ಗದಗ: ಗದಗ-ಬೆಟಗೇರಿ ನಗರದಲ್ಲಿ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ಕೋರಿ 14 ವರ್ಷದ ಬಾಲಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಲವತ್ತುಕೊಂಡಿದ್ದಾನೆ.
ಬೆಟಗೇರಿಯ ಶಿವಾಜಿ ನಗರದ ಅವ್ಯವಸ್ಥೆ ಬಗ್ಗೆ ಸೆಂಟ್ ಜೋನ್ಸ್ ಶಾಲೆಯಲ್ಲಿ ಎಂಟನೇಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಸಾಯಿನಾಥ ಕಾಮಾರ್ತಿ ಪ್ರಧಾನಿಗೆ ಪತ್ರ ಬರೆದು ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಆಟವಾಡಲು ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ಸಾರ್ವಜನಿಕರು ನಡೆಯಲು ಅಸಾಧ್ಯವಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾನೆ.
ನಿತ್ಯ ಸಾರ್ವಜನಿಕರು ಬಿದ್ದು ಕೈಕಾಲು ಮುರಿದುಕೊಳ್ಳುವುದು ಸಾಮಾನ್ಯವಾಗಿದೆ. ಕುಡಿಯುವ ನೀರಿನ ತೊಂದರೆ ಇದೆ. ದೂರದ ಪ್ರದೇಶಕ್ಕೆ ತೆರಳಿ ಕುಡಿಯುವ ನೀರು ತರುವಂತಹ ಪರಿಸ್ಥಿತಿ ಇದೆ. ಶಿವಾಜಿ ನಗರದಲ್ಲಿನ ಅವ್ಯವಸ್ಥೆ ನಿವಾರಿಸುವಂತೆ ನಗರಸಭೆಯ ಸದಸ್ಯ ರಾಘವೆಂದ್ರ ಯಳವತ್ತಿ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದಯವಿಟ್ಟು ತಾವಾದರೂ ಶಿವಾಜಿ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ನಗರಸಭೆಗೆ ಸೂಚಿಸುವ ಮೂಲಕ ಸಾರ್ವಜನಿಕರಿಗೆ ಉಪಕರಿಸಬೇಕೆಂದು ಬಾಲಕ ಪತ್ರದಲ್ಲಿ ಆಗ್ರಹಿಸಿದ್ದಾನೆ.

























