ಓದುವಾಗಲೇ ಉದ್ಯಮದ ಕನಸು ಕಂಡಿದ್ದ ಹಾಸನ ಯುವಕ | ಲಕ್ಷ ಸಂಬಳ ಬಿಟ್ಟು ಸ್ವಂತ ಕಂಪನಿ ಕಟ್ಟಿದ
ಪತ್ರಿಕೆ ಕಚೇರಿಯೊಂದರಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಹಳ್ಳಿ ಹುಡುಗನೊಬ್ಬ ಸ್ವಂತ ಕಂಪನಿಯೊಂದನ್ನು ಕಟ್ಟಿ ಯಶಸ್ವಿ ಉದ್ಯಮಿಯಾದ ಕತೆಯಿದು. ಹೆಸರು ದಿಲೀಪ್ ಅಂತ. ಮೂಲತಃ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪವಿರುವ ಮದನೆ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ದಿಲೀಪ್ ತಮ್ಮ ಹುಟ್ಟೂರಲ್ಲೇ 10ನೇ ತರಗತಿವರೆಗೂ ವಿದ್ಯಾಭ್ಯಾಸ ಪಡೆದರು. ಬೇಸಿಗೆ ರಜೆಯಲ್ಲಿ ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದ ದಿಲೀಪ್ ಅವರಿಗೆ ಸಿಕ್ಕಿದ್ದು ಹೌಸ್‌ಕೀಪಿಂಗ್ ಕೆಲಸ.
ಪ್ರತಿದಿನ 10 ಗಂಟೆಗಳ ಕಾಲ ಕೆಲಸ ಮಾಡಿಕೊಂಡಿದ್ದ ಅವರು ತಮ್ಮ ಅತ್ತೆ ಮನೆಯಲ್ಲಿ ವಾಸವಿದ್ದರು. ಯಾವ ಆಕಾಂಕ್ಷೆಯಿರದೇ ಕೇವಲ ಕೆಲಸ ಹುಡುಕಿಕೊಂಡು ಬಂದಿದ್ದ ದಿಲೀಪ್ ಅವರಿಗೆ ಕೆಲಸ ಮಾಡಿಕೊಂಡೇ ಶಿಕ್ಷಣ ಪಡೆಯುವಂತೆ ಸೋದರತ್ತೆ ತಾಕೀತು ಮಾಡ್ತಾರೆ. ಆಗ ಶೇಷಾದ್ರೀಪುರಂ ಕಾಲೇಜಿನಲ್ಲಿ ಪಿಯುಸಿಗೆ ಸೇರಿದ ದಿಲೀಪ್ ಖರ್ಚು-ವೆಚ್ಚ ಭರಿಸಲು ಸತತ 2 ವರ್ಷಗಳ ಕಾಲ ಹೌಸ್‌ಕೀಪಿಂಗ್ ಕೆಲಸ ಮಾಡಿಕೊಂಡಿರುತ್ತಾರೆ.
ಪಿಯುಸಿ ಶಿಕ್ಷಣ ಮುಗಿಸಿ ಡಿಗ್ರಿ ಕಾಲೇಜಿಗೆ ಸೇರಿದಾಗ 2,200 ರೂ. ಸಂಬಳ ಸಿಗುತ್ತದೆಂದು ಸೆಕ್ಯೂರಿಟಿ ಕೆಲಸದ ಅನುಭವವನ್ನೂ ಪಡೆದುಕೊಂಡರು. ಸ್ನಾನಕೋತ್ತರ ಪದವಿ ಪಡೆದು ಸತತ 7 ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಮಾನವ ಸಂಪನ್ಮೂಲ (ಹೆಚ್‌ಆರ್) ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ದಿಲೀಪ್ ಅವರಿಗೆ ಸ್ವಂತ ಉದ್ಯಮ ಆರಂಭಿಸುವ ಆಲೋಚನೆ ಬಂದಿತು.
ಆಗ ಹುಟ್ಟಿದ್ದೇ ಗ್ರಾಮೀಣ ಭಾಗದಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ನೀಡುವಲ್ಲಿ ನೇರವಾಗುವಂತ ತರಬೇತಿ ಸಂಸ್ಥೆ `ರೈಟ್ ಟ್ರ‍್ಯಾಕ್ ಕಾರ್ಪೊರೇಟ್ ಸರ್ವಿಸ್’ ಎಂಬ ಕಂಪನಿ.
ಕಾಲೇಜಿನಲ್ಲಿದ್ದಾಗಲೇ ಕಂಡಿದ್ದ ಕನಸು: ಶಿಕ್ಷಣದ ಖರ್ಚು-ವೆಚ್ಚ ಸರಿದೂಗಿಸಲು 1000 ರೂ. ಹೌಸ್‌ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಹುಡುಗ ಪ್ರತಿಷ್ಠಿತ ಕಂಪನಿಯೊಂದರ ಹೆಚ್‌ಆರ್ ಆಗಿ ಲಕ್ಷ ಲಕ್ಷ ರೂ. ಸಂಬಳ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದ. ಆದರೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ, ಕಾಲೇಜಿನಲ್ಲಿದ್ದಾಗ ಕಂಡಿದ್ದ ಉದ್ಯಮ ಕನಸು ಕಂಪನಿಯೊಂದನ್ನು ಸ್ಥಾಪಿಸಲು ಪ್ರೇರೆಪಿಸಿತು.
ದಿಲೀಪ್ ಹೇಳುವಂತೆ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊರತು ಪಡಿಸಿದರೆ ಅವರ ಬಳಿ ಏನಂದ್ರೇ ಏನೂ ಇರಲಿಲ್ಲ. ಆಗ ಅವರಿಗೆ ಬೆನ್ನೆಲುಬಾಗಿ ನಿಂತದ್ದೇ ಪತ್ನಿ ಕೀರ್ತಿ. ಆರಂಭದಲ್ಲಿ ತಮ್ಮ ಮನೆಯ ಮೇಲೆಯೇ ಕಂಪನಿಯ ಕಚೇರಿ ಆರಂಭಿಸುತ್ತಾರೆ. 2012ರಲ್ಲಿ ಸ್ಥಾಪನೆಯಾದ ರೈಟ್ ಟ್ರ‍್ಯಾಕ್ ಕಂಪನಿಯ ಮೂಲಕ ಈವರೆಗೂ 7000ಕ್ಕೂ ಹೆಚ್ಚು ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸಿದ್ದಾರೆ.
ದಿಲೀಪ್ ಹಾಗೂ ಅವರ ಪತ್ನಿಯ ಶ್ರದ್ಧೆಯಿಂದ ಕಂಪನಿ ಕ್ರಮೇಣ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಸರು ಪಡೆಯಿತು. ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ 50ಕ್ಕೂ ಹೆಚ್ಚು ಐಟಿ-ಬಿಟಿ ಕಂಪನಿಗಳಿಗೆ ಉದ್ಯೋಗಿಗಳನ್ನು ಒದಗಿಸಿದ ಶ್ರೇಯಸ್ಸಿಗೆ ದಿಲೀಪ್ ಪಾತ್ರರಾಗಿದ್ದಾರೆ.
ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ: ರಾಜ್ಯದ ಗ್ರಾಮೀಣ ಭಾಗದಿಂದ ಪ್ರತಿವರ್ಷ ಅದೆಷ್ಟೋ ಯುವಕರು ಉದ್ಯೋಗವನ್ನರಸಿ ಬೆಂಗಳೂರಿಗೆ ಬರುತ್ತಾರೆ. ಅವರಲ್ಲಿ ಕೆಲಸ ಸಿಕ್ಕು ಬೆಂಗಳೂರಿನಲ್ಲಿ ನೆಲೆಯುರೂವವರ ಸಂಖ್ಯೆ ಕಡಿಮೆ. ಎಷ್ಟೋ ಜನರು ಬೆಂಗಳೂರಿನಲ್ಲಿ ಬದುಕು ಸಾಗಿಸಲಾಗದೇ ವಾಪಸ್ ತಮ್ಮೂರಿಗೆ ಹೋಗುತ್ತಾರೆ. ಅಂತಹ ಗ್ರಾಮೀಣ ಪ್ರದೇಶಗಳಿಂದ ಬರುವವರನ್ನೇ ಗಮನದಲ್ಲಿಟ್ಟುಕೊಂಡು ದಿಲೀಪ್ ಅವರು ರೈಟ್ ಟ್ರ‍್ಯಾಕ್ ಕಂಪನಿ ಆರಂಭಿಸಿದರು.
ಗ್ರಾಮೀಣ ಜನರಿಗೆ ಅವರ ಪ್ರತಿಭೆಗಳಿಗೆ ಅನುಗುಣವಾಗಿ ಸೂಕ್ತ ಉದ್ಯೋಗ ಒದಗಿಸಿಕೊಡಲಾಗುತ್ತದೆ. ಹಳ್ಳಿಯಲ್ಲಿ ಎಷ್ಟೋ ಜನರಿಗೆ ಸರಿಯಾದ ಶಿಕ್ಷಣ ಪಡೆಯಲು ಸಾಧ್ಯವಾಗಿರುವುದಿಲ್ಲ. ಹಾಗೇ ಶಿಕ್ಷಣ ಪಡೆಯದೇ ಇರುವವರು, ಅರ್ಧದಲ್ಲೇ ಶಿಕ್ಷಣ ಬಿಟ್ಟವರು, ಬೆಂಗಳೂರಿಗೆ ಬಂದು ಏನನ್ನಾದರೂ ಮಾಡಬೇಕೆಂದು ಕನಸು ಕಂಡವರಿಗೆ ಅವರ ಶಿಕ್ಷಣಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ. ಬಳಿಕ ಅವರಿಗೆ ವಿವಿಧ ಕಂಪನಿಗಳಿಗೆ ನಾವೇ ಉದ್ಯೋಗ ಸಿಗುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ. ನಮ್ಮ ಕಂಪನಿಯಲ್ಲೂ 400 ಜನರಿಗೆ ಉದ್ಯೋಗ ನೀಡಿದ್ದೇವೆ ಅಂತಾರೆ ದಿಲೀಪ್.
ಕಡೇಗೊಂದ್ಮಾತು: ಮೊದಲು ಏನನ್ನಾದರೂ ಮಾಡಬೇಕೆನ್ನುವ ಕನಸು ಕಾಣಬೇಕು. ನಂತರ ಅದನ್ನು ನನಸು ಮಾಡಲು ದಾರಿ ಹುಡುಕಬೇಕು, ಶ್ರದ್ಧೆಯಿಂದ ಹಗಲು ರಾತ್ರಿ ಎನ್ನದೆ ಕೆಲಸ ಮಾಡಬೇಕು. ಅಂದುಕೊಂಡಿದ್ದನ್ನು ಸಾಧಿಸುವ ಪರಿ ಇದು.
ಅನುಭವವೇ ಬಂಡವಾಳ : ದಿಲೀಪ್ ಹೇಳುವಂತೆ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊರತುಪಡಿಸಿದರೆ ಅವರ ಬಳಿ ಏನಂದ್ರೆ ಏನೂ ಇರಲಿಲ್ಲ. ಆಗ ಅವರಿಗೆ ಬೆನ್ನೆಲುಬಾಗಿ ನಿಂತದ್ದೇ ಪತ್ನಿ ಕೀರ್ತಿ. ಆರಂಭದಲ್ಲಿ ತಮ್ಮ ಮನೆಯ ಮೇಲೆಯೇ ಕಂಪನಿಯ ಕಚೇರಿ ಆರಂಭಿಸಿದರು. 2012ರಲ್ಲಿ ಸ್ಥಾಪನೆಯಾದ ರೈಟ್ ಟ್ರ‍್ಯಾಕ್ ಕಂಪನಿಯ ಮೂಲಕ ಈವರೆಗೂ 7000ಕ್ಕೂ ಹೆಚ್ಚು ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸಿದ್ದಾರೆ.


























