ಬೆಳಗಾವಿ: ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಗುರುವಾರ ಸಂಜೆ ಗುರ್ಲಾಪುರ ಕ್ರಾಸ್‌ನಲ್ಲಿ ಕಳೆದ 8 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತರನ್ನು ಭೇಟಿ ಮಾಡಿ ಮನವೊಲಿಸಿದ್ದಾರೆ. ರೈತರು ಸಚಿವರ ಮನವಿ ಹಿನ್ನೆಲೆಯಲ್ಲಿ 2 ದಿನ ರಾಷ್ಟ್ರೀಯ ಹೆದ್ದಾರಿ ಬಂದ್, ಒಂದು ದಿನ ಹೋರಾಟ ಮುಂದೂಡಿದ್ದಾರೆ.
ಗುರುವಾರ ಸಂಜೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಮುಗಳಖೋಡ ಶ್ರೀಗಳೊಂದಿಗೆ ಗುರ್ಲಾಪುರ ಕ್ರಾಸ್‌ನ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ ರೈತರ ಮನವಿ ಸ್ವೀಕರಿಸಿ ಮಾತನಾಡಿದರು.
ರೈತರ ಸಮಸ್ಯೆ ಪರಿಹರಿಸಲು ಸಮಯ ಬೇಕು. ಹೀಗಾಗಿ 2 ದಿನ ತಮಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿ ಸದ್ಯಕ್ಕೆ ಹೋರಾಟ ಮುಂದೂಡುವಂತೆ ವಿನಂತಿಸಿದರು. ಕೊನೆಗೂ ಸಕ್ಕರೆ ಸಚಿವರ ಮನವಿಗೆ ಸ್ಪಂದಿಸಿದ ರೈತರು ಎರಡು ದಿನದ ಮಟ್ಟಿಗೆ ಹೆದ್ದಾರಿ ತಡೆ ಹೋರಾಟ ಮುಂದೂಡಲು ಒಪ್ಪಿದರು. ಒಂದು ದಿನದ ಮಟ್ಟಿಗೆ ಹೋರಾಟ ನಿಲ್ಲಿಸಲು ಸಮ್ಮತಿಸಿದರು.
ಈ ನಡುವೆ ಸಕ್ಕರೆ ಸಚಿವರ ಮನವಿಗೆ ಸಭೆಯಲ್ಲಿದ್ದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಇಂದೇ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದರು. ಜಿಲ್ಲಾ ಉಸ್ತುವಾರಿ ಸಚಿವರನ್ನ ನಂಬಿ ನಾನು ತಡವಾಗಿ ಬಂದಿದ್ದೇನೆ ಎಂದ ಸಚಿವ ಶಿವಾನಂದ ಪಾಟೀಲ ಪರೋಕ್ಷವಾಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಹೋಗುವ ವಿಚಾರ ಪ್ರಸ್ತಾಪ ಮಾಡಿದ್ದೀರಿ. ಅದನ್ನ ಕೇವಲ ಒಂದು ಅಥವಾ ಎರಡು ದಿನ ಮುಂದೇ ಹಾಕಿ. ಎರಡು ದಿನದಲ್ಲಿ ಸಮಸ್ಯೆ ಬಗೆ ಹರಿಸೋಣ ಎಂದು ಸಿಎಂ ಅವರು ಹೇಳಿ ಕಳಿಸಿದ್ದಾರೆ. ಸಿಎಂ ಸಭೆಗೆ ಯಾರನ್ನಾದರೂ ಕಳುಹಿಸಿ ಎಂದು ಹೋರಾಟಗಾರರಿಗೆ ಸಚಿವ ಶಿವಾನಂದ ಪಾಟೀಲ ಮನವಿ ಮಾಡಿದರು.
ನಾಳೆ ಒಂದೇ ದಿನ ನನಗೆ ಗಡುವು ಕೊಡಬೇಡಿ, ಎರಡು ದಿನ ಗಡುವು ಕೊಡಿ. ನಾನು ನಿಮಗೆ ಕೇಳಿದ್ದು ಎರಡು ದಿನ ಕಾಲಾವಕಾಶ ಮಾತ್ರ. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡಬಾರದು. ನಿಮ್ಮ ಆಕ್ರೋಶ ಸಿಟ್ಟು ಇಡೀ ದೇಶಕ್ಕೆ ಗೊತ್ತಾಗಿದೆ. ಇಂತಹ ದುಸ್ಥಿತಿಗೆ ಕೇಂದ್ರ ಆಗಲಿ ರಾಜ್ಯ ಸರ್ಕಾರ ಆಗಲಿ ಬರಬಾರದು. ರೈತರ ಬಗ್ಗೆ ನಮಗೂ ಕಾಳಜಿ ಇದೆ ಎಂದು ಸಚಿವ ಶಿವಾನಂದ ಪಾಟೀಲ ರೈತರ ಮನವೊಲಿಸಲು ಯತ್ನಿಸಿದರು.

























