ಬೆಂಗಳೂರು: ರಾಜ್ಯದ ಮೆಕ್ಕೆಜೋಳ ಬೆಲೆ ದಿಢೀರ್ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ, ಬೆಳೆಗಾರ ರೈತರು ಅನುಭವಿಸಿರುವ ಸಂಕಷ್ಟ, ಖರೀದಿ ಕೇಂದ್ರಗಳ ವಿಳಂಬ ಹಾಗೂ ಮಾರುಕಟ್ಟೆ ಅಸ್ಥಿರತೆ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಕೃಷಿ, ಆಹಾರ ಇಲಾಖೆ, ಡಿಸ್ಟಿಲರಿ ಪ್ರತಿನಿಧಿಗಳು ಮತ್ತು ನಾಫೆಡ್ ಅಧಿಕಾರಿಗಳು ಭಾಗವಹಿಸಿದರು.
ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು:
ಉತ್ಪಾದನೆ ಹೆಚ್ಚಳ – ಮಾರುಕಟ್ಟೆ ಕುಸಿತ: ಒಂದು ಕಡೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳವಾಗಿದೆ. ಈ ಬಗ್ಗೆ ಮಾಹಿತಿ ಇದ್ದೂ ಕೂಡ ಕೇಂದ್ರ ಸರ್ಕಾರ ವಿದೇಶಗಳಿಂದ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಆಮದು ಮಾಡಿಕೊಂಡಿದೆ. ಇದರಿಂದಾಗಿ ರಾಜ್ಯದ ಮತ್ತು ದೇಶದ ಮೆಕ್ಕೆಜೋಳ ಬೆಳೆದ ರೈತರಿಗೆ ವಿಪರೀತ ಹೊರೆ ಆಗಿದೆ.
ಎಥೆನಾಲ್ ಉತ್ಪಾದನೆಗೆ ರಾಜ್ಯಕ್ಕೆ ಕೇವಲ ಕಡಿಮೆ ಕೋಟಾ: ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಕೋಟಾ ಪ್ರಮಾಣ ಕಡಿಮೆಯಿದ್ದು, ಇದರಿಂದಾಗಿ ಡಿಸ್ಟಿಲರಿಗಳು ಖರೀದಿ ಮಾಡದೇ ನಿರ್ಲಕ್ಷ್ಯ ತೋರಿಸುತ್ತಿವೆ.
ಖರೀದಿ ಸಂಸ್ಥೆಗಳ ನಿರ್ಲಕ್ಷ್ಯ: ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಸಂಗ್ರಹಣೆ ಪ್ರಾರಂಭಿಸುವಂತೆ ಈಗಾಗಲೇ ಕೇಂದ್ರದಿಂದ ಮಾರ್ಗಸೂಚಿ ಇದ್ದರೂ, ನಾಫೆಡ್ ಮತ್ತು NCCF ಇನ್ನೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ. ಇದೇ ವಿಚಾರ ಸಭೆಯಲ್ಲಿ ಗಂಭೀರವಾಗಿ ಚರ್ಚೆಗೆ ಕಾರಣವಾಯಿತು.
ಖಾಸಗಿ ಡಿಸ್ಟಿಲರಿಗಳ ಪಾತ್ರ: ಬೆಲೆ ಕುಸಿತದ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ಶೇಖರಣೆ ಮಾಡಿಕೊಂಡಿರುವ ಡಿಸ್ಟಿಲರಿಗಳು ಈಗ ಖರೀದಿಗೆ ಮುಂದಾಗುತ್ತಿಲ್ಲ. ಇದು ನಿಯಮ ಉಲ್ಲಂಘನೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಸರ್ಕಾರದ ಸಾಧ್ಯ ಕ್ರಮಗಳು: ಕೇಂದ್ರ ಸರ್ಕಾರವನ್ನು ಆಮದು ನಿಯಂತ್ರಿಸಲು ಒತ್ತಾಯಿಸುವುದು ಹಾಗು ತಕ್ಷಣ 8 ಲಕ್ಷ ಟನ್ ಮೆಕ್ಕೆಜೋಳ ಖರೀದಿ ಪ್ರಾರಂಭಿಸಲು ಆದೇಶಿಸುವುದು ಅಲ್ಲದೆ ನಾಫೆಡ್ ಮತ್ತು NCCF ಮೂಲಕ ತಕ್ಷಣ ಖರೀದಿ ಕೇಂದ್ರ ತೆರೆಯುವುದು ಮತ್ತು ಎಥೆನಾಲ್ ಮತ್ತು ಕುಕ್ಕುಟೋದ್ಯಮಗಳಿಗೆ ಖರೀದಿ ಬಾಧ್ಯತೆ ವಿಧಿಸುವುದು
ಸಭೆಯ ನಂತರ ಮಾತನಾಡಿದ ಮುಖ್ಯಂಂತ್ರಿ ಸಿದ್ದರಾಮಯ್ಯ ಅವರು ಬೆಲೆಯಲ್ಲಿ ತೀವ್ರ ಕುಸಿತದಿಂದ ಸಂಕಷ್ಟಗೊಳಗಾದ ರೈತರಿಗೆ ಸರ್ಕಾರ ಕೈಚಾಚಲಿದೆ. ದೇಶದಲ್ಲೇ ಉತ್ಪಾದನೆ ಹೆಚ್ಚು ಇರುವ ಸಮಯದಲ್ಲಿ ಆಮದು ಅಗತ್ಯವಿಲ್ಲ. ಇದನ್ನು ತಡೆಯಲು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ,” ಎಂದರು. ಅಲ್ಲದೆ, ಡಿಸ್ಟಿಲರಿ ಹಾಗೂ ಕುಕ್ಕುಟೋದ್ಯಮದ ಪ್ರತಿನಿಧಿಗಳೊಂದಿಗೆ ತುರ್ತು ಸಭೆ ನಡೆಸಿ ಖರೀದಿ ಬಾಧ್ಯತೆ ವಿಧಿಸಲಾಗುವುದು ಎಂದು ಅವರು ತಿಳಿಸಿದರು.























