ಯಾದಗಿರಿ: ಬೆಳಗಾವಿಯಲ್ಲಿ ಕಳೆದ ಸಲ ನಡೆದ ಚಳಿಗಾಲದ ಅಧಿವೇಶನದ ವೇಳೆ ಕಲಾಪದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದಂತೆಯೇ ಈ ಸಲದ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದ್ದಕ್ಕೆ ಸರ್ಕಾರ ನೀಡುವ ಯಾವುದೇ ತರಹದ ಭತ್ಯೆ (ಟಿಎ, ಡಿಎ), ವಸತಿ ವ್ಯವಸ್ಥೆ ಪಡೆಯುವುದಿಲ್ಲ ಮತ್ತು ಚಹಾ, ಉಪಹಾರ, ಊಟವೂ ಮಾಡುವುದಿಲ್ಲ. ಆದರೆ ನಮಗೆ ಹೊರಗಿನಿಂದ ತರಿಸಿಕೊಂಡು ಬಳಸಲು ಅನುವು ಮಾಡಿಕೊಡಬೇಕೆಂದು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಸಭಾಪತಿ ಯು.ಟಿ. ಖಾದರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಸಮಸ್ಯೆ ಮತ್ತು ಬೇಡಿಕೆಗಳಿಗೆ ಪ್ರಮುಖ ಧ್ವನಿಯಾಗಲು ಬೆಳಗಾವಿಯಲ್ಲಿ 25 ರಿಂದ 30 ಕೋಟಿ ರೂ. ವೆಚ್ಚ ಮಾಡಿ ಪ್ರತಿ ವರ್ಷವೂ ನಡೆಸುವ ಚಳಿಗಾಲದ ಅಧಿವೇಶನದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅವರು ದೂರಿದ್ದಾರೆ.
ಕಳೆದ ಅಧಿವೇಶನದಲ್ಲಿ ನಡೆದ ಚರ್ಚೆಗಳ ವಿಷಯಗಳ ಕುರಿತು ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಏನು ಎಂಬ ಬಗ್ಗೆ ರಾಜ್ಯದ ಜನತೆಗೆ ಇದುವರೆಗೂ ತಿಳಿಸಿಲ್ಲ.
ಕಾರಣ, ಕೇವಲ ಚರ್ಚೆ, ಮಾತುಗಳಿಂದ ಜನರ ಕಲ್ಯಾಣ ಅಸಾಧ್ಯ ಮತ್ತು ಕಟುಸತ್ಯವೂ ಹೌದು. ಇದು ಒಂದು ನಮೂನಿ ಕಾಲಹರಣ ಮಾಡಿದಂತೆಯೇ ಆಗುತ್ತಿದೆ ಮತ್ತು ಎರಡು ವಾರ ಪಿಕ್‌ನಿಕ್ ಬಂದಂತೆಯೇ ಆಗುತ್ತಿದೆ ಎಂಬುವುದು ಮೇಲ್ಮೊಟಕ್ಕೆ ಕಾಣುತ್ತಿದೆ ಎಂದು ಪತ್ರದಲ್ಲಿ ಸರ್ಕಾರದ ವಿರುದ್ಧ ಶಾಸಕರು ಚಾಟಿ ಬೀಸಿದ್ದಾರೆ.
ಇತ್ತೀಚಿಗೆ ಸತತ ಮಳೆ ಮತ್ತು ಪ್ರವಾಹ ಬಂದು ಲಕ್ಷಾಂತರ ರೈತರ ಕೋಟ್ಯಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದ್ದರೂ ಇಂದಿಗೂ ಸರ್ಕಾರ ಒಂದು ನೈಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಜನರು, ಅದರಲ್ಲೂ ಸಮಸ್ತ ಉತ್ತರ ಕರ್ನಾಟಕ ಜಿಲ್ಲೆಗಳ ರೈತರು, ಬಡವರು, ಕಾರ್ಮಿಕರು ಮತ್ತು ಜನ ಸಾಮಾನ್ಯರು ಹತ್ತು, ಹಲವು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಎಂಎಲ್‌ಎ ಸಾಹೇಬರು ಕ್ಷೇತ್ರದ, ತಾಲೂಕಿನ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಹೊಸ, ಹೊಸ ಕೆಲಸಗಳು ಮಾಡವ ಮೂಲಕ ಕನಸು ನನಸು ಮಾಡುತ್ತಾರೆಂಬ ಭರವಸೆ ಹೊಂದಿರುವ ಮತದಾರರಿಗೆ ನಾವೇನು ಉತ್ತರ ಕೊಡಬೇಕೆಂದು ಅವರು ಪ್ರಶ್ನಿಸಿದ್ದಾರೆ.
ಹೀಗಾಗಿ ಅಧಿವೇಶನದ ವೇಳೆಯ ಯಾವುದೇ ತರಹದ ಭತ್ಯೆ ಪಡೆಯದಿರಲು ಹಿಂದೇ ಹೇಳಿದಂತೆಯೇ ನಿರ್ಧಾರ ಮಾಡಿದ್ದಾಗಿ ಕಂದಕೂರ ತಿಳಿಸಿದ್ದಾರೆ.


























