ದಾಂಡೇಲಿ ಅತಿಕ್ರಮಣ ವಿವಾದ: ಮಹಿಳೆಯರಿಂದ ನಮಗೂ ಮನೆ ಕಟ್ಟಲು ಜಾಗೆ ಕೊಡಿ ಹೋರಾಟ

0
24

ದಾಂಡೇಲಿ (ಉತ್ತರ ಕನ್ನಡ): ಡಿ.ಎಫ್.ಎ. ಟೌನ್ ಶಿಪ್ ಪ್ರದೇಶದಲ್ಲಿ ನಡೆಯುತ್ತಿರುವ ಜಾಗೆ ಅತಿಕ್ರಮಣ ಪ್ರಕರಣವು ಇದೀಗ ಸ್ಥಳೀಯರ ಅಸಮಾಧಾನ ಮತ್ತು ಹೋರಾಟಕ್ಕೆ ಕಾರಣವಾಗಿದೆ. ಬಡವರಾದ ಸ್ಥಳೀಯರು “ನಮಗೆ ಮನೆ ಕಟ್ಟಲು ಸರ್ಕಾರದಿಂದ ಜಾಗೆ ಕೊಡದಿರುವಾಗ, ಬೇರೆಯೂರಿನವರು ಪ್ರಭಾವ ಬೀರಿ ಅತಿಕ್ರಮಿಸುತ್ತಿರುವುದಕ್ಕೆ ಅಧಿಕಾರಿಗಳು ಕಣ್ಣು ಮುಚ್ಚಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮಧ್ಯಭಾಗದಲ್ಲಿರುವ ಪ್ರಮುಖ ಜಾಗೆಯಲ್ಲಿ, ಯುಟ್ಯೂಬರ್ ಹಾಗೂ ಪತ್ರಕರ್ತನೊಬ್ಬ ಅತಿಕ್ರಮಣ ಮಾಡಿದನೆಂಬ ಆರೋಪ ಕೇಳಿಬಂದಿದೆ. ಆ ಜಾಗೆಯ ಪಕ್ಕದ ಪ್ರದೇಶದಲ್ಲಿ ಸ್ಥಳೀಯ ಮಹಿಳೆಯರು ಮತ್ತು ಕುಟುಂಬಗಳು ಮುಳ್ಳುಬೇಲಿ ಹಾಕಿ, ಸೀರೆ ತೊಟ್ಟು ಬೀಡು ಬಿಟ್ಟು ಅಡಿಗೆ ಮಾಡುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. 2ನೇ ದಿನಕ್ಕೂ ಈ ಹೋರಾಟ ಮುಂದುವರಿದಿದೆ.

ಪೌರಾಯುಕ್ತರ ಸೂಚನೆ: ಪೌರಾಯುಕ್ತರು ಬೇಲಿ ತೆರವುಗೊಳಿಸಲು ಸೂಚಿಸಿದರೂ ಯುಟ್ಯೂಬರ್ “ಜಾಗೆ ನನ್ನದೇ” ಎಂದು ಉದ್ದಟವಾಗಿ ಪ್ರತಿಕ್ರಿಯಿಸಿದನೆಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಸ್ಥಳೀಯರ ಕೋಪ ಇನ್ನಷ್ಟು ಉಕ್ಕಿದೆ.

ಆಡಳಿತದ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ: ಈ ವಿಷಯವನ್ನು ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಾನಂದ ಗಗ್ಗರಿ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿಗಳಿಂದ ಕ್ರಮ ಕೈಗೊಳ್ಳುವ ಸೂಚನೆ ಬಂದಿದ್ದರೂ, ಸ್ಥಳೀಯ ತಹಶೀಲದಾರರು ಕ್ರಮ ಕೈಗೊಳ್ಳದಿರುವುದು ಸಂಶಯಾಸ್ಪದವಾಗಿದೆ. ತಹಶೀಲದಾರರು ಯುಟ್ಯೂಬರ್ ಜೊತೆ ಆತ್ಮೀಯತೆ ಹೊಂದಿರುವ ಕಾರಣ ಕ್ರಮದಿಂದ ಹಿಂದೆ ಸರಿದಿದ್ದಾರೆ ಎಂಬ ಸ್ಥಳೀಯರ ಆರೋಪ ಗಂಭೀರವಾಗಿದೆ.

ಮಹಿಳಾ ಹೋರಾಟಗಾರರ ಆಗ್ರಹ: “ಜಿಲ್ಲಾಧಿಕಾರಿ ಅವರನ್ನು ದಾಂಡೇಲಿ ನಗರಸಭೆಯ ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿರುವುದರಿಂದ ಅವರು ಸ್ವತಃ ಸ್ಥಳಕ್ಕೆ ಬಂದು ವಿಚಾರಣೆ ನಡೆಸಬೇಕು” ಎಂದು ಮಹಿಳಾ ಹೋರಾಟಗಾರರು ಆಗ್ರಹಿಸಿದ್ದಾರೆ.

ನಗರದ ಹೃದಯಭಾಗದ ಬೆಲೆಬಾಳುವ ಸೈಟ್ ಗುರಿ: ನಗರಾಡಳಿತದ ಅವಧಿ ಮುಗಿಯುವುದನ್ನು ಕಾಯುತ್ತಿದ್ದ ಯುಟ್ಯೂಬರ್, ಆಡಳಿತದ ಶಿಥಿಲಾವಸ್ಥೆಯ ಸಮಯದಲ್ಲಿ ಈ ಬೆಲೆ ಬಾಳುವ ಸೈಟ್‌ನ್ನು ಅತಿಕ್ರಮಿಸಿರುವುದು ಸ್ಥಳೀಯರ ಮಧ್ಯೆ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯರು, “ನಮಗೂ ಮನೆ ಕಟ್ಟಲು ಸರಕಾರ ಸಹಾಯ ಮಾಡಬೇಕು; ಇಲ್ಲದಿದ್ದರೆ ಬಡವರ ಹಕ್ಕಿಗಾಗಿ ಹೋರಾಟ ಮುಂದುವರಿಸುತ್ತೇವೆ” ಎಂದು ಎಚ್ಚರಿಸಿದ್ದಾರೆ.

Previous articleತೆರಿಗೆ ಹಣದಲ್ಲಿ 250 ಕೋಟಿ ಕನ್ನ: ಲೋಕಾಯುಕ್ತ ದಾಳಿಯಲ್ಲಿ ಬಯಲಾಯ್ತು ನಕಲಿ ಬಿಲ್ ಜಾಲ!
Next articleರಾವಣನ 11ನೇ ತಲೆಯ ಗುಟ್ಟು ರಟ್ಟು: ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿದೆ ಲಂಕಾಧಿಪತಿಯ ಅಂತರಂಗದ ಕಥೆ!

LEAVE A REPLY

Please enter your comment!
Please enter your name here