ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆಯನ್ನು ಸಿಎಂ ಅವರೆ ಬಗೆಹರಿಸಬೇಕು. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಿರಿಯ ಮುಖಂಡರಾಗಿದ್ದಾರೆ. ಅಲ್ಲದೆ ಎರಡು ಬಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕೂಡ ಆಗಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಖ್ಯಾತಿ ಇದೆ.
ಇಂತವರಿಗೆ ಕನಿಷ್ಠ ಏನು ತೀರ್ಮಾನ ಮಾಡಬೇಕು ಅಂತ ಗೊತ್ತಿಲ್ಲ ಎಂದರೆ ಏನರ್ಥ. ವಿರೋಧ ಪಕ್ಷದ ಪ್ರಮುಖರ ಸಭೆ ಕರೆದಿದ್ದಾರೆ ಅಂತೆ. ಇದು ನಾವು ಮಾಡುವ ತೀರ್ಮಾನ ಅಲ್ಲ. ಸಿಎಂ ಅವರೇ ಮಾಡಬೇಕಾದ ತೀರ್ಮಾನವಾಗಿದೆ. ಸಣ್ಣ ವಿಷಯವನ್ನು ದೊಡ್ಡದು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ವಿಚಾರದಲ್ಲಿ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಸಿಎಂ ಹೇಳಿಕೆ ನೀಡಿರುವುದು ತರವಲ್ಲ. ಯಾವ ರಾಜ್ಯದಲ್ಲಿ ಸಿಎಂ ಗಳು ಪ್ರಧಾನಿಗೆ ಪತ್ರ ಬರೆಯುತ್ತಿದ್ದಾರೆ. ಸಿದ್ದರಾಮಯ್ಯಗೆ ರೈತರ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಇದೆ. ನಾನೇ ಎರಡು ಬಾರಿ ಆಕಸ್ಮಿಕವಾಗಿ ಸಿಎಂ ಆಗಿದ್ದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಸರ್ಕಾರ ನಡೆಸುವಾಗ ಎರಡು ಸಂದರ್ಭದಲ್ಲೂ ಕಬ್ಬು ಬೆಳಗಗಾರರ ಸಮಸ್ಯೆಗಳನ್ನು ನಾನೇ ಬಗೆಹರಿಸಿದೆ ಹೊರತು ಕೇಂದ್ರದ ಕಡೆ ಬೊಟ್ಟು ಮಾಡಲಿಲ್ಲ.
ಆಗ ವೈಯಕ್ತಿಕ ತೀರ್ಮಾನ ತೆಗೆದುಕೊಂಡೆ ಎಂದರು. ಸಿಎಂ ಮಾಡಿದ ತಪ್ಪಿಗೆ ಪ್ರಧಾನಿಯನ್ನು ಇಕ್ಕಟಿಗೆ ಸಿಲುಕಿಸುವ ತಂತ್ರ ಮಾಡಿದ್ದಾರೆ. ಅದಕ್ಕಾಗಿ ಪತ್ರ ಬರೆದಿದ್ದಾರೆ ಅಷ್ಟೇ. ಕೇಂದ್ರ ಸರ್ಕಾರ ಈಗಾಗಲೇ ಎಫ್.ಆರ್.ಪಿ ದರ ನಿಗದಿ ಮಾಡಿದೆ. ಈಗ ರಾಜ್ಯ ಸರ್ಕಾರ ಸಮಸ್ಯೆ ಬಗೆಹರಿಸಬೇಕು. ಸಿದ್ದರಾಮಯ್ಯ
ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದರು.
ಹಣದ ಕೊರತೆ ಇದ್ದರೆ ಸರ್ಕಾರದಲ್ಲಿ ಹಣದ ಕೊರತೆ ಇದೆ ಅಂತ ಸಿಎಂ ಹೇಳಬೇಕು. ಅದನ್ನು ಬಿಟ್ಟು ಕೇಂದ್ರದ ಕಡೆ ಬೊಟ್ಟು ಮಾಡೋದು ಸರಿಯಲ್ಲ
ನಮ್ಮ ಪಕ್ಷದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಇಲ್ಲಮೂರು ಪಕ್ಷಗಳಲ್ಲಿ ಸಕ್ಕರೆ ಮಾಲೀಕರಿದ್ದಾರೆ ಎನ್ನುವ ಆರೋಪವಿದೆ. ತಮ್ಮ ಪಕ್ಷದಲ್ಲಿ ಬಂಡಪ್ಪ ಕಾಶಪ್ಪನವರ್ ಕಾರ್ಖಾನೆಯನ್ನು ಈಗ ಮಾರಾಟ ಮಾಡಿದ್ದಾರೆ. ಪಕ್ಷದಲ್ಲಿ ಯಾರು ಸಕ್ಕರೆ ಕಾರ್ಖಾನೆ ಮಾಲೀಕರು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗ್ಯಾರೆಂಟಿ ಯೋಜನೆ ಉಸ್ತುವಾರಿ ನೋಡಿಕೊಳ್ಳುವವರಿಗೆ ಕ್ಯಾಬಿನೆಟ್ ಮಟ್ಟದ ಸ್ಥಾನಮಾನ ಕೊಟ್ಟು ದುಂದು ವೆಚ್ಚ ಮಾಡಿದ್ದಾರೆ. ಇದಕ್ಕೆ ಖರ್ಚು ಮಾಡಲಾಗುತ್ತದೆ. ರೈತರಿಗೆ ಕೊಡಲು ಆಗಲ್ಲ ಎಂದರೆ ಇದರ್ಥ ರೈತರ ಬಗ್ಗೆ ಅಸಡ್ಡೆ, ಕೆಲ ಒತ್ತಡಕ್ಕೆ ಮಣಿದಿರಬಹುದು. ಜನಪ್ರತಿನಿಧಿಗಳ ಕಾರ್ಖಾನೆ ಉಳಿಸುವ ಒತ್ತಡ ಇರಬಹುದು ಎಂದರು.
ನವೆಂಬರ್‌ನಲ್ಲಿ ಕ್ರಾಂತಿನೂ ಆಗಲ್ಲ ವಾಂತಿನು ಆಗಲ್ಲ . ಯಾವ ಕ್ರಾಂತಿನು ಆಗಲ್ಲ. ಡಿಕೆಶಿ ಸಿದ್ದರಾಮಯ್ಯ ಹೈಕಮಾಂಡ್ ಅವರೇನು ಮಾತನಾಡಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಮತದಾರರು ಕಾಂಗ್ರೆಸ್‌ಗೆ ೧೩೬ ಸೀಟು ಕೊಟ್ಟಿದ್ದಾರೆ. ಹಿಂದಿನ ಸರ್ಕಾರದ ತಪ್ಪು ಸರಿ ಮಾಡಿ ಅಂತ ಅಧಿಕಾರ ಕೊಟ್ಟರು. ಈಗ ಇವರಿಗಿಂತ ಹಿಂದಿನ ಸರ್ಕಾರವೇ ಸರಿಯಿತ್ತು ಅಂತಿದ್ದಾರೆ ಎಂದು ಹೇಳಿದರು.
ಡಿಕೆಶಿ ಸಿಎಂ ಆಗುತ್ತಾರ ಎಂಬ ಮಾದ್ಯಮಗಳ ಪ್ರಶ್ನೆ, ಡಿಕೆ ಸಿಎಂ ಆಗುತ್ತಾರೋ ಇಲ್ಲವೊ ಗೊತ್ತಿಲ್ವ. ಪ್ರತಿದಿನ ದೇವರ ಜೊತೆ ಚರ್ಚೆ ಮಾಡುತ್ತಾರೆ. ಅವರ ಹಾಗೂ ದೇವರ ಹತ್ತಿರ ಏನು ಕೇಳುತ್ತಿದ್ದಾರೋ ನೋಡಣ ಎಂದು ಮಾರ್ಮಿಕವಾಗಿ ಹೇಳಿದರು


























