ಬೆಳಗಾವಿ: ಶೀತಗಾಳಿ ಚಳಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಮನೆಯೊಳಗೆ ಹಾಕಿಕೊಂಡ ಶಿಗಡಿ ಒಲೆಯ ಹೊಗೆಯಿಂದ ಉಸಿರುಕಟ್ಟಿದ ಪರಿಣಾಮ ಮನೆಯಲ್ಲಿ ಮಲಗಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಇಲ್ಲಿನ ಅಮನನಗರದಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ರಿಹಾನ್ (22), ಸರಫರಾಜ ಹರಪನಹಳ್ಳಿ (22) ಮೋಯಿನ್‌ನಲಬಂದ(23) ಎಂದು ಗುರುತಿಸಲಾಗಿದ್ದು, ಮತ್ತೋರ್ವ ಯುವಕ ಶಾನವಾಜ್ ತೀವ್ರ ಅಸ್ವಸ್ಥನಾಗಿರುವ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿಲ್ಲಾಕೆರೆ ಪಕ್ಕದಲ್ಲಿಯೇ ಅಮಾನ್‌ನಗರವಿದ್ದು, ಇದೀಗ ಚಳಿಗಾಲದ ಕುಳಿರ್ ಗಾಳಿ ಮತ್ತು ತಂಪು ವಾತಾವರಣದಿಂದ ತಪ್ಪಿಸಿಕೊಳ್ಳುವುದಕ್ಕೆ ಈ ಯುವಕರು ತಾವು ಮಲಗಿದ್ದ ಕೊಠಡಿಯಲ್ಲಿ ಶಾಖ ಹೆಚ್ಚಿಸುವುದಕ್ಕೆ ಶಿಗಡಿ ಒಲೆಯನ್ನು ಹಚ್ಚಿದ್ದಾರೆ. ಆದರೆ ಒಲೆಯ ಹೊಗೆ ಕೊಠಡಿ ಪೂರ್ತಿ ಹರಡಿ ಇವರಿಗೆ ಉಸಿರಾಟದ ತೊಂದರೆ ಕಂಡು ಬಂದಿದೆ. ಕೊನೆಗೆ ಉಸಿರುಕಟ್ಟಿ ಈ ಮೂವರೂ ಸಾವನ್ನಪ್ಪಿರುವ ಬಗ್ಗೆ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಮಾಳಮಾರುತಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಉತ್ತರ ಕ್ಷೇತ್ರದ ಶಾಸಕ ರಾಜೂ ಸೇಠ ಅವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

























