ಮೂಲಭೂತ ಸೌಕರ್ಯ ಆಗ್ರಹಿಸಿ 11 ಕಿ.ಮೀ. ಪಾದಯಾತ್ರೆ: ಜೋಯಡಾದಲ್ಲಿ ಅಹೋರಾತ್ರಿ ಧರಣಿ

0
76

ದಾಂಡೇಲಿ : ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಹಾಗೂ ಸ್ಥಳೀಯ ಶಾಸಕರು ಮತ್ತು ಮಂತ್ರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಿರವತ್ತಿಯಿಂದ ತಾಲೂಕಾ ಕೇಂದ್ರವಾದ ಜೋಯಡಾದವರೆಗೆ 11 ಕಿ.ಮೀ. ಪಾದಯಾತ್ರೆ ಮಾಡಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದಿಂದ ಗ್ರಾಮಸ್ಥರು ಸೋಮವಾರದಿಂದ ತಹಶೀಲದಾರ ಕಛೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದು, ಮಂಗಳವಾರವು ಮುಂದುವರೆದಿದೆ.

ಪ್ರತಿಭಟನಾಕಾರರು ತಹಶೀಲದಾರರಿಗೆ ಮನವಿಯೊಂದನ್ನು ನೀಡಿ ರಾಜ್ಯದಲ್ಲೇ ಹಿಂದುಳಿದ ತಾಲೂಕಾಗಿರುವ ಜೋಯಡಾದ ಬಹುತೇಕ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಸರ್ಕಾರ, ಜನಪ್ರತಿನಿಧಿಗಳು ಈ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕುಂಡಲ ಗ್ರಾಮಕ್ಕೆ ಬಸ್ ಸಂಚಾರವಿಲ್ಲ. ಇದರಿಂದ ಗ್ರಾಮಸ್ಥರು ಆಸ್ಪತ್ರೆ, ಅಂಗಡಿ, ಮಾರುಕಟ್ಟೆ, ಕಚೇರಿ ಕೆಲಸಗಳಿಗೆ ಹೋಗಲು ಪರದಾಡುವಂತಾಗಿದೆ.

ಕುಗ್ರಾಮಗಳಾದ ಗಾಂಗೋಡಾ ರಸ್ತೆ ನಿರ್ಮಾಣ, ಡಿಗ್ಗಿ, ವಾಗೇ ಲಿ ರಸ್ತೆ ದುರಸ್ತಿ, ಕಾರ್ಟೊಳಿ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ, ಬಿ.ಎಸ್.ಎನ್.ಎಲ್. ಟವರ್ ನಿರ್ಮಾಣ, ಕುಣಬಿ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವದು, ಅರಣ್ಯ ಇಲಾಖೆ ಪ್ಯಾಕೇಜ್ ಆಮಿಷವೊಡ್ಡಿ ಸ್ಥಳಾಂತರ ಮಾಡುವ ಪ್ಯಾಕೇಜ್ ನ್ನು ಕೈಬಿಡಬೇಕು ಎಂಬಿತ್ಯಾದಿ ಬೇಡಿಕೆ ಇಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ಪ್ರೇಮಾನಂದ ವೇಳಿಪ್ ಮಾತನಾಡಿ ದಟ್ಟ ಕಾಡಿನ ಕುಗ್ರಾಮಗಳಲ್ಲಿ ವಾಸಿಸುವ ಗ್ರಾಮಸ್ಥರು ಮೂಲಭೂತ ಸೌಕರ್ಯಗಳನ್ನು ಪಡೆಯಲು ಹೋರಾಟ ಮಾಡುವ ದಿನಗಳು ಬಂದಿದ್ದು ಗ್ರಾಮಸ್ಥರ ದುರಾದೃಷ್ಟ. ಮತ ಭೀಕ್ಷೆಗಾಗಿ ಬರುವವರು ಆರಿಸಿ ಹೋದ ಮೇಲೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸದಿರುವದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

ಜಿಲ್ಲಾಧ್ಯಕ್ಷ ತಿಲಕ ಗೌಡ ಅವರು, ಈ ಭಾಗದ ಜನರಿಗೆ ಭೂಮಿ ಹಕ್ಕು ಸಿಗಬೇಕು. ಈ ಪ್ರದೇಶವನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದರು ಜಿಲ್ಲಾ ಕಾರ್ಯದರ್ಶಿ ಡಿ. ಸ್ವಾಮಸನ್ ಅವರು, ನಮ್ಮ ಈ ಹೋರಾಟಕ್ಕೆ ನ್ಯಾಯ ಸಿಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟವನ್ನು ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Previous articleದೆಹಲಿಯಲ್ಲಿ ಬಾಂಬ್ ಸ್ಫೋಟ: ರಾಜ್ಯದಲ್ಲಿ ಬಿಗಿ ಭದ್ರತೆಗೆ ಸಿಎಂ ಸೂಚನೆ
Next articleಧರ್ಮೇಂದ್ರ ಆರೋಗ್ಯ ಸ್ಥಿರ: ಕುಟುಂಬದಿಂದ ಸ್ಪಷ್ಟನೆ

LEAVE A REPLY

Please enter your comment!
Please enter your name here