ಬಾಗಲಕೋಟೆ(ಮುಧೋಳ): ಪ್ರತಿಟನ್ ಕಬ್ಬಿಗೆ ಮೊದಲನೆಯ ಕಂತು 3500 ರೂ. ನೀಡಬೇಕು ಹಾಗೂ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಸಂದಾಯ ಮಾಡಬೇಕೆಂದು ಒತ್ತಾಯಿಸಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೋಮವಾರ ಬೃಹತ್ ಪ್ರಮಾಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆಯಿಂದ ಆರಂಭಗೊಂಡಿರುವ ಹೋರಾಟ ಸಂಗೊಳ್ಳಿ ರಾಯಣ್ಣ ಸರ್ಕಲ್ ಸಮೀಪದ ಕೃಷಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿಗಳನ್ನು ಕೂಡ ಬಂದ್ ಮಾಡಿದರು. ಮುಧೋಳ ಮಿನಿ ವಿಧಾನಸೌಧದಲ್ಲಿರುವ ಅಂಚೆ ಕಚೇರಿ ಸೇರಿದಂತೆ ತಾಲೂಕ ಆಡಳಿತದ ಎಲ್ಲಾ ಕಚೇರಿಗಳನ್ನು ಬಂದ್ ಮಾಡಿದ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಡಳಿತ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆದ ಸಂಧಾನ ಸಭೆ ವಿಫಲಗೊಂಡ ಕಾರಣ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಿ ಬಿಸಿ ಮುಟ್ಟಿಸಿ ತಮ್ಮ ಪಟ್ಟು ಸಡಿಸಲು ನಿರಾಕರಿಸಿದ್ದಾರೆ.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ದಿ. ರಮೇಶಣ್ಣ ಗಡದನ್ನವರ ವೇದಿಕೆ ಮೂಲಕ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಶಿವಾಜಿ ಸರ್ಕಲ್, ಗಡದನ್ನವರ ಸರ್ಕಲ್, ರನ್ನ ಸರ್ಕಲ್ ಮೂಲಕ ತಹಶೀಲ್ದಾರ್ ಕಚೇರಿಗೆ ತಲುಪಿತು.
ರೈತ ಮುಖಂಡ ಬಸವಂತಪ್ಪ ಕಾಂಬಳೆ ಮಾತನಾಡಿ, ಸರ್ಕಾರ ಕಾರ್ಖಾನೆ ಮಾಲೀಕರ ಪರ ಇದ್ದು ಹಾಗೂ ನಾಳೆಯಿಂದ ರೈತರ ಹೋರಾಟ ಉಗ್ರ ಸ್ವರೂಪ ತಾಳಲಿದ್ದು ಎತ್ತಿನ ಬಂಡಿ ಸೇರಿ ರೈತ ಹೆಣ್ಣು ಮಕ್ಕಳು ಈ ರೈತ ಚಳುವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಾಗಲಕೋಟ, ವಿಜಯಪುರ, ಬೆಳಗಾವಿ ಸೇರಿ ಬೇರೆ ಬೇರೆ ಜಿಲ್ಲೆಗಳಿಂದ ರೈತಾಪಿ ವರ್ಗದವರು ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಾಳೆ ಕೂಡ ಪಾಲ್ಗೊಳಲಿದ್ದಾರೆ ಎಂದು ತಿಳಿಸಿದರು.


























