ನವದೆಹಲಿ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ನಕಲಿ ಸುದ್ದಿಗೆ ಅವರ ಕುಟುಂಬದಿಂದಲೇ ಸ್ಪಷ್ಟನೆ ಲಭಿಸಿದೆ. ನಟಿ ಮತ್ತು ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ, ತಮ್ಮ ತಂದೆಯ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
“ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿರುವರು. ನಮ್ಮ ಕುಟುಂಬದ ಗೌಪ್ಯತೆಯನ್ನು ಎಲ್ಲರೂ ಗೌರವಿಸುವಂತೆ ವಿನಂತಿಸುತ್ತೇನೆ. ಅವರ ಶೀಘ್ರ ಗುಣಮುಖತೆಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು,” ಎಂದು ಇಶಾ ಡಿಯೋಲ್ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ನವೆಂಬರ್ 1 ರಂದು ನಿಯಮಿತ ವೈದ್ಯಕೀಯ ತಪಾಸಣೆಗೆ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನವೆಂಬರ್ 11 ರಂದು ಅವರ ಸಾವಿನ ಕುರಿತು ನಕಲಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದದ್ದು ಅಭಿಮಾನಿಗಳಲ್ಲಿ ಗೊಂದಲವನ್ನು ಸೃಷ್ಟಿಸಿತ್ತು.
ಈ ನಡುವೆ ಧರ್ಮೇಂದ್ರ ಅವರ ಪತ್ನಿ, ಹಿರಿಯ ನಟಿ ಹೇಮಾ ಮಾಲಿನಿ ಕೂಡ ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿಯನ್ನು ಖಂಡಿಸಿದ್ದಾರೆ. “ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಈ ರೀತಿಯ ನಕಲಿ ಸುದ್ದಿಗಳನ್ನು ಜವಾಬ್ದಾರಿಯುತ ಮಾಧ್ಯಮಗಳು ಹೇಗೆ ಹರಡಬಹುದು? ಇದು ಸಂಪೂರ್ಣವಾಗಿ ಅಗೌರವ ಮತ್ತು ಬೇಜವಾಬ್ದಾರಿ. ದಯವಿಟ್ಟು ಕುಟುಂಬದ ಗೌಪ್ಯತೆಯನ್ನು ಗೌರವಿಸಿ,” ಎಂದು ಅವರು ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ.
ಧರ್ಮೇಂದ್ರ ಅವರ ಆರೋಗ್ಯದ ಕುರಿತು ಕುಟುಂಬದ ಅಧಿಕೃತ ಪ್ರತಿಕ್ರಿಯೆ ಬಂದಿರುವುದರಿಂದ ಅಭಿಮಾನಿಗಳಿಗೂ ನೆಮ್ಮದಿ ದೊರೆತಿದೆ..



























