ಬೆಂಗಳೂರು: ಭಾನುವಾರ ಬಂತೆಂದರೆ ಸಾಕು, ಸಿಲಿಕಾನ್ ಸಿಟಿ ಮಂದಿಗೆ ಎಲ್ಲಿಲ್ಲದ ಸಂಭ್ರಮ. ವಾರವಿಡೀ ದುಡಿದು ಸೋತವರು ಮನೆಯಲ್ಲಿ ಆರಾಮಾಗಿ ಕಾಲ ಕಳೆಯಲು ಬಯಸುತ್ತಾರೆ. ಇನ್ನು ಕೆಲವರು ವಾರದ ಬಾಕಿ ಕೆಲಸಗಳನ್ನು, ಅಂದರೆ ಬಟ್ಟೆ ಒಗೆಯುವುದು, ಮಿಕ್ಸಿ-ಗ್ರೈಂಡರ್ ಕೆಲಸಗಳನ್ನು ಭಾನುವಾರವೇ ಇಟ್ಟುಕೊಂಡಿರುತ್ತಾರೆ.
ಆದರೆ, ಈ ಭಾನುವಾರ (ನವೆಂಬರ್ 23) ಬೆಂಗಳೂರಿನ ಕೆಲ ಭಾಗದ ನಿವಾಸಿಗಳಿಗೆ ಬೆಸ್ಕಾಂ ಶಾಕ್ ನೀಡಿದೆ. ಕೆಪಿಟಿಸಿಎಲ್ (KPTCL) ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ, ನಗರದ ಪ್ರಮುಖ 80ಕ್ಕೂ ಹೆಚ್ಚು ಬಡಾವಣೆಗಳಲ್ಲಿ ದಿನವಿಡೀ ವಿದ್ಯುತ್ ಇರುವುದಿಲ್ಲ.
ಯಾಕೆ ಪವರ್ ಕಟ್? ವಿದ್ಯುತ್ ಸರಬರಾಜು ಜಾಲದಲ್ಲಿನ ದೋಷಗಳನ್ನು ಸರಿಪಡಿಸಲು ಮತ್ತು ನಿರ್ವಹಣೆಗಾಗಿ ಕೆಪಿಟಿಸಿಎಲ್ ಆಗಾಗ ಶಟ್ಡೌನ್ ತೆಗೆದುಕೊಳ್ಳುವುದು ಅನಿವಾರ್ಯ. ಈ ಭಾನುವಾರ ಯಲಹಂಕ, ಪೀಣ್ಯ ಮತ್ತು ಕಮ್ಮಗೊಂಡನಹಳ್ಳಿ ಸುತ್ತಮುತ್ತಲಿನ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾಮಗಾರಿ ನಡೆಯಲಿದೆ. ಹೀಗಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ಕರೆಂಟ್ ಕಡಿತಗೊಳಿಸಲಾಗುತ್ತಿದೆ.
ಎಲ್ಲೆಲ್ಲಿ, ಯಾವ ಸಮಯದಲ್ಲಿ ಕರೆಂಟ್ ಇರಲ್ಲ? ಸಂಪೂರ್ಣ ಪಟ್ಟಿ ಇಲ್ಲಿದೆ:
- ಯಲಹಂಕ ವಲಯ (ಸಮಯ: ಬೆಳಗ್ಗೆ 11:00 ರಿಂದ ಸಂಜೆ 04:30 ರವರೆಗೆ) ಉತ್ತರ ಬೆಂಗಳೂರಿನ ಪ್ರಮುಖ ಭಾಗವಾದ ಯಲಹಂಕದ 66/11 ಕೆವಿ ಉಪಕೇಂದ್ರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಲಿದೆ.
ಬಾಧಿತ ಪ್ರದೇಶಗಳು: ಕೆಎಂಎಫ್, ಯಲಹಂಕ ನ್ಯೂ ಟೌನ್ (208, 407, ಬಿ ಸೆಕ್ಟರ್), ಸಿಬಿ ಸಾಂದ್ರ, ಅಲ್ಲಾಳಸಂದ್ರ, ಮಾರುತಿ ನಗರ, ಶಾರದ ನಗರ, ಜನಪ್ರಿಯ ಲೇಔಟ್, ಕೋಗಿಲು, ಬಾಗಲೂರು ಕ್ರಾಸ್, ವೆಂಕಟಾಲ, ಬಿಎಸ್‌ಎಫ್ ಕ್ಯಾಂಪಸ್, ಐಎಎಫ್, ದ್ವಾರಕಾನಗರ, ರಾಯಣ್ಣ ಸ್ಕೂಲ್ ಮತ್ತು ಆರ್‌ಎಂಜೆಡ್ ಗ್ಯಾಲೇರಿಯಾ ಸುತ್ತಮುತ್ತಲಿನ ಪ್ರದೇಶಗಳು.
- ಕಮ್ಮಗೊಂಡನಹಳ್ಳಿ ವಲಯ (ಸಮಯ: ಬೆಳಗ್ಗೆ 10:00 ರಿಂದ ಸಂಜೆ 05:00 ರವರೆಗೆ) ಇಲ್ಲಿ ಬೆಳಿಗ್ಗೆ ಬೇಗನೆ ವಿದ್ಯುತ್ ಕಡಿತವಾಗಲಿದ್ದು, ಸಂಜೆಯವರೆಗೂ ಇರುವುದಿಲ್ಲ.
ಬಾಧಿತ ಪ್ರದೇಶಗಳು: ಕಮ್ಮಗೊಂಡನಹಳ್ಳಿ ಮುಖ್ಯರಸ್ತೆ, ರಾಘವೇಂದ್ರ ಬಡಾವಣೆ, ಅಬ್ಬಿಗೆರೆ ಮತ್ತು ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯಾ, ಸಿಂಗಾಪುರ, ವಡೇರಹಳ್ಳಿ, ಲಕ್ಷ್ಮೀಪುರ, ನಿಸರ್ಗ ಬಡಾವಣೆ, ಕೆಂಪೇಗೌಡ ಲೇಔಟ್, ಕುವೆಂಪು ನಗರ, ಕಾಶಿರಾಮ ನಗರ, ವಿಶ್ವೇಶ್ವರಯ್ಯ ಲೇಔಟ್, ಬ್ರಿಗೇಡ್ ಪಾರ್ಕ್ ಸೈಡ್ ಅಪಾರ್ಟ್ಮೆಂಟ್ಸ್ ಮತ್ತು ಸುತ್ತಮುತ್ತಲಿನ ಏರಿಯಾಗಳು.
- ಪೀಣ್ಯ ಮತ್ತು ಲಗ್ಗೆರೆ ಸುತ್ತಮುತ್ತ (ಸಮಯ: ಬೆಳಗ್ಗೆ 10:00 ರಿಂದ ಸಂಜೆ 05:00 ರವರೆಗೆ) ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯದಲ್ಲಿಯೂ ಭಾನುವಾರ ಪವರ್ ಕಟ್ ಬಿಸಿ ತಟ್ಟಲಿದೆ.
ಬಾಧಿತ ಪ್ರದೇಶಗಳು: ಪೀಣ್ಯ 10 ಮತ್ತು 11ನೇ ಮುಖ್ಯರಸ್ತೆ, ಉಡುಪಿ ಹೋಟೆಲ್ ಏರಿಯಾ, ಲಗ್ಗೆರೆ ಹಳೆ ಗ್ರಾಮ, ಲವಕುಶ ನಗರ, ಚೌಡೇಶ್ವರಿ ನಗರ, ಟಿವಿಎಸ್ ಕ್ರಾಸ್, ಇಸ್ರೋ ಲೇಔಟ್, ಯಶವಂತಪುರ ಇಂಡಸ್ಟ್ರಿಯಲ್ ಏರಿಯಾ, ಎಚ್‌ಎಂಟಿ ರಸ್ತೆ, ಪೀಣ್ಯ ಪೊಲೀಸ್ ಠಾಣೆ ರಸ್ತೆ, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿ ನಗರ, ಮುನೇಶ್ವರ ಟೆಂಪಲ್ ರೋಡ್, ರಾಜರಾಜೇಶ್ವರಿ ನಗರ, ಆಕಾಶ್ ಥಿಯೇಟರ್ ರಸ್ತೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ ಮತ್ತು ಇಎಸ್‌ಐ ಆಸ್ಪತ್ರೆ ಸುತ್ತಮುತ್ತ.
ಸಾರ್ವಜನಿಕರಿಗೆ ಬೆಸ್ಕಾಂ ಮನವಿ: ಭಾನುವಾರ ರಜಾ ದಿನವಾದ್ದರಿಂದ ನೀರಿನ ಬಳಕೆ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕರು ಶನಿವಾರ ರಾತ್ರಿಯೇ ಅಥವಾ ಭಾನುವಾರ ಬೆಳಿಗ್ಗೆ ಕರೆಂಟ್ ಹೋಗುವ ಮುನ್ನವೇ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರು ತುಂಬಿಸಿಕೊಳ್ಳುವುದು ಉತ್ತಮ. ಮೊಬೈಲ್, ಲ್ಯಾಪ್‌ಟಾಪ್‌ಗಳ ಚಾರ್ಜಿಂಗ್ ಬಗ್ಗೆಯೂ ಗಮನಹರಿಸಿ.
ವಿದ್ಯುತ್ ವ್ಯತ್ಯಯದಿಂದಾಗುವ ಅನಾನುಕೂಲಕ್ಕೆ ಬೆಸ್ಕಾಂ ವಿಷಾದ ವ್ಯಕ್ತಪಡಿಸಿದ್ದು, ತುರ್ತು ಸಹಾಯಕ್ಕಾಗಿ 1912 ಸಹಾಯವಾಣಿಗೆ ಕರೆ ಮಾಡಬಹುದು ಎಂದು ತಿಳಿಸಿದೆ. ಕಾಮಗಾರಿ ಬೇಗ ಮುಗಿದರೆ, ನಿಗದಿಗಿಂತ ಮೊದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

























