ಗದಗ (ಲಕ್ಷ್ಮೇಶ್ವರ): ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಕಳೆದ ಶನಿವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ತೀವ್ರಗೊಂಡಿದ್ದು, ಗುರುವಾರ ಲಕ್ಷ್ಮೇಶ್ವರ ಬಂದ್ ಕರೆ ಸಂಪೂರ್ಣ ಯಶಸ್ವಿಯಾಯಿತು.
ಪಟ್ಟಣದ ಬಹುತೇಕ ಸಂಘ, ಸಂಸ್ಥೆಗಳು ಬೆಂಬಲ ಸೂಚಿಸಿದ್ದರಿಂದ ಬಂದ್ ನೂರಕ್ಕೆ ನೂರು ಯಶಸ್ವಿ ಕಂಡಿತು. ಲಕ್ಷ್ಮೇಶ್ವರದಲ್ಲಿ ಕಳೆದ 5 ದಿನಗಳಿಂದ ಸಮಗ್ರ ರೈತ ಪರ ಹೋರಾಟ ಸಮಿತಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಹೋರಾಟ ಗುರುವಾರ 6ನೇ ದಿನಕ್ಕೆ ಕಾಲಿರಿಸಿದೆ. ಬಂದ್‌ಗೆ ಜಿಲ್ಲೆಯ ವಿವಿಧ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು, ವ್ಯಾಪಾರಸ್ಥರು ಸಾಥ್ ನೀಡಿದ್ದರು. ಮುಂಜಾನೆಯಿಂದಲೇ ಬಹುತೇಕ ಎಲ್ಲ ಅಂಗಡಿ, ಮುಂಗಟ್ಟುಗಳು, ಶಿಕ್ಷಣ, ಸಂಸ್ಥೆಗಳು, ಹೋಟೆಲ್, ಚಿತ್ರಮಂದಿರ, ಬೀದಿಬದಿ ವ್ಯಾಪಾರಸ್ಥರು, ಎಪಿಎಂಸಿ, ಬಜಾರ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಬೆಂಬಲ ಸೂಚಿಸಿದ್ದರಿಂದ ಎಲ್ಲ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿತ್ತು.
ರೈತರ ಹೋರಾಟದ ಕಿಚ್ಚು ತೀವ್ರ ಸ್ವರೂಪ ಪಡೆದುಕೊಂಡ್ಡಿದ್ದರಿಂದ ಪಟ್ಟಣದ ಅಂಗನವಾಡಿ ಕೇಂದ್ರಗಳು, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಗದಗ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಆದೇಶಿಸಿದ್ದರು. ಕೆಲವು ಗ್ರಾಮಗಳಿಗೆ ಬಸ್ ಸಂಚಾರ ಬಂದ್ ಆಗಿದ್ದವು.
ಗುರುವಾರ ಮುಂಜಾನೆ ಪಟ್ಟಣದ ಪೇಟೆ ಹನುಮಂತದೇವರ ದೇವಸ್ಥಾನದಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಹಲಗೆ, ಭಜನೆ, ಎತ್ತು, ಚಕ್ಕಡಿ ಸಮೇತರಾಗಿ ಸರಕಾರ ಧೋರಣೆಯ ವಿರುದ್ಧ ಘೋಷಣೆ ಕೂಗುತ್ತಾ, ಶಿಗ್ಲಿ ನಾಕಾ ಬಳಿ ಸಂಗೊಳ್ಳಿ ರಾಯಣ್ಣ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಸರಕಾರವು ತನ್ನ ನಿರ್ಧಾರ ಘೋಷಣೆ ಮಾಡದಿರುವದಕ್ಕೆ ಅರೆಬೆತ್ತಲೆಯಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕುಂದಗೋಳ, ಹೂವಿನಶಿಗ್ಲಿ, ಬಟಗುರ್ಕಿ, ಮಳೆಮಲ್ಲಿಕಾರ್ಜುನ ಶ್ರೀಗಳು ಮತ್ತು ಹೋರಾಟದ ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ರವಿಕಾಂತ ಅಂಗಡಿ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ಪೂರ್ಣಾಜಿ ಖರಾಟೆ, ಬಸಣ್ಣ ಬೆಂಡಿಗೇರಿ ಸೇರಿ ಸಾವಿರಾರು ಜನರು ಹೋರಾಟದಲ್ಲಿ ಭಾಗವಹಿಸಿದ್ದರು.
ಉಪವಾಸ ಬಿಡದ ಶ್ರೀಗಳು ವೇದಿಕೆಯಲ್ಲೇ ಅಸ್ವಸ್ಥ: ರೈತರ ಹೋರಾಟದಲ್ಲಿ ಭಾಗವಹಿಸಿ ಕಳೆದ ನಾಲ್ಕು ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಆದರಳ್ಳಿ ಗವಿಮಠದ ಡಾ. ಕುಮಾರ ಮಹಾರಾಜರು ಗುರುವಾರ ವೇದಿಕೆಯಲ್ಲಿಯೆ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಿ ಅಂಬ್ಯುಲೆನ್ಸ್ ಮೂಲಕ ಗದಗ ಜಿಮ್ಸ್‌ಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ.
ಕಳೆದ ಐದು ದಿನಗಳಿಂದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಶ್ರೀಗಳು ಹೋರಾಟ ವೇದಿಕೆಯಲ್ಲಿ ಕುಳಿತ ಜಾಗ ಬಿಟ್ಟು ಏಳದೆ ನೀರು – ಆಹಾರ ಸೇವಿಸದೆ ಉಪವಾಸ ಕೈಗೊಂಡಿದ್ದರು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಅನೇಕ ಮುಖಂಡರು ಉಪವಾಸ ಕೈಬಿಡುವಂತೆ ಮಾಡಿಕೊಂಡ ಮನವಿಯನ್ನು ಶ್ರೀಗಳು ತಿರಸ್ಕರಿಸಿದ್ದರು. ಉಪವಾಸದಿಂದಾಗಿ ಅವರ ಸಕ್ಕರೆ ಪ್ರಮಾಣ, ರಕ್ತದೊತ್ತಡ ಕಡಿಮೆಯಾಗುತ್ತಿತ್ತು, ಅಲ್ಲದೆ ಬೆನ್ನು, ಕಾಲು ನೋವುಗಳು ಬಾಧಿಸುತ್ತಿದ್ದವು. ಅವರು ತೀವ್ರ ನಿತ್ರಾಣಗೊಂಡಿದ್ದರು. ಆದರೂ ರೈತರ ಸಲುವಾಗಿ ಪ್ರಾಣ ನೀಡುತ್ತೇನೆ ಹೊರತು ಜಾಗೆ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.


























