆ ಮೂವರು ಸಚಿವರಾಗಿದ್ದೆವು. ನಂತರ ಬಂದ ಸರ್ಕಾರಗಳು ಜಿಲ್ಲೆಯ ಶಾಸಕರಿಗೆ ಒಂದೊಂದು ವರ್ಷ ಮಾತ್ರ ಸಚಿವ ಸ್ಥಾನ ದೊರಕಿದೆ. ಜಿಲ್ಲೆಗೆ ಸಚಿವ ಸ್ಥಾನ ಸಿಗದೆ 22 ವರ್ಷದಲ್ಲಿ 20 ವರ್ಷ ಹೊರಗಿನವರೆ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ಹೇಳಿದರು.

ಈ ಬಾರಿ ಸಂಪುಟ ವಿಸ್ತರಣೆ ವೇಳೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಡ ಹಾಕುವುದಿಲ್ಲ. ಮಹಿಳಾ ಕೋಟದಲ್ಲಿ ನಯನಾ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಚುರುಕುಗೊಳ್ಳುವ ಜತೆಗೆ ಅಭಿವೃದ್ಧಿಗೆ ಸಹಕಾರ ಸಿಗುತ್ತದೆ. ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಭರವಸೆಯಿದೆ ಎಂದು ತಿಳಿಸಿದರು.

Previous articleʻಹೇಳಲು ನನ್ನ ಬಳಿ ಏನೂ ಇಲ್ಲʼ: ಮೌನ ಮುರಿದ ಖರ್ಗೆ
Next articleಸಾಧ್ಯವಾದಷ್ಟು ದೋಚಬೇಕೆಂಬುದೇ ಕಾಂಗ್ರೆಸ್ ಗುರಿ

LEAVE A REPLY

Please enter your comment!
Please enter your name here