3000ಕ್ಕೂ ಹೆಚ್ಚು ಕಟ್ಟಡಗಳನ್ನು ಸೌರ ವಿದ್ಯುತ್ ಮೂಲಕ ಬೆಳಗಿದ ಸೋಹನ್

0
37

12 ವರ್ಷಗಳಲ್ಲಿ ತಮ್ಮ ಪವರ್ ಪ್ಲಾನೆಟ್ ಮೂಲಕ 2800 ಕಡೆ ಸೌರ ವಿದ್ಯುತ್ ನೀಡಿದ ಯುವ ಉದ್ಯಮಿ | ಗ್ರಾಮೀಣ ಪ್ರದೇಶಕ್ಕೂ ಆದ್ಯತೆ

ಕರ್ನಾಟಕದ ಅನೇಕ ಗ್ರಾಮಗಳಲ್ಲಿ ವಿದ್ಯುತ್ 24ಗಂಟೆಯೂ ಲಭ್ಯವಿಲ್ಲ. ಯಾವಾಗಲೋ ಒಂದಷ್ಟು ಹೊತ್ತು ಎಸ್ಕಾಂನವರ ಕೃಪೆ ಇದ್ದಾಗ ವಿದ್ಯುತ್ ಉಂಟು. ಹಗಲೋ, ರಾತ್ರಿಯೋ ಸಮಯಾವಸಮಯ ಇಲ್ಲದೆ ಪವರ್ ಕಟ್ ಆಗದೇ ಇದ್ದಾಗ ಅದನ್ನು ಉಪಯೋಗಿಸಿಕೊಳ್ಳಬೇಕು. ವಿದ್ಯುತ್ ತಯಾರಿಕೆಗೆ ಅಗತ್ಯವಾದ ಸೂರ್ಯನ ಬೆಳಕಿಗೆ ನಮ್ಮಲ್ಲಿ ಕೊರತೆಯೇನಿಲ್ಲ. ಆದರೆ ಅದನ್ನು ಬಳಸಿಕೊಂಡು ವಿದ್ಯುತ್ ತಯಾರಿಸುವವರು ಕಡಿಮೆ. ಹೀಗಾಗಿ ಈ ಕೊರತೆ.

ಕಡಿಮೆ ವಿದ್ಯುತ್‌ನಲ್ಲಿ ಸಂಗ್ರಹಿಸಬೇಕಾದ ಔಷಧಿಗಳು ಕೆಟ್ಟು ಹೋಗುತ್ತವೆ. ಆನ್‌ಲೈನ್ ತರಗತಿಗಳನ್ನು ವಿದ್ಯಾರ್ಥಿಗಳು ನಂಬಿಕೊಳ್ಳುವ ಹಾಗೇ ಇಲ್ಲ. ಕರೆಂಟ್ ಬಂದಾಗ ಮಧ್ಯರಾತ್ರಿ ಆಗಿದ್ದರೂ ಎದ್ದು, ಹೊಲಗಳಿಗೆ ರೈತರು ನೀರು ಹರಿಸಬೇಕಾಗುತ್ತದೆ. ಇದು ಸೋಹನ್‌ಗೆ ತನ್ನ ಉದ್ಯಮ ಮತ್ತು ಜೀವನದ ಉದ್ದೇಶ ಎರಡನ್ನೂ ಕಂಡುಕೊಳ್ಳಲು ಕಾರಣವಾಯಿತು.

ಇಂಥ ಕತ್ತಲ ಪರಿಸ್ಥಿತಿಯಲ್ಲಿ ಸುಲಭವಾಗಿ ಸಿಗುವ ಸೌರ ವಿದ್ಯುತ್ತನ್ನು ಜನರ ಬಳಿಗೆ ಕೊಂಡೊಯ್ಯಲು ಅವರು ಮುಂದಾದರು. ಈಗ ತಮ್ಮ ಪವರ್ ಪ್ಲಾನೆಟ್ ಕಂಪನಿಯ ಮೂಲಕ ಸೌರವಿದ್ಯುತ್ ಸೇವೆಯನ್ನು ಸೋಹನ್ ಒದಗಿಸುತ್ತಿದ್ದಾರೆ. ಸೋಹನ್ ಪ್ರವೇಶಿಸಿದ ಹಳ್ಳಿಗಳಲ್ಲಿ ಈಗ ಸೂರ್ಯ ಮುಳುಗಿದ ಕೂಡಲೇ ಕಾರ್ಗತ್ತಲಾಗುವುದಿಲ್ಲ. ರೆಫ್ರಿಜರೇಟ್ ನಿಂತುಹೋಗುತ್ತದೆ ಎಂದು ಔಷಧ ಅಂಗಡಿಗಳವರು, ಆಸ್ಪತ್ರೆಗಳು ಗಾಬರಿಯಾಗುವಂತಿಲ್ಲ. ಬೆಳೆ ಒಣಗುತ್ತಿದ್ದರೂ ರೈತರು ಅಸಹಾಯಕರಾಗಿ ಕೈಕಟ್ಟಿ ಕೂಡುವ ಪರಿಸ್ಥಿತಿ ಇಲ್ಲ.

ಸೋಲಾರ್ ರೂಫ್‌ಟಾಪ್, ಸೋಲಾರ್ ಪ್ಯಾನೆಲ್, ಮಿನಿ ಗ್ರಿಡ್ ಮತ್ತು ಮತ್ತಿತರೆ ಅಗತ್ಯ ಸೋಲಾರ್ ಸೌಲಭ್ಯಗಳನ್ನು ಸೋಹನ್ ನೀಡುತ್ತಾರೆ. ಕಳೆದ ಸೋಹನ್ ಅವರ 12 ವರ್ಷಗಳಲ್ಲಿ ಪವರ್ ಪ್ಲಾನೆಟ್ 2700 ಮನೆಗಳು, 350 ಅಂಗಡಿ ಮುಂಗಟ್ಟುಗಳನ್ನು ಬೆಳಗಿದೆ. ನವೀಕರಿಸಬಲ್ಲ ಇಂಧನದ ಕಂಪನಿಯಾದ ಪವರ್ ಪ್ಲಾನೆಟ್‌ಗೆ ಸೋಹನ್ ನಿರ್ವಾಹಕ ನಿರ್ದೇಶಕ. ದಾವಣಗೆರೆ, ಚಿಕ್ಕಮಗಳೂರು ಬೆಂಗಳೂರುಗಳಲ್ಲಿ ಈ ಸಂಸ್ಥೆಯ ಚಟುವಟಿಕೆಯಿದೆ. ಇದರಿಂದ ವಾರ್ಷಿಕ 50,000 ಟನ್ ಇಂಗಾಲದ ಡೈಆಕ್ಸೆöÊಡ್ ಉತ್ಪಾದನೆಯ ಸ್ಥಗಿತಗೊಳ್ಳಲು ಕಾರಣವಾಗಿದೆ.

ಸೋಹನ್ ತಂದೆ ತಾಯಿ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರ್‌ಗಳು. ಅವರೇ ಯುಪಿಎಸ್ ತಯಾರಿಕಾ ಘಟಕ ಪ್ರಾರಂಭಿಸಿದ್ದರು. ಮನೆಗಳಿಗೆ ಬ್ಯಾಕ್‌ಅಪ್ ಪವರ್ ಮೂಲಕ ವಿದ್ಯುತ್ ಕಡಿತಕ್ಕೆ ಪರಿಹಾರ ನೀಡುವುದು ಅವರ ಉದ್ದೇಶವಾಗಿತ್ತು. ಆದರೆ ಸ್ವಚ್ಛ ಇಂಧನದ ಅಗತ್ಯ ಜಾಸ್ತಿ ಆದಂತೆಲ್ಲ, ಅವರು 2012ರ ಹೊತ್ತಿಗೆ ತಮ್ಮ ಗಮನವನ್ನು ಯುಪಿಎಸ್‌ನಿಂದ ಸೋಲಾರ್ ಆಧರಿತ ಪರಿಹಾರಗಳ ಕಡೆಗೆ ಬದಲಾಯಿಸಿಕೊಂಡರು.

ಅದರಲ್ಲೂ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಂಥ ವಿದ್ಯುತ್ ಕೊರತೆಯಿಂದ ನಲುಗುತ್ತಿರುವವರನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕೆಲಸ ಶುರು ಮಾಡಿದರು. ಕುಟುಂಬದ ಉದ್ಯಮವನ್ನೇ ಹಿಡಿಯಬೇಕು ಎಂದು ಸೋಹನ್‌ಗೇನೂ ಇರಲಿಲ್ಲ. ಆದರೆ “ನಾನು ಸಣ್ಣ ವಯಸ್ಸಿನಿಂದಲೇ ವಿದ್ಯುತ್ ಹೋದಾಗ ಜನ ಎಷ್ಟು ಪರದಾಡುತ್ತಾರೆ ಎನ್ನುವುದನ್ನು ನೋಡುತ್ತಿದ್ದೆ.

ಕರೆಂಟ್ ಹೋದ ಕೂಡಲೇ ಕರೆಗಳು ಬರುತ್ತಿದ್ದವು. ಅದನ್ನು ಸರಿಪಡಿಸಿದ ಕೂಡಲೆ ಜನ ನಿರಾಳರಾಗುತ್ತಿದ್ದರು” ಇದು ನನ್ನ ಮೇಲೆ ಪ್ರಭಾವ ಬೀರಿತ್ತು ಎಂದು ಸೋಹನ್ ನೆನಪಿಸಿಕೊಳ್ಳುತ್ತಾರೆ. ನಂತರ ಒಂದು ದಿನ ಕೊಪ್ಪಳ ಜಿಲ್ಲೆಯ ತಮ್ಮ ತಂದೆಯ ಊರಿಗೆ ಹೋದಾಗ ಕಂಡ ಪರಿಸ್ಥಿತಿ ಈ ಉದ್ಯಮವನ್ನೇ ಕೈಗೆತ್ತಿಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಕಾರಣವಾಯಿತು ಎನ್ನುತ್ತಾರೆ ಸೋಹನ್.

ಆ ಗ್ರಾಮದಲ್ಲಿ ಸೋಹನ್ ತಂದೆ ತಾವು ಓದಿದ ಶಾಲೆಯನ್ನು ತಮ್ಮ ಮಗನಿಗೆ ತೋರಿಸಿದರು. ಆ ಶಾಲೆಯೂ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿತ್ತು. ಕೂಡಲೇ ಯಾವುದೇ ತೊಂದರೆಯಿಲ್ಲದಂತೆ ದಿನದ 24 ಗಂಟೆಯೂ ವಿದ್ಯುತ್ ಸಿಗುವ ವ್ಯವಸ್ಥೆಯನ್ನು ಆ ಶಾಲೆಗೆ ಕಲ್ಪಿಸಬೇಕೆಂದುಕೊಂಡರು. ಒಂದು ಆಫ್‌ಗ್ರಿಡ್ ಸೋಲಾರ್ ಸಿಸ್ಟಂ ತಂದೆ-ಮಗ ಇಬ್ಬರೂ ಸೇರಿಯೇ ಅಳವಡಿಸಿದರು. ನೂರಾರು ಮಕ್ಕಳಿಗೆ ಅದು ಉಪಯೋಗವಾಯಿತು. ಸೋಹನ್‌ಗೆ ಅದೊಂದು ಹೆಮ್ಮೆಯ ಕೆಲಸ ಎನ್ನಿಸಿತು. ಹೀಗಾಗಿ ಮುಂದುವರಿಸಿದರು. ಅದು ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ.

ದೊಡ್ಡ ಪ್ರಾಜೆಕ್ಟ್‌ಗಳು ತಮ್ಮ ಯೋಜನೆಯನ್ನು ಅಪ್‌ಗ್ರೇಡ್ ಮಾಡಿಕೊಂಡಾಗ, ಅದರಲ್ಲಿ ಬಳಕೆಗೆ ಇನ್ನೂ ಯೋಗ್ಯವಾಗಿರುವ ಸೋಲಾರ್ ಪ್ಯಾನೆಲ್‌ಗಳನ್ನು ಉಪಯೋಗಿಸಿಕೊಂಡು ಕಡಿಮೆ ಬೆಲೆಯಲ್ಲೇ ಅಪ್‌ಗ್ರೇಡ್ ಮಾಡಿಕೊಡುವ, ಜೊತೆಗೆ ಇನ್‌ಹೌಸ್ ಪೇಮೆಂಟ್ ವ್ಯವಸ್ಥೆ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದೆಲ್ಲವೂ ಇಬ್ಬರಿಗೂ ಪ್ರಯೋಜನವಾಗಿದೆ.

ಕಡೇಗೊಂದ್ಮಾತು: ಜನರಿಗೆ ನೀಡಬೇಕಾದ ಸೌಲಭ್ಯದಲ್ಲಿ ಇರುವ ಕೊರತೆ ಗುರುತಿಸಿ, ಅದನ್ನು ತುಂಬಿಕೊಡಲು ಮುಂದಾದಾಗ ಉದ್ಯಮಕ್ಕೆ ಹೊಸ ಆಯಾಮ ಸಿಗುತ್ತದೆ.

Previous articleಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆ ಸರ್ಕಾರ ಈಡೇರಿಸಲಿ, ವಿಳಂಬ ಮಾಡಿದಷ್ಟು ಜಟಿಲ
Next articleಚಂದ್ರಮೌಳೀಶ್ವರ ದೇವಸ್ಥಾನಕ್ಕೆ ವಿಧಾನಸಭಾ ಅರ್ಜಿಗಳ ಸಮಿತಿ ನಿಯೋಗ ಭೇಟಿ

LEAVE A REPLY

Please enter your comment!
Please enter your name here