ಸಿದ್ದರಾಮಯ್ಯನವರನ್ನು ಇಳಿಸಿದರೆ ಕಾಂಗ್ರೆಸ್ ಸ್ಮಶಾನಕ್ಕೆ ಹೋದಂತೆ

0
31

ಕೋಲಾರ: ಸಿದ್ದರಾಮಯ್ಯನವರ ಕುರ್ಚಿಗೆ ಕೈ ಹಾಕಿದರೆ ಕಾಂಗ್ರೆಸ್ ಪಕ್ಷ ಸ್ಮಶಾನಕ್ಕೆ ಹೋದಂತೆಯೇ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಎಚ್ಚರಿಸಿದ್ದಾರೆ.

ಶನಿವಾರ ನಗರದಲ್ಲಿ ಜಿಲ್ಲಾಡಳಿತ ಮತ್ತು ಕುರುಬ ಸಂಘದ ವತಿಯಿಂದ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಕಾಂಗ್ರೆಸ್ ಮುಖ್ಯಮಂತ್ರಿಯ ಪರವಾಗಿ ಬ್ಯಾಟಿಂಗ್ ನಡೆಸಿದರು.

ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದವರು ಕೈ ಹಾಕಬಾರದು. ಹೈಕಮಾಂಡ್ ಸಿದ್ದರಾಮಯ್ಯನವರ ಸ್ಥಾನಕ್ಕೆ ಕೈ ಇಟ್ಟರೆ 25 ಲಕ್ಷ ಅಹಿಂದಾ ಜನರು ಕಾಂಗ್ರೆಸ್ ನಾಯಕರನ್ನು ಘೇರಾವ್ ಮಾಡುವಂತೆ ನಾನು ಅಹಿಂದ ಸಮುದಾಯದ ಪರವಾಗಿ ಕರೆ ನೀಡುವೆ ಎಂದು ವಿವರಿಸಿದರು.

ಕನಕದಾಸರು ಹೇಳಿದಂತೆ ‘ಕುಲಕುಲ ಎನ್ನುವುದು ಒಳ್ಳೆಯದಲ್ಲ, ಕುಲ ಧರ್ಮವನ್ನು ಬಲ್ಲಿರಾ’ ಎಂಬ ಅರ್ಥವು ಇಂದು ಹೆಚ್ಚು ಸಾರ್ಥಕವಾಗಿದೆ. ರಾಜ್ಯದಲ್ಲಿ ಯಾವುದೇ ಸಮುದಾಯ ಒಗ್ಗಟ್ಟಿನಿಂದ ಇದ್ದರೆ ಅದು ಕುರುಬ ಸಮುದಾಯ ಮಾತ್ರ. ಅದರ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಿದ್ದಾರೆ ಎಂದು ಬಣ್ಣಿಸಿದರು.

ಇಂದು ಯಾರೂ ನಮ್ಮನ್ನು ಮಾತನಾಡಿಸಲು ಬರುವುದಿಲ್ಲ, ಮುಟ್ಟಲು ಸಹ ಹೆದರುತ್ತಾರೆ. ಇದು ನಮ್ಮ ಒಗ್ಗಟ್ಟಿನ ಫಲ. ಈ ಒಗ್ಗಟ್ಟನ್ನು ಮುಂದುವರೆಸಿಕೊಂಡು ಹೋಗಬೇಕು. ಕೆಲವರು ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಉಂಟುಮಾಡಲು ಯತ್ನಿಸುತ್ತಿದ್ದಾರೆ, ಆದರೆ ಅವರಿಗೆ ಅವಕಾಶ ಕೊಡಬಾರದು ಎಂದು ಕರೆ ನೀಡಿದರು.

ಕನಕ ಜಯಂತಿ ಕೇವಲ ಕುರುಬ ಸಮುದಾಯದವರಿಗಲ್ಲ, ಇದು ಅಹಿಂದ ಸಮಾಜದ ಹಬ್ಬ. ಈ ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಗುಂಪು ರಾಜಕೀಯದ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ 80% ಅಹಿಂದ ವರ್ಗದವರು ಒಗ್ಗಟ್ಟಿನಿಂದ ಇದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ವರ್ತೂರು ಹೇಳಿದರು.

ಅಹಿಂದ ವರ್ಗದವರಿಗೆ ಜಾತಿ-ಪಕ್ಷ ಮುಖ್ಯವಲ್ಲ, ಒಗ್ಗಟ್ಟೇ ಶಕ್ತಿ. ಅದನ್ನು ಕಾಪಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ಕೋಲಾರ ನಗರದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣಕ್ಕೆ ಸಮರ್ಥ ವ್ಯಕ್ತಿಗಳನ್ನು ನಿಯೋಜಿಸಿ ಕೆಲಸ ಹಂಚಿಕೆ ಮಾಡಬೇಕು, 6 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸಲಹೆ ಮಾಡಿದರು.

ನಾನು 2007ರಲ್ಲಿ ನೇತೃತ್ವ ವಹಿಸಿ ಕೋಲಾರದಲ್ಲಿ ಅದ್ದೂರಿಯಾಗಿ ಕನಕ ಜಯಂತಿ ಆಚರಣೆ ಮಾಡಿಸಿದ್ದೆ. ಆಗ 150 ಪಲ್ಲಕ್ಕಿಗಳು ಭಾಗವಹಿಸಿರುವುದನ್ನು ಕಂಡು ಇತರ ಜನಾಂಗದವರು ಬೆರಗಾಗಿದ್ದರು ಎಂದು ವರ್ತೂರು ಹೇಳಿದರು.

Previous articleಧಾರವಾಡದಲ್ಲಿ ಮೃತಪಟ್ಟ ವ್ಯಕ್ತಿ ಗದುಗಿನಲ್ಲಿ ಜೀವಂತ
Next articleಡಿಕೆಶಿ ಸಿಎಂ ಆದರೆ ಕಾಂಗ್ರೆಸ್ ಸರ್ಕಾರ ಪತನ

LEAVE A REPLY

Please enter your comment!
Please enter your name here