ಎಂಜಿನಿಯರಿಂಗ್ ಓದಿದ ಹುಡುಗ ಕಟ್ಟಿದ್ದು ಉದ್ದಿಮೆ ಸಾಮ್ರಾಜ್ಯ

0
66

ಬೆಳಗಾವಿಯಿಂದ-ಬೋಯಿಂಗ್‌ವರೆಗೆ | ಜಗತ್ತೇ ತಿರುಗಿ ನೋಡುವಂತೆ ಮಾಡಿದ ಏಕಸ್ ಕಂಪನಿ ಸ್ಥಾಪಕ ಅರವಿಂದ್ ಮೆಳ್ಳಿಗೇರಿ ಯಶೋಗಾಥೆ

`ನೀವು ಜಗತ್ತಿನ ಯಾವ ಮೂಲೆಯಲ್ಲಾದರೂ ವಿಮಾನ ಹತ್ತಿ. ನಮ್ಮ ಕಂಪನಿ ತಯಾರಿಸಿದ ಬಿಡಿಭಾಗಗಳು ಇಲ್ಲದ ವಿಮಾನಗಳೇ ಇಲ್ಲ’ ಎನ್ನುವುದು ಏಕಸ್ ಕಂಪನಿಯ ಸ್ಥಾಪಕ ಅರವಿಂದ ಮೆಳ್ಳಿಗೇರಿ ಅವರ ಮಾತುಗಳು. ಪ್ರಮುಖವಾಗಿ ವಿಮಾನಗಳ ಬಿಡಿಭಾಗಗಳನ್ನು ತಯಾರಿಸುವ ಏಕಸ್ ಕಂಪನಿಯನ್ನು ಮೇಕ್ ಇನ್ ಇಂಡಿಯಾ ಕಲ್ಪನೆಯ ಅಡಿಯಲ್ಲಿ 2006ರಲ್ಲಿ ಅರವಿಂದ ಮೆಳ್ಳಿಗೇರಿ ಆರಂಭಿಸಿದರು.

ಬೆಂಗಳೂರಿನಲ್ಲಿ ಸಣ್ಣ ಇಂಜಿನಿಯರಿಂಗ್ ಆಫೀಸಿನಿಂದ ಇಡೀಯ ಜಗತ್ತೇ ಹಿಂದಿರುಗಿ ನೋಡುವಂತೆ ಕಂಪನಿ ಕಟ್ಟಿ ಬೆಳಸಿದ ಅವರ ಪರಿಶ್ರಮ ನಿಜಕ್ಕೂ ಸ್ಫೂರ್ತಿದಾಯಕ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ಅರವಿಂದ ಚಿಕ್ಕ ವಯಸ್ಸಿನಲ್ಲೇ ತಂದೆ ಕಳೆದುಕೊಂಡರು. ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ತಾಯಿ ಹಾಗೂ ಸಹೋದರರ ಆಶ್ರಯದಲ್ಲಿ ಬೆಳೆದ ಅವರು ತಮ್ಮೂರಿನಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಪಡೆದರು.

ತಾಯಿಯ ಪ್ರೋತ್ಸಾಹ ಹಾಗೂ ಓದಿನಲ್ಲಿ ಆಸಕ್ತಿಯಿಂದಾಗಿ ನ್ಯಾಷನಲ್ ಇನ್ಸಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್‌ಐಟಿ)ಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಅರವಿಂದ ಸ್ಕಾಲರ್‌ಶಿಪ್ ಪಡೆದು ಮಾಸ್ಟರ್ ಡ್ರಿಗ್ರಿಗೆಂದು ಅಮೆರಿಕಗೆ ಹೋದರು. ಪೆನ್ ಸ್ಟೇಟ್ ಯುನಿವರ್ಸಿಟಿಯಲ್ಲಿ ರೋಬೋಟಿಕ್ಸ್ ಓದುವಾಗಲೇ ನವೋದ್ಯಮದ ಕನಸು ಚಿಗುರಿತ್ತು.

ಉನ್ನತ ಶಿಕ್ಷಣ ಪಡೆದು ವಾಪಸ್ ಬೆಂಗಳೂರಿನೆಗ ಬಂದು ತಮ್ಮ ಬಾಲ್ಯದ ಗೆಳೆಯ ಅಜಿತ್ ಪ್ರಭು ಜತೆ ಸೇರಿ 1997ರಲ್ಲಿ ಕ್ವೇಸ್ಟ್ ಗ್ಲೋಬಲ್ ಎಂಬ ಕಂಪನಿ ಸ್ಥಾಪಿಸಿದರು. ಇಂಜಿನಿಯರಿಂಗ್ ಸರ್ವೀಸ್ ಪೂರೈಕೆಗೆಂದು ಶುರುವಾದ ಕಂಪನಿಯೇ ಇದೀಗ ಏಕಸ್ ಎಂಬ ಹೆಸರಿನಲ್ಲಿ ಬೃಹತ್ ಕಂಪನಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಮೇಕ್ ಇನ್ ಇಂಡಿಯಾ ಸ್ಫೂರ್ತಿ: ಜಗತ್ತಿನಲ್ಲಿ ಯಾವುದೇ ಸ್ಮಾಟ್‌ಫೋನ್, ಚಿಪ್, ವಿಮಾನ ಅಥವಾ ಯಾವುದೇ ವಸ್ತು ತಯಾರಿಕೆಗೆ ಅದರದೇ ಆದ ಬಿಡಿಭಾಗಗಳ ಅವಶ್ಯಕತೆ ಇರುತ್ತದೆ. ಭಾರತದಲ್ಲಿ ಪ್ರತಿಷ್ಠಿತ ಆ್ಯಪಲ್ ಕಂಪನಿಯ ಫೋನ್‌ಗಳನ್ನು ತಯಾರಾದರೂ ಅದರ ಬಿಡಿಭಾಗಗಳು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕು. ಆದರೆ ಅರವಿಂದ ಹೇಳುವಂತೆ ದೇಶದ ಯಾವುದೇ ಕಂಪನಿಗಳ ಉತ್ಪನ್ನ ತಯಾರಿಕೆಗೆ ಚೀನಾ ಬಿಡಿಭಾಗಗಳನ್ನು ರಫ್ತು ಮಾಡುತ್ತದೆ. ಉದ್ಯಮ ಜಗತ್ತಿನಲ್ಲಿ ‘ಚೀನಾ ಅಪ್ರೋಚ್’ ಎಂಬ ಮಾತಿದೆ.

ಚೀನಾದ ಅವಲಂಬನೆ ಸುಳಿಯಿಂದ ಭಾರತ ಹೊರಬರುವ ಅವಶ್ಯಕತೆ ಇತ್ತು. ಮೇಕ್ ಇನ್ ಇಂಡಿಯಾ ಕಲ್ಪನೆಯಲ್ಲಿ ಸ್ವದೇಶದಲ್ಲಿ ತಯಾರಾದ ಉತ್ಪನ್ನಗಳು ಇಲ್ಲಿಂದಲೇ ಜಗತ್ತಿಗೆ ರಫ್ತಾಗಬೇಕು ಎಂಬ ಮಹದಾಸೆಯಿಂದ ಆರಂಭಿಸಿದ ಕಂಪನಿಯೇ ಏಕಸ್ ಅಂತಾರೆ ಅರವಿಂದ.

ಉತ್ತರ ಕರ್ನಾಟಕವೇ ಕಾರ್ಯ ಸ್ಥಾನ: ಏರ್‌ಬಸ್ ಮತ್ತು ಬೋಯಿಂಗ್ ಸಂಸ್ಥೆಗಳಿಗೆ ಏಕಸ್ ಕಂಪನಿ ಬಿಡಿಭಾಗಗಳನ್ನು ತಯಾರಿಸಿಕೊಡುತ್ತದೆ. ಪ್ಯಾರಿಸ್, ಟೆಕ್ಸಾಸ್ ಸೇರಿದಂತೆ ಬೇರೆ ಬೇರೆ ಕಂಪನಿಯ ಬ್ರ್ಯಾಂಚ್‌ಗಳಿವೆ. ಆದರೂ ಸಹ ಅರವಿಂದ ಏಕಸ್ ಕಂಪನಿ ಕೇಂದ್ರ ಕಚೇರಿ ಮತ್ತು ಉತ್ಪಾದಕ ಘಟಕ ಸ್ಥಾಪನೆಗೆ ಆಯ್ದುಕೊಂಡಿದ್ದು ಕುಂದಾನಗರಿ ಬೆಳಗಾವಿ.

ಅರವಿಂದ ಮೆಳ್ಳಿಗೇರಿ ಕಂಪನಿ ಸ್ಥಾಪಿಸಲು ದೇಶ ಹಾಗೂ ಹೊರದೇಶದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಸಹ ಉತ್ತರ ಕರ್ನಾಟಕವನ್ನು ಮ್ಯಾನುಫ್ಯಾಕ್ಚರಿಂಗ್ ಹಬ್ ಮಾಡಬೇಕೆಂದು ಅಲ್ಲಿಯೇ ಕಂಪನಿ ಆರಂಭಿಸಿದರು. ಬೆಳಗಾವಿಯಲ್ಲಿ 260 ಎಕರೆ ವಿಸ್ತೀರ್ಣದಲ್ಲಿ ಏರೋಸ್ಪೇಸ್ ಘಟಕ ಹಾಗೂ ಚೀನಾಗೆ ಸಡ್ಡು ಹೊಡೆಯುವಂತೆ ಕೊಪ್ಪಳದ ಕುಕನೂರು ಸಮೀಪದಲ್ಲಿ 400 ಎಕರೆ ವಿಸ್ತೀರ್ಣದಲ್ಲಿ ಟಾಯ್ ಕ್ಲಸ್ಟರ್ ಸ್ಥಾಪಿಸಿದರು.

ಆ ಮೂಲಕ ಉತ್ತರ ಕರ್ನಾಟಕ ಭಾಗದ 40,000 ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷಕ್ಕೂ ಅಧಿಕ ಜನರಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿದ ಶೇಯಸ್ಸು ಅರವಿಂದ ಮೆಳ್ಳಿಗೇರಿ ಅವರದ್ದು.

Previous articleಮಾಜಿ ಪ್ರಧಾನಿಗೆ ಮರಣದಂಡನೆ: ಶೇಖ್ ಹಸೀನಾರನ್ನು ಬಾಂಗ್ಲಾಕ್ಕೆ ಹಸ್ತಾಂತರಿಸುತ್ತಾ ಭಾರತ? ಇಲ್ಲಿದೆ ಅಸಲಿ ಸತ್ಯ!

LEAVE A REPLY

Please enter your comment!
Please enter your name here