ಭಯೋತ್ಪಾದಕ ಕೃತ್ಯ ಖಂಡನೀಯ – ವಿಶ್ವ ಹಿಂದೂ ಪರಿಷದ್

0
18

ಮಂಗಳೂರು: ದೇಶದ ರಾಜಧಾನಿ ದೆಹಲಿಯ ಜನನಿಬಿಡ ಪ್ರವಾಸಿ ತಾಣ ಲಾಲ್ ಕಿಲಾ–ಚಾಂದನಿ ಚೌಕ್ ಪ್ರದೇಶವನ್ನು ಇನ್ನೊಮ್ಮೆ ನಡುಗಿಸಿದ ಭೀಕರ ಸ್ಪೋಟ ಸೋಮವಾರ ರಾತ್ರಿ ಸಂಭವಿಸಿದೆ. ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ನಿಂತಿದ್ದ ಕಾರೊಂದರಲ್ಲಿ ಸಂಭವಿಸಿದ ಈ ಪ್ರಬಲ ಸ್ಫೋಟದಲ್ಲಿ 10 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಭಯೋತ್ಪಾದಕ ದಾಳಿಯನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.

ವಿಹಿಪ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಮಾತನಾಡಿ ರಾಜಧಾನಿಯಂತಹ ಪ್ರಮುಖ ಪ್ರದೇಶದಲ್ಲಿ ನಡೆದಿರುವ ಈ ದಾಳಿ ಅತ್ಯಂತ ಖಂಡನೀಯ. ನಿರಪರಾಧಿಗಳ ಜೀವ ತೆಗೆದುಕೊಂಡಿರುವ ಈ ಭಯೋತ್ಪಾದಕ ಕೃತ್ಯವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಬಲಿಯಾದವರ ಕುಟುಂಬಗಳಿಗೆ ನಮ್ಮ ಸಂತಾಪವೆಂದು ಕೋರಿಕೊಳ್ಳುತ್ತೇವೆ ಮತ್ತು ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂಬುದು ನಮ್ಮ ಪ್ರಾರ್ಥನೆ. ಹರಿಯಾಣದಲ್ಲಿ ಪತ್ತೆಯಾದ ಸ್ಫೋಟಕ ಸಂಗ್ರಹ ಮತ್ತು ದೆಹಲಿಯ ಸ್ಫೋಟ ದಾಳಿ ಪರಸ್ಪರ ಸಂಬಂಧಿತವಾಗಿರುವ ಸಾಧ್ಯತೆ ಇದೆ. ಈ ದಾಳಿಯ ಹಿಂದೆ ಇರುವ ಜಾಲವನ್ನು ಗಂಭೀರವಾಗಿ ತನಿಖೆ ಮಾಡಿ, ಹೊಣೆಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸ್ಫೋಟದ ಕೆಲವೇ ಗಂಟೆಗಳ ಮೊದಲು ಜಮ್ಮು–ಕಾಶ್ಮೀರ ಪೊಲೀಸರು ಹರಿಯಾಣದ ಫರಿದಾಬಾದ್‌ನಲ್ಲಿ ವಿಶಾಲ ಪ್ರಮಾಣದ ಸ್ಫೋಟಕಗಳ ಸಂಗ್ರಹವನ್ನು ಪತ್ತೆಹಚ್ಚಿದ್ದರು. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎರಡು ಮನೆಗಳಲ್ಲಿ ನಡೆದ ದಾಳಿಯಲ್ಲಿ 350 ಕೆಜಿ ಅಮೋನಿಯಂ ನೈಟ್ರೇಟ್ ಸೇರಿದಂತೆ ಸುಮಾರು 3000 ಕೆಜಿ ಸ್ಫೋಟಕ ಸಾಮಗ್ರಿ ವಶಪಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಭವಿಸಿದ ಸ್ಫೋಟವು ಪೂರ್ವನಿಯೋಜಿತ ಭಯೋತ್ಪಾದಕ ಕೃತ್ಯದ ಭಾಗವಾಗಿರಬಹುದು ಎನ್ನುವ ಬಲವಾದ ಶಂಕೆ ವ್ಯಕ್ತವಾಗಿದೆ.

ಸ್ಫೋಟದ ಸ್ಥಳದಲ್ಲಿ ದೆಹಲಿ ಪೊಲೀಸ್, ಎನ್‌ಎಸ್‌ಜಿ ಹಾಗೂ ಫೊರೆನ್ಸಿಕ್ ತಂಡಗಳು ತುರ್ತು ರಕ್ಷಣಾ ಕಾರ್ಯಾಚರಣೆಯನ್ನೂ, ಸುಳಿವು ಸಂಗ್ರಹಣೆಯನ್ನೂ ಮುಂದುವರೆಸಿವೆ. ರಾಷ್ಟ್ರೀಯ ಭದ್ರತೆ ಕುರಿತು ಇದು ಗಂಭೀರ ಎಚ್ಚರಿಕೆಯ ಸೂಚನೆ ಎನ್ನುವ ಅಭಿಪ್ರಾಯವನ್ನು ಭದ್ರತಾ ವಲಯದ ಪರಿಣಿತರು ವ್ಯಕ್ತಪಡಿಸಿದ್ದಾರೆ.

Previous articleದಾಂಡೇಲಿ ನಗರದಲ್ಲಿ ಅತಿಕ್ರಮಣ: ವಿವರಣೆ ಕೇಳಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
Next articleRangeela ಗೆ 3 ದಶಕದ ರಂಗು

LEAVE A REPLY

Please enter your comment!
Please enter your name here