ಬೆಂಗಳೂರು: ದೆಹಲಿ ಪ್ರವಾಸ ಮುಗಿಸಿಕೊಂಡು ರಾಜ್ಯಕ್ಕೆ ಡಿಢೀರನೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಬೆಳಗ್ಗೆ ನೇರವಾಗಿ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು.
ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಹಾಗೂ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಗೆ ತೆರಳಿದ್ದ ಸಿಎಂ, ಮುಂಜಾನೆಯೇ ಬೆಂಗಳೂರಿಗೆ ಬಂದಿಳಿದರು. ವಿಮಾನ ನಿಲ್ದಾಣದಿಂದ ಯಾವುದೇ ಕಾರ್ಯಕ್ರಮಗಳಿಗೆ ತೆರಳದೇ ನೇರವಾಗಿ ಆಸ್ಪತ್ರೆಗೆ ಬಂದು, ಐಸಿಯುನಲ್ಲಿ ಚಿಕಿತ್ಸೆಯಲ್ಲಿರುವ ಪತ್ನಿಯ ಆರೋಗ್ಯ ಕುರಿತು ವೈದ್ಯರೊಂದಿಗೆ ಸುಮಾರು ಅರ್ಧಗಂಟೆ ಕಾಲ ಚರ್ಚಿಸಿದರು.
ಮಾಧ್ಯಮ ಪ್ರತಿನಿಧಿಗಳು ಆರೋಗ್ಯದ ಬಗ್ಗೆ ಕೇಳಿದಾಗ ಸಿದ್ದರಾಮಯ್ಯ ಮಾತನಾಡಿ ಆರೋಗ್ಯ ಸ್ಥಿತಿಯು ಈಗ ಸ್ಥಿರವಾಗಿದೆ. ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಶ್ವಾಸಕೋಶದಲ್ಲಿ ಸೋಂಕು ಇದ್ದರೂ, ಈಗ ಸುಧಾರಣೆ ಕಾಣುತ್ತಿದೆ. ಇನ್ನೂ 2–3 ದಿನಗಳು ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಪಾರ್ವತಿ ಸಿದ್ದರಾಮಯ್ಯ ಅವರಿಗೆ ನಿನ್ನೆ ಸಂಜೆ ಶ್ವಾಸಕೋಶ ಸಂಬಂಧಿತ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ತಕ್ಷಣವೇ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಂಡ ನಿರಂತರ ನಿಗಾದಲ್ಲಿದ್ದು, ಆಮ್ಲಜನಕ ಪೂರೈಕೆ ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ಮುಂದುವರಿಸಿದೆ.
ಸಿಎಂ ಹಠಾತ್ ಆಗಿ ಆಸ್ಪತ್ರೆಗೆ ಭೇಟಿ ನೀಡಿರುವುದು, ಪತ್ನಿಯ ಆರೋಗ್ಯದ ಬಗ್ಗೆ ಅವರು ತೋರಿದ ಕಾಳಜಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

























