ಗ್ರಾಮ್ಯ ಸೊಗಡಿನ ಅರೆಭಾಷೆ ಸಾಮಾಜಿಕ ನಾಟಕ ‘ಅಪ್ಪ’..!

0
37

ಸುಳ್ಯ: ಅಪ್ಪನೆಂದರೆ ಯಾರಿಗೆ ಇಷ್ಟ ಇಲ್ಲಾ ಹೇಳಿ…? ಅಪ್ಪನೆಂದರೆ ಪ್ರೀತಿ, ವಾತ್ಸಲ್ಯ, ಧೈರ್ಯ, ಅಭಯ, ಕರುಣೆ.. ಸುರಕ್ಷತೆ..ಹೀಗೆ ಪ್ರತಿ ಕುಟುಂಬದ ಆಧಾರ ಸ್ತಂಭವೇ ಅಪ್ಪನೆಂಬ ಆಲದ ಮರ.. ಹೊರಗೆ ಗಟ್ಟಿತನ, ಒರಟು, ಮೌನಿಯಾಗಿ ಕಾಣಿಸಿದರೂ ಒಳಗೆ ಉಕ್ಕಿ ಬರುವ ಪ್ರೀತಿಯ ಕಡಲು.. ಇಡೀ ಕುಟುಂಬವನ್ನು ಹೆಗಲ ಮೇಲೆ ಹೊತ್ತು ಸಾಕಿ ಸಲಹುವ, ಸುರಕ್ಷಿತ ಕೈಗಳಲ್ಲಿ ಎದೆಗಪ್ಪಿಕೊಳ್ಳುವ ಕರುಣಾಮಯಿ..

ಕಣ್ಣು ಮಿಟಿಕಿಸದೆ ಕಾಯುವ ಸೈನಿಕ.. ಎಲ್ಲರ ಭಾವ, ಭಾವನೆಗಳಿಗೆ ಧ್ವನಿಯಾಗುವ, ಅದಕ್ಕೆ ಮೂರ್ತರೂಪ ನೀಡುವ, ಆಶೆ ಆಕಾಂಕ್ಷೆಗಳನ್ನು ಈಡೇರಿಸುವ ಕಾಮಧೇನು.. ಕುಟುಂಬಕ್ಕಾಗಿ ಮುಡುಪಾಗಿಡುವ ಜೀವ.. ಈ ಅಪ್ಪನ ಬದುಕಿನ ತೊಳಲಾಟಗಳನ್ನು ಅಭಿವ್ಯಕ್ತಿ ಪಡಿಸುವ ನಾಟಕವೊಂದು ಸಿದ್ಧಗೊಳ್ಳತಿದೆ. ತನ್ನ ಅಪ್ಪನ ಕಥೆ.. ಭಾವನೆ, ಬವಣೆಯೇ ಇದು ಎಂದು ಪ್ರತಿಯೊಬ್ಬರಿಗೂ ಅನ್ನಿಸಿಕೊಳ್ಳುವಷ್ಟು ಆಪ್ತವೆನಿಸುತ್ತದೆ ಮತ್ತು ಮನದಾಳಕ್ಕೆ‌ ಇಳಿಯುತ್ತಾನೆ ಈ ನಾಟಕದ ಅಪ್ಪ.

ರಂಗನಿರ್ದೇಶಕ ಲೋಕೇಶ್ ಊರುಬೈಲು ರಚನೆ ಮತ್ತು ನಿರ್ದೇಶನ ಮಾಡಿರುವ ಅಪ್ಪ ನಾಟಕವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಿದ್ಧಪಡಿಸುತಿದೆ. ನ.27ರಂದು ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ನಾಟಕದ ಪ್ರೀಮಿಯರ್ ಶೋ ನಡೆಯಲಿದೆ.

ನ.30 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅರೆಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲು ಸಹಕಾರದಲ್ಲಿ ಒಂದೂವರೆ ಗಂಟೆಯ ಸಾಮಾಜಿಕ ನಾಟಕ ಸಿದ್ಧಗೊಳ್ಳುತಿದೆ.

ಗ್ರಾಮೀಣ ಸೊಗಡಿನ ಅಚ್ಚ ಅರೆಭಾಷೆಯ ನಾಟಕ ‘ಅಪ್ಪ ಜನರ ಬದುಕಿನ ನೈಜ ಚಿತ್ರಣವನ್ನು, ಮಾನವ ಸಂಬಂಧಗಳನ್ನು, ಕೃಷಿ ಬದುಕಿನ ತಲ್ಲಣಗಳನ್ನು ಪ್ರಸ್ತುತಪಡಿಸುತ್ತದೆ. ಒಂದು ತಲೆಮಾರಿನಿಂದ‌ ಇನ್ನೊಂದು ತಲೆಮಾರಿಗೆ ಆಗುವ ಬದಲಾವಣೆಯ ಪಲ್ಲಟಗಳನ್ನು ಅತ್ಯಂತ ಸರಳ‌ ಮತ್ತು ಸ್ವಾರಷ್ಯಕರವಾಗಿ ವಿವರಿಸಲಾಗಿದೆ. ತೀರಾ ಸಾಮಾನ್ಯ ಕೃಷಿ ಕುಟುಂಬದ ಯಜಮಾನ ‘ಅಪ್ಪ’ನನ್ನು ಕೇಂದ್ರ ಪಾತ್ರವಾಗಿರಿಸಿಕೊಂಡು ಹಳೆಯ ಮತ್ತು ಹೊಸ ತಲೆಮಾರಿನ ಕೊಂಡಿಯಾದ‌ ಅಪ್ಪ ಮತ್ತು ಮಗನ ನಡುವಿನ ಸಂಬಂಧಗಳೇ ನಾಟಕದ ಕಥಾ ಹಂದರ.

ಅಪ್ಪನ ಪಾತ್ರದಲ್ಲಿ ರಾಜ್ ಮುಖೇಶ್ ಹಾಗೂ ಮಗನ ಪಾತ್ರದಲ್ಲಿ ವಿನೋದ್‌ ಮೂಡಗದ್ದೆ ಮನಮುಟ್ಟುವಂತೆ ಅಭಿನಯಿಸಿದ್ದಾರೆ.ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅರೆಭಾಷಿಕರ ಗ್ರಾಮೀಣ ಜೀವನ, ಕೃಷಿ ಬದುಕು, ಆಚಾರ ವಿಚಾರ ಹಾಗೂ ಸಂಸ್ಕೃತಿಗಳ ವಾಸ್ತವ ಚಿತ್ರಣ ಅತ್ಯಂತ ನವಿರಾಗಿ ಪ್ರಸ್ತುತಪಡಿಸಲಾಗಿದೆ.

ಹಾಡು, ಜಾನಪದ ಹಾಡುಗಳು, ನೇಜಿ ಹಾಡುಗಳು ಅರೆಭಾಷೆಯಲ್ಲಿ ಮೂಡಿ ಬಂದಿದ್ದು, ನೃತ್ಯ, ಕೋಲಾಟಗಳು ನಾಟಕವನ್ನು ರಂಜನೀಯವಾಗಿಸಿದೆ. ಸುಳ್ಯದ ರಂಗ ಮಯೂರಿ ಕಲಾ ಶಾಲೆಯಲ್ಲಿ ನಾಟಕದ ತಯಾರಿ ನಡೆದಿದೆ.

Previous articleಬೆಂಗಳೂರಿನ ಎಟಿಎಂ ವ್ಯಾನ್ ನಲ್ಲಿ ನಗದು ದರೋಡೆ: ಪೊಲೀಸ್ ಕಾನ್ಸ್ಟೇಬಲ್ ಸೇರಿ ಇಬ್ಬರ ಬಂಧನ, ತನಿಖೆಯಲ್ಲಿ ಬಹುಭಾಷೆ ಬಳಕೆ
Next articleಲಂಡನ್ ಕೆಫೆಯಲ್ಲಿ ʼಮೇಘʼ ಶಖೆ

LEAVE A REPLY

Please enter your comment!
Please enter your name here