ಬೆಂಗಳೂರು: ಭಾರತೀಯ ಟೆನ್ನಿಸ್ ಇತಿಹಾಸದಲ್ಲಿ ಮಹತ್ವದ ಕ್ಷಣಕ್ಕೆ ಈ ಬಾರಿ ಬೆಂಗಳೂರು ವೇದಿಕೆಯಾಗಿ ಪರಿಣಮಿಸಿದೆ. ವಿಶ್ವ ಟೆನ್ನಿಸ್‌ನ ಪ್ರಮುಖ ತಂಡ ಸ್ಪರ್ಧೆಯಾದ ಬಿಲಿ ಜೀನ್ ಕಿಂಗ್ ಕಪ್ ಪ್ಲೇ-ಆಫ್‌ಗಳು ಭಾರತದಲ್ಲಿ ಮೊದಲ ಬಾರಿಗೆ ಆಯೋಜನೆಯಾಗುತ್ತಿದ್ದು, ನವೆಂಬರ್ 14ರಿಂದ 16ರವರೆಗೆ ಕಬ್ಬನ್ ಪಾರ್ಕ್‌ನ ಎಸ್.ಎಂ. ಕೃಷ್ಣ ಕ್ರೀಡಾಂಗಣದಲ್ಲಿ ಪಂದ್ಯಗಳು ಜರುಗಲಿವೆ.
ಟೂರ್ನಿಯಲ್ಲಿ ಒಟ್ಟು 21 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು, ಅವುಗಳನ್ನು ಮೂರುರ ಗುಂಪುಗಳಂತೆ ಏಳು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ‘ಜಿ’ ಗುಂಪಿನಲ್ಲಿದ್ದು, ನೆದರ್ಲೆಂಡ್ಸ್ ಮತ್ತು ಸ್ಲೋವೇನಿಯಾಗಳೊಂದಿಗೆ ಸ್ಪರ್ಧಿಸಲಿದೆ. ಪಂದ್ಯಗಳು ರೌಂಡ್-ರಾಬಿನ್ ವಿಧಾನದಲ್ಲಿ ನಡೆಯಲಿವೆ.
ಭಾರತೀಯ ತಂಡದಲ್ಲಿ ಈ ಬಾರಿ ದೇಶದ ಪ್ರಮುಖ ಮಹಿಳಾ ಟೆನ್ನಿಸ್ ಆಟಗಾರ್ತಿಯರಾದ: ಅಂಕಿತಾ ರೈನಾ, ಭಮಿಡಿಪಾಟಿ ಶ್ರೀವಲ್ಲಿ ರಶ್ಮಿಕಾ. ಸಹಜಾ ಯಮಲಪಳ್ಳಿ. ಪ್ರಾರ್ಥನಾ ಜಿ.ಟಿ. ರಿಯಾ ಭಾಟಿಯಾ ಅವರುಗಳು ತಂಡದಲ್ಲಿದ್ದಾರೆ. ಇದು ಭಾರತದ ಮಹಿಳಾ ತಂಡವು ಪ್ಲೇ-ಆಫ್ ಹಂತ ತಲುಪಿರುವ ಇತಿಹಾಸದಲ್ಲೇ ಎರಡನೇ ಬಾರಿ ಎಂಬುದು ಗಮನಾರ್ಹ.
ಈ ಕುರಿತಂತೆ ಕರ್ನಾಟಕ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಗೌರವಾನ್ವಿತ ಕಾರ್ಯಕ್ರಮವನ್ನು ಆತಿಥ್ಯ ವಹಿಸುವ ಅವಕಾಶ ನೀಡಿದ ಅಂತರರಾಷ್ಟ್ರೀಯ ಟೆನ್ನಿಸ್ ಫೆಡರೇಷನ್‌ಗೆ ಧನ್ಯವಾದಗಳು. ಇದು ನಮ್ಮ ಆಟಗಾರ್ತಿಯರಿಗೆ ತಮ್ಮ ನೆಲದಲ್ಲಿ ವಿಶ್ವ ಮಟ್ಟದ ಸವಾಲು ಎದುರಿಸುವ ಅಪರೂಪದ ಅವಕಾಶ ಎಂದು ಹೇಳಿದ್ದಾರೆ.
ಕ್ರೀಡಾಭಿಮಾನಿಗಳನ್ನು ಉದ್ದೇಶಿಸಿ ಅವರು, “ಪ್ರತಿ ಸೀಟ್ ತುಂಬಲಿ, ಬೆಂಗಳೂರು ತನ್ನ ಗರ್ಜನೆಯನ್ನು ತೋರಲಿ. ಭಾರತದ ಮಹಿಳಾ ತಂಡಕ್ಕೆ ನಾವು ಒಂದಾಗಿ ಬೆಂಬಲಿಸೋಣ ಎಂದು ಕರೆ ನೀಡಿದ್ದಾರೆ.
ಈ ಬಾರಿ ನಡೆಯುತ್ತಿರುವ ಪ್ಲೇ-ಆಫ್‌ಗಳು ಭಾರತೀಯ ಟೆನ್ನಿಸ್ ಬೆಳವಣಿಗೆಗೆ ಮಾತ್ರವಲ್ಲ, ಜಾಗತಿಕ ವೇದಿಕೆಯ ಮೇಲೆ ದೇಶದ ಸ್ಥಾನಮಾನ ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿವೆ.


























