ಖ್ಯಾತ ಸಂಶೋಧಕ, ಸಾಹಿತಿ ವಸಂತ ಮಾಧವ ಇನ್ನಿಲ್ಲ

0
12

ಮಂಗಳೂರು: ಹಳೆಯಂಗಡಿ ಸಮೀಪದ ಪಾವಂಜೆ ನಿವಾಸಿ ಖ್ಯಾತ ಸಂಶೋಧಕ ಸಾಹಿತಿ ನಿವೃತ್ತ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವ (88) ನ.7ರಂದು ರಾತ್ರಿ ಬೆಂಗಳೂರಿನಲ್ಲಿಯ ಅವರ ಪುತ್ರಿಯ ಮನೆಯಲ್ಲಿ ನಿಧನರಾದರು.

ಅವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ. ಪ್ರೊಫೆಸರ್ ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಕೆನರಾದ ರಾಜಕೀಯ ಇತಿಹಾಸ: 1565-1763 ಎನ್ನುವ ವಿಷಯದ ಮೇಲೆ ಮಹಾಪ್ರಬಂಧವನ್ನು ರಚಿಸಿ ಪಿಎಚ್.ಡಿ. ಪದವಿ ಪಡೆದಿದ್ದರು.

ಮುಲ್ಕಿ ವಿಜಯಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ 32 ವರ್ಷ ಕರ್ತವ್ಯ ನಿರ್ವಹಿಸಿದ ವಸಂತ ಮಾಧವರು. ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್‌ ಆಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ಇಪ್ಪತ್ತರಷ್ಟು ಇತಿಹಾಸ ಕೃತಿಗಳನ್ನು ಮತ್ತು ಸಾವಿರಾರು ಲೇಖನಗಳನ್ನು ಬರೆದಿದ್ದಾರೆ.

ವಸಂತ ಮಾಧವರ ಕುರಿತಾದ ಕೃತಿಯನ್ನು ಡಾ. ಎಸ್. ಪದ್ಮನಾಭ ಭಟ್ಟರು ರಚಿಸಿದ್ದು, ನಾಡಿಗೆ ನಮಸ್ಕಾರ ಗ್ರಂಥಮಾಲೆಯಡಿ ಕಾಂತಾವರ ಕನ್ನಡ ಸಂಘ ಪ್ರಕಟಿಸಿದೆ.
ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದವರು ಅವರ ವಿದ್ವತ್ತನ್ನು ಗುರುತಿಸಿ ಗೌರವಿಸಿದ್ದಾರೆ. ಗೋವಾದಲ್ಲಿ ನಡೆದ ದಕ್ಷಿಣ ಭಾರತ ಇತಿಹಾಸ ಕಾಂಗ್ರೆಸ್ಸಿನ ಮೂರನೇ ವಿಶ್ವ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಲಾಗಿದೆ. ವಸಂತ ಮಾಧವರಿಗೆ ಯುಗಪುರುಷ ಪ್ರಶಸ್ತಿ ಮತ್ತು ಕೋ.ಮ. ಕಾರಂತ ಪ್ರಶಸ್ತಿ ಲಭಿಸಿದೆ.

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ, ಮುಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತುಗಳು ಸಾಹಿತ್ಯ ಸಮ್ಮೇಳನ ಸಂದರ್ಭಗಳಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿವೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕೂಡಾ ಅವರನ್ನು ಸನ್ಮಾನಿಸಿದೆ. ಲಂಡನ್‌ನ ರೋಯಲ್ ಏಷಿಯಾಸ್ಟಿಕ್ ಸೊಸೈಟಿ 1983ರಲ್ಲಿ ಹಾಗೂ ಕೋಲ್ಕತ್ತಾದ ಇತಿಹಾಸ ಅಧ್ಯಯನ ಸಂಸ್ಥೆ 2017ರಲ್ಲಿ ‘ಫೆಲೋ’ ಗೌರವ ನೀಡಿದೆ.

Previous articleವಂದೇ ಮಾತರಂನಿಂದ ತಾಯಿ ದುರ್ಗೆ’ಯನ್ನು ಹೊರಗಿಟ್ಟಿದ್ದು ಏಕೆ? ಇದು ಯಾರ ಓಲೈಕೆಗಾಗಿ? – ಬಿಜೆಪಿ ಕೆಂಡ.
Next articleಪಥ ಸಂಚಲನ: ನ. 13ರಂದು ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ನಿರ್ದೇಶನ

LEAVE A REPLY

Please enter your comment!
Please enter your name here