ಬೆಳಗಾವಿ ಮೃಗಾಲಯ ಸಾವಿನ ಪಂಜರ!

0
51

`ಗಳಲೆ ರೋಗ’ ಎಂದು ಅರಣ್ಯ ಇಲಾಖೆ ಕೈ ತೊಳೆದುಕೊಳ್ಳುತ್ತಿದೆಯೇ?

ವಿಲಾಸ ಜೋಶಿ

ಸಂ.ಕ.ಸಮಾಚಾರ ಬೆಳಗಾವಿ: ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯ ಇದೀಗ ರಾಜ್ಯದ ವನ್ಯಜೀವಿ ಸಂರಕ್ಷಣೆಯ ನಕ್ಷೆಯಲ್ಲಿ ಸಾವಿನ ಪಂಜರ ಆಗಿ ಪರಿವರ್ತನೆಯಾಗಿದೆ. ಮೂರೇ ದಿನಕ್ಕೆ 30 ಕೃಷ್ಣಮೃಗಗಳ ಸಾಮೂಹಿಕ ಸಾವು! ಎಂತಹವರ ಹೃದಯವಾದರೂ ಮರುಗಬೇಕು.

ಇದಕ್ಕೆ “ಗಳಲೆ ರೋಗ ಕಾರಣ…” ಎಂಬ ಒಂದು ಸಾಲಿನ ಕಾರಣ ಹೇಳಿ ಸಾವಿನ ಪ್ರಕರಣಕ್ಕೆ ತಿಲಾಂಜಲಿ ಕೊಡುವ ಪ್ರಯತ್ನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೆಲವರ ಪ್ರಕಾರ ಗಳಲೆ ರೋಗ ಬಂದರೆ ಪ್ರಾಣಿ ನಿಧಾನವಾಗಿ ದುರ್ಬಲವಾಗುತ್ತದೆ. ಒಟ್ಟಿಗೆ ಒಂದೇ ಕಾಲದಲ್ಲಿ 30 ಮೃಗಗಳು ಕುಸಿದುಬೀಳುವುದು ವೈದ್ಯಕೀಯವಾಗಿ ಅಸಾಧ್ಯ. ಅದರಲ್ಲೂ ಮೃಗಾಲಯದಲ್ಲಿದ್ದ 38 ಮೃಗಗಳಲ್ಲಿ 30 ಸತ್ತು, ಕೇವಲ 8 ಜೀವಂತ ಉಳಿಯುವುದು…ಎಂದರೆ ಇದು ರೋಗವಲ್ಲ. ಇದು ವ್ಯವಸ್ಥೆಯ ದೋಷ ಎಂಬುದು ವನ್ಯಜೀವಿ ತಜ್ಞರ ಮಾತು.

ಪೋಸ್ಟ್ಮಾರ್ಟಂ ವರದಿ ಬರುವ ಮೊದಲು `ರೋಗ’ಕ್ಕೆ ಮುದ್ರೆ: ಕೃಷ್ಣಮೃಗಗಳ ಪೋಸ್ಟ್ಮಾರ್ಟ್ಂ ಭಾನುವಾರ ಬೆಳಿಗ್ಗೆ ಮಾಡಲಾಗಿದೆ, ಅದರ ವರದಿಯನ್ನು ಬನ್ನೇರುಘಟ್ಟಕ್ಕೆ ಕಳಿಸಲಾಗಿದೆ, ಇನ್ನೂ ವರದಿ ಬರುವುದು ಬಹುಶಃ ಒಂದೆರಡು ದಿನ ಆಗಬಹುದು, ಆಹಾರ-ನೀರು ಮಾದರಿ ಪರೀಕ್ಷೆಗೂ ಕಳುಹಿಸಿಲ್ಲ. ಆದರೂ ಇಲಾಖೆ ಮೊದಲ ದಿನವೇ “ಗಳಲೆ ರೋಗ!” ಎಂದು ತೀರ್ಪು ಪ್ರಕಟಿಸಿದೆ. ಇದೆಲ್ಲ ಸಂಗತಿಯನ್ನು ಗಮನಿಸಿದರೆ ಇದನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ ಎನ್ನುವುದು ಸ್ಪಷ್ಟ.

ರೋಗದ ಹಿಂದಿನ `ವಾಸ್ತವ’ ಎಂದರೆ ಪೋಷಕಾಂಶ ಕೊರತೆ, ನೀರು ಸಮಸ್ಯೆ, ಜೈವ ಸುರಕ್ಷತೆಯಲ್ಲಿ ಭಾರೀ ಲೋಪ ಎದ್ದು ಕಾಣುತ್ತದೆ. ಅಯೋಡಿನ್ ಕೊರತೆ-ಆಹಾರ ನಿರ್ಲಕ್ಷ್ಯ- ಅಯೋಡಿನ್-ಖನಿಜ ಮಿಶ್ರಣ ಮೂರೂ ತಿಂಗಳಿನಿಂದ ನೀಡದ ದಾಖಲೆ. ಥೈರಾಯ್ಡ್ ತೊಂದರೆಗಳಿಗೆ ಇದು ನೇರ ಕಾರಣ. ನೀರಿನ ಗುಣಮಟ್ಟ ಕೆಡುಕು, ಕೊಳವೆಗಳಲ್ಲಿ ಹಸಿರು ಮಸುಕು; ನೀರು ಶುದ್ಧೀಕರಣ ದಾಖಲೆಯೇ ಇಲ್ಲ.

ಜೈವ ಸುರಕ್ಷತಾ ನಿಯಮ ಉಲ್ಲಂಘನೆ. ಆರೋಗ್ಯ ದಾಖಲೆಗಳಲ್ಲಿ ಗೊಂದಲ, ಕಳೆದ ತಿಂಗಳ ಮೃಗಗಳ ಆರೋಗ್ಯ ರಿಜಿಸ್ಟರ್ `ಮಿಸ್ಸಿಂಗ್’. ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಕೊರತೆ, ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಮಾನಿಟರಿಂಗ್ ನಾಮಮಾತ್ರ ಇಂತಹ ಲೋಪಗಳೂ ಕಂಡುಬರುತ್ತಿವೆ.

ಅರಣ್ಯ ಇಲಾಖೆ ಮೌನ: ಮೊದಲ ಅಂದರೆ ಎರಡು ದಿನಗಳ ಹಿಂದೆ 8 ಮೃಗಗಳು ಸತ್ತ ಕ್ಷಣವೇ `ರೋಗ’ ಎಂದು ಹೇಗೆ ಘೋಷಿಸಿದರು? ಸೋಂಕು ಅಥವಾ ವಿಷಪೂರಿತ ಆಹಾರದ ಸಂಭವನೀಯತೆಯನ್ನು ಪರಿಶೀಲಿಸಲಿಲ್ಲವೇಕೆ? ತುರ್ತು ಪ್ರತ್ಯೇಕ ಘಟಕ ಸಕ್ರಿಯಗೊಳಿಸಲಿಲ್ಲವೇ? ಹೊರಗಿನ ತಜ್ಞರನ್ನು ಕರೆಸಲು ಏಕೆ 48 ಗಂಟೆಗಳ ವಿಳಂಬ? ಇಂಜೆಕ್ಷನ್‌ಗಳ ಅವಧಿ ಮೀರಿದ ವಿಷಯದ ಶಂಕೆಗಳಿಗೆ ಉತ್ತರವೇನು? ಸಿಸಿಟಿವಿ, ರಾತ್ರಿ ದಾಖಲೆಗಳು ಯಾಕೆ ಲಭ್ಯವಿಲ್ಲ?, ಇವುಗಳಿಗೆ ಅರಣ್ಯ ಇಲಾಖೆಯ ಉತ್ತರ ಇನ್ನೂ “ತಾಂತ್ರಿಕ ಪರಿಶೀಲನೆಯಲ್ಲಿದೆ.” “ಗಳಲೆ ರೋಗವೇ ಕಾರಣ”-ಇಲಾಖೆಯ ವಾದ ಎಷ್ಟು ಸರಿ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಭಾನುವಾರ ಮತ್ತೆರಡು ಕೃಷ್ಣಮೃಗಗಳ ಸಾವು: ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿದಿದೆ. ಭಾನುವಾರ ಮತ್ತೆರಡು ಕೃಷ್ಣಮೃಗ ಸಾವನ್ನಪ್ಪಿದೆ. ಸಾವಿನ ಸಂಖ್ಯೆ ಈಗ 30ಕ್ಕೆ ಏರಿಕೆಯಾಗಿದೆ. ನ.13ರಂದು ಕಿರು ಮೃಗಾಲಯದಲ್ಲಿ 8 ಕೃಷ್ಣಮೃಗಗಳು ಮೃತಪಟ್ಟಿದ್ದರೆ, ನಿನ್ನೆ ಒಂದೇ ದಿನ 20 ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ತಜ್ಞರ ತಂಡ ಭಾನುವಾರ ಪರಿಶೀಲನೆ ನಡೆಸಿದೆ. ಗಳಲೆ ರೋಗದಿಂದ ಮೃತಪಟ್ಟಿರುವ ಶಂಕೆ ಇದೆ ಎಂದು ಮೃಗಾಲಯಗಳ ಸದಸ್ಯ ಕಾರ್ಯದರ್ಶಿ ಸುನೀಲ್ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃಗಾಲಯವನ್ನು ಕೂಡ ಪರಿಶೀಲನೆ ಮಾಡಲಾಗಿದೆ. ಘಟನೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಕಂಡುಬಂದಿಲ್ಲ. 8 ಕೃಷ್ಣಮೃಗಗಳು ಮೃತಪಟ್ಟ ಸಂದರ್ಭದಲ್ಲಿಯೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಅದಾಗಿಯೂ ಎಲ್ಲಿಯಾದರೂ ಸಿಬ್ಬಂದಿ ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಗಳಲೆ ರೋಗ ಎಂದರೇನು?: ಥೈರಾಯ್ಡ್ ಗ್ರಂಥಿಯ ಅಸಮತೋಲನದಿಂದ ಕುತ್ತಿಗೆ ಉಬ್ಬುವುದು-ಇದು ತಕ್ಷಣದ ಸಾವು ನೀಡುವುದಿಲ್ಲ ಮತ್ತು ಸಾಮೂಹಿಕ ಸಾವು ಅಸಾಧ್ಯ. `ಗಳಲೆ ರೋಗ’ ಬಂದರೆ ತಿಂಗಳ ಕಾಲ ಲಕ್ಷಣ ತೋರುತ್ತದೆ.

Previous article‘ಕಾಯಕ ಗ್ರಾಮ’ ಯೋಜನೆಯಿಂದ ಗ್ರಾಮೀಣ ಕರ್ನಾಟಕಕ್ಕೆ ಹೊಸ ಶಕ್ತಿ!
Next article6 ತಿಂಗಳು ಚೆನ್ನಾಗಿತ್ತು “ಬಯಸಿದಾಗ ದೂರ, ಹೋದಾಗ ಹತ್ತಿರ”: ನಟಿಯ ಕಣ್ಣೀರ ಕಥೆ!

LEAVE A REPLY

Please enter your comment!
Please enter your name here