ಶುಗರ್ ಲಾಬಿಯ ಗಾಣಕ್ಕೆ ಸಿಲುಕಿದ ರೈತನ ಕೈ!

0
36
ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಸಕ್ಕರೆ ಕಾರ್ಖಾನೆಗಳು ರೈತರನ್ನು ಶೋಷಿಸಿದಷ್ಟು ಇನ್ಯಾವ ಉದ್ಯಮಗಳೂ ಮಾಡಿಲ್ಲ. ಕಬ್ಬು ಕಟಾವು ಮಾಡಿ ಫ್ಯಾಕ್ಟರಿಗೆ ಕಳಿಸಬೇಕಾದ ಸಂದರ್ಭದಲ್ಲಿ ರೈತ ಬೀದಿಯಲ್ಲಿದ್ದಾನೆ.

ಎಂತಹ ಬಲಾಢ್ಯ ಲಾಬಿಯ ಕಪಿಮುಷ್ಟಿಯಲ್ಲಿ ಸಿಲುಕಿ ರೈತ ಒದ್ದಾಡುತ್ತಿದ್ದಾನೆ ನೋಡಿ… ಏಳು ದಿನಗಳಿಂದ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ, ಅದರ ಒಳಸುಳಿ, ದುಷ್ಟ ಹುನ್ನಾರ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಈ ಮಾತು ಕಠೋರವಾದರೂ ಅಷ್ಟೇ ಭಯಾನಕ.

ಕರ್ನಾಟಕದ ರಾಜಕಾರಣ ಮೊದಲು ಸಹಕಾರ, ಶಿಕ್ಷಣ, ಗಣಿ, ಗುತ್ತಿಗೆ, ಆನಂತರ ಈಗ `ಶುಗರ್ ಲಾಬಿ’ಯತ್ತ ಸುತ್ತುತ್ತಿದೆ. ರಾಜ್ಯದ 79 ಸಕ್ಕರೆ ಕಾರ್ಖಾನೆಗಳ ಪೈಕಿ, ಹಾಲಿ-ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಅಥವಾ ಅವರ ಮಕ್ಕಳು- ಬಂಧುಗಳು- ಸಂಸದರುಗಳ ಕೈಲಿರುವವೇ ಹೆಚ್ಚು!

ಮಂಡ್ಯದ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದ್ದಾಗಿದ್ದರೆ, ಉಳಿದವು ಬಹುತೇಕ ಸಹಕಾರಿ ರಂಗದಲ್ಲಿದ್ದವು. ಈಗ ಹಾಗಲ್ಲ. ಯಾವುದೇ ಸರ್ಕಾರವಿರಲಿ. ಅಲ್ಲಿಯ ಪ್ರಬಲ ಸಚಿವರೆಲ್ಲ ಸಕ್ಕರೆ ಉದ್ಯಮಿಗಳೇ ಅಥವಾ ಸಕ್ಕರೆ ಕಾರ್ಖಾನೆಯನ್ನು ಹಿಡಿತದಲ್ಲಿ ಇಟ್ಟುಕೊಂಡವರೇ. ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಒಂದೋ ನಾಶಪಡಿಸಿ ಲೀಸ್ ಮೇಲೆ ಪಡೆದವರು, ಇಲ್ಲ, ತಾವೇ ಕಾರ್ಖಾನೆಯನ್ನು ಸ್ಥಾಪಿಸಿದವರಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲೇ ನೋಡಿ. 28 ಸಕ್ಕರೆ ಕಾರ್ಖಾನೆಗಳಿದ್ದರೂ ಅವೆಲ್ಲ ರಾಜಕಾರಣಿಗಳು, ಸಚಿವರ, ಶಾಸಕರುಗಳ, ಮಾಜಿ ಶಾಸಕರುಗಳು ಮತ್ತು ಅವರ ಕುಟುಂಬದವರದ್ದೇ ಆಗಿವೆ. ಸಹಕಾರಿ ಕಾರ್ಖಾನೆಗಳ ಅಧ್ಯಕ್ಷರಾಗಿದ್ದವರು ಖಾಸಗಿ ಕಾರ್ಖಾನೆಯನ್ನೂ ನಿರ್ವಹಿಸುವವರಿದ್ದಾರೆ. ಸಹಕಾರಿ ಕಾರ್ಖಾನೆಗಳ ಆಡಳಿತ ಮಂಡಳಿ ಚುನಾವಣೆ ನೋಡಿದರೆ ಹತ್ತಾರು ಕೋಟಿ ರೂಪಾಯಿ ವ್ಯಯ ಮಾಡಿ, ಜಿದ್ದಾಜಿದ್ದಿಗೆ ಬಿದ್ದು ತಮ್ಮ ಹಿಡಿತಕ್ಕೆ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಪಕ್ಷಬೇಧವಿಲ್ಲ. ಎಲ್ಲರದ್ದೂ ಮಿಲಾಪಿ.

ಜಾರಕಿಹೊಳಿ ಇರಬಹುದು. ನಿರಾಣಿ ಕಂಪನಿ ಇರಬಹುದು. ಸವಡಿ-ಕತ್ತಿ. ತಿಮ್ಮಾಪುರ- ಕಾರಜೋಳ ಇರಬಹುದು. ಜೊಲ್ಲೆ-ಲಕ್ಷ್ಮೀ ಹೆಬ್ಬಾಳಕರ ಕುಟುಂಬ ಇರಬಹುದು. ಶಿವರಾಮ ಹೆಬ್ಬಾರ, ಸಿದ್ದೇಶ್ವರ, ಶಾಮನೂರ, ಯತ್ನಾಳ, ಕಾಶಪ್ಪನವರ್ ಎಲ್ಲರದ್ದೂ ಅಷ್ಟೇ. ಪಕ್ಷ ಪಂಗಡ ಬೇರೆಯಾದರೂ, ವೈಯಕ್ತಿಕ ಈರ್ಷೆ, ಜಿದ್ದಾಜಿದ್ದಿ ಇದ್ದರೂ, ಸಕ್ಕರೆ ಕಾರ್ಖಾನೆ ವಿಷಯ ಬಂದಾಗ ಎಲ್ಲರೂ ಮಿಲಾಪಿ ಎಂಬುದು ಸ್ಪಷ್ಟ.

ಸಕ್ಕರೆ ಕಾರ್ಖಾನೆಗಳು ರೈತರನ್ನು ಶೋಷಿಸಿದಷ್ಟು ಇನ್ಯಾವ ಉದ್ಯಮಗಳೂ ಮಾಡಿಲ್ಲ. ಕಬ್ಬು ಕಟಾವು ಮಾಡಿ ಫ್ಯಾಕ್ಟರಿಗೆ ಕಳಿಸಬೇಕಾದ ಸಂದರ್ಭದಲ್ಲಿ ರೈತ ಬೀದಿಯಲ್ಲಿದ್ದಾನೆ. ರೈತನ ಕಾಳಜಿ ಏನೆಂದರೆ ದುಬಾರಿ ಕಾಲದಲ್ಲಿ ಬೆಳೆ ತೆಗೆಯಲು ಖರ್ಚು ಮಾಡಿದ ಹಣವಾದರೂ ಬರಲಿ ಎನ್ನುವುದು. ಗೊಬ್ಬರ, ಕಬ್ಬಿನ ಬೀಜ, ಕಟಾವು ದರ (ಕೂಲಿ), ವಿದ್ಯುತ್ ದರ ಎಲ್ಲವೂ ಹೆಚ್ಚಾಗಿದೆ.

ಗುಜರಾತ್ ಸಹಕಾರಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ 4500 ರೂ. ನೀಡುವುದಾದರೆ, ಕರ್ನಾಟಕದ ಕಾರ್ಖಾನೆಗಳಿಗೆ 3500 ರೂಪಾಯಿ ಕೊಡುವುದು ಏಕೆ ಸಾಧ್ಯವಿಲ್ಲ? ಪಕ್ಕದ ಮಹಾರಾಷ್ಟ್ರ 3500 ಕೋಟಿ ಕೊಡುತ್ತಿದೆ. ಅದೇ ಬೆಳಗಾವಿ, ಬಾಗಲಕೋಟೆ ರೈತರಿಗೇಕೆ ನೀಡಲಾಗುತ್ತಿಲ್ಲ?

ಇವೆಲ್ಲವುಗಳ ವಿಷಯದಲ್ಲಿ ರಾಜಕಾರಣ ಢಾಳಾಗಿ ಗೋಚರಿಸುತ್ತಿದೆ. ಗುಜರಾತಿನಲ್ಲಿರುವುದು ಸಹಕಾರಿ ಸಕ್ಕರೆ ಕಾರ್ಖಾನೆಗಳು ಮಾತ್ರ. ಅಲ್ಲಿ ಎಲ್ಲವೂ ವೃತ್ತಿಪರವಾಗಿ ನಡೆಯುತ್ತಿವೆ. ಪ್ರತಿ ಕಾರ್ಖಾನೆಗೂ ಅತ್ಯಂತ ಪರಿಣಿತ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಹಕಾರಿ ತತ್ವದಡಿಯಲ್ಲಿ ಅನುಷ್ಠಾನಗೊಳಿಸುವ ಜವಾಬ್ದಾರಿಯುತ ಜನರಿದ್ದಾರೆ. ಒಂದೇ ಒಂದು ಖಾಸಗಿ ಕಾರ್ಖಾನೆಗೂ ಅಲ್ಲಿ ಅವಕಾಶ ನೀಡಿಲ್ಲ.

ಮಹಾರಾಷ್ಟ್ರದಲ್ಲೂ ಖಾಸಗಿ ಸಕ್ಕರೆ ಲಾಬಿ ಕರ್ನಾಟಕಕ್ಕಿಂತ ಪ್ರಬಲವಾಗಿದೆ. ಆದರೆ ಸಹಕಾರಿ ಕಾರ್ಖಾನೆಗಳೂ ಅಷ್ಟೇ ವ್ಯವಸ್ಥಿತವಾಗಿ, ಯಶಸ್ವಿಯಾಗಿ ನಿರ್ವಹಣೆಯಾಗುತ್ತಿವೆ. ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಭಿನ್ನವಿಲ್ಲ. ತಮ್ಮ ಪ್ರತಿಸ್ಪರ್ಧಿ ರಾಜಕಾರಣಿ ಸಕ್ಕರೆ ಕಾರ್ಖಾನೆ ಮಾಡಿದರೆ, ಇವರದ್ದೂ ಮುಂದಿನ ವರ್ಷ ಒಂದು ಸಕ್ಕರೆ ಕಾರ್ಖಾನೆ ರೆಡಿ.

ಹಾಗೇ ಜಿದ್ದಾಜಿದ್ದಿಗೆ ಬಿದ್ದು ಸಾಲ ನೀಡಿದ ಸಂಸ್ಥೆಗಳನ್ನು ಕೂಡ ದಿವಾಳಿ ಅಂಚಿಗೆ ಕೆಡವಲಾಗಿವೆ. ಅಪೆಕ್ಸ್ ಬ್ಯಾಂಕ್, ಸಹಕಾರಿ ಬ್ಯಾಂಕ್, ವಾಣಿಜ್ಯ, ವಾಣಿಜ್ಯೇತರ ಬ್ಯಾಂಕುಗಳು ಕೂಡ ಈಗ ಸಕ್ಕರೆ ಕಾರ್ಖಾನೆ ಮಾಲೀಕರ ರಾಜಕೀಯ ಆಟಾಟೋಪದಲ್ಲಿ ನಲುಗುತ್ತಿವೆ.

ಈಗ ರೈತರ ಪ್ರತಿಭಟನೆಗೆ ಬರೋಣ. ಪಾಪ ರೈತರು ಕೇಳಿರುವುದೇ 3500 ರೂ. 4 ಸಾವಿರ ರೂ. ಡಿಮಾಂಡ್ ಇಟ್ಟಿದ್ದರೆ ಸ್ವಲ್ಪ ಕಾರ್ಖಾನೆ ಮಾಲೀಕರಿಗೂ ಇಕ್ಕಟ್ಟಿಗೆ ಸಿಲುಕಿಸಿದಂತೆ ಆಗುತ್ತಿತ್ತೇನೋ? ಮಿಲಾಪಿ ಹೇಗಿದೆ ಎಂದರೆ, ಸರ್ಕಾರ ಉದ್ದೇಶ ಪೂರ್ವಕವಾಗಿಯೇ ತನ್ನ ಕಬ್ಬು ಇಳುವರಿ ದರವನ್ನು ವಿಳಂಬವಾಗಿ ಘೋಷಿಸಿತು. ಆ ನಂತರ ಕಬ್ಬು ಕಟಾವಿಗೆ ಬಂದ ಮೇಲೆ ರೈತರ ಪ್ರತಿಭಟನೆ ಆರಂಭವಾಯಿತು. ಪರೋಕ್ಷವಾಗಿ ರೈತರನ್ನು ಎತ್ತಿ ಕಟ್ಟಿದ್ದೇ ಕಾರ್ಖಾನೆಗಳು!

ಸಕ್ಕರೆ ಖರೀದಿ ನಿಯಂತ್ರಣ ಇರುವುದು ಕೇಂದ್ರ ಸರ್ಕಾರದ ಬಳಿ. ದೇಶದಲ್ಲಿ ಸಕ್ಕರೆ ದರ ಮುಕ್ತ ಮಾರುಕಟ್ಟೆಯಲ್ಲಿ ಕುಸಿಯುತ್ತಿದೆ. ಕೇಂದ್ರ ಸಾರ್ವಜನಿಕ ವಿತರಣೆಗಾಗಿ ಖರೀದಿಸುತ್ತಿರುವ ಸಕ್ಕರೆ ದರ ಕಡಿಮೆ ಇದೆ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಯ ಮೇಲೆ ಈಗಲೇ 2- 3 ರೂಪಾಯಿ ಸಕ್ಕರೆ ದರ ಕಡಿಮೆ ಇದೆ. ಇನ್ನಷ್ಟು ಇಳಿಯುವ ಸಾಧ್ಯತೆಯೂ ಇದೆ.

ಹಾಗಾಗಿ ಪಡಿತರ ಸಕ್ಕರೆ ಖರೀದಿ ದರವನ್ನು ಹೆಚ್ಚಿಸಿದರೆ ರೈತರಿಗೆ ಸೂಕ್ತ ಬೆಲೆ ನೀಡಲು ಸಾಧ್ಯ ಎನ್ನುವ ಒತ್ತಡವನ್ನು ಕಾರ್ಖಾನೆಗಳು ಈಗ ಕೇಂದ್ರ ಸರ್ಕಾರದ ಮೇಲೆ ಹೇರುತ್ತಿವೆ. ಇದಕ್ಕಾಗಿಯೇ ಖಾಸಗಿ ಸಕ್ಕರೆ ಕಾರ್ಖಾನೆಗಳ ಮತ್ತು ಸಹಕಾರಿ ಕಾರ್ಖಾನೆಗಳ ಒಕ್ಕೂಟ ಪ್ರಮುಖರು ಅಮಿತ್ ಶಾ ಅವರನ್ನು ಭೇಟಿಯಾಗಿರುವುದು.

ರೈತರ ಪ್ರತಿಭಟನೆ ಜೋರಾದಂತೆ ರಾಜ್ಯ- ಕೇಂದ್ರ ಸರ್ಕಾರಗಳ ಮೇಲಿನ ಒತ್ತಡ ಹೆಚ್ಚಿಸಿ ಸರ್ಕಾರಿ ಸಕ್ಕರೆ ದರ ಏರಿಸುವುದು ಒಂದಾದರೆ, ರೈತ ಕೋರುತ್ತಿರುವ ಹೆಚ್ಚುವರಿ 150-200 ರೂಪಾಯಿ ದರವನ್ನು ರಾಜ್ಯ ಸರ್ಕಾರದಿಂದ ಭರಿಸುವಂತೆ ಒತ್ತಡ ಹೇರುವುದು! ಸಚಿವ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಅತ್ತ ಸವಡಿ ಎಲ್ಲರ ಪ್ರಯತ್ನವೂ ಅತ್ತಲೇ! ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ಟನ್‌ಗೆ 150 ರೂ. ಯಂತೆ ಸರ್ಕಾರ ಪಾವತಿಸಿತ್ತು. ಅದರ ನೆಪ ಸಿಕ್ಕಿತಲ್ಲ!

ಇನ್ನೊಂದು ಹುನ್ನಾರ, ರೈತನನ್ನೇ ಸಂಕಷ್ಟಕ್ಕೀಡು ಮಾಡುವುದು. ಕಟಾವಿಗೆ ನಿಂತ ಕಬ್ಬನ್ನು ಇನ್ನಷ್ಟು ದಿನ ಹೊಲದಲ್ಲೇ ಬಿಟ್ಟರೆ ಅದು ಒಣಗಿ ಕಬ್ಬಿನ ತೂಕ ಕಡಿಮೆಯಾಗುತ್ತದೆ. ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಪಾಪ. ರೈತರಿಗೇ ಇದು ಹಾನಿ. ಎರಡನೆಯದ್ದಾಗಿ ಹೊಲದಲ್ಲಿರುವ ಕಬ್ಬನ್ನು ಕಾಯುವುದು, ನಿರ್ವಹಣೆ ಮಾಡುವುದು ರೈತರಿಗೆ ಅನಿವಾರ್ಯವಾಗುತ್ತದೆ.

ಪ್ರತಿ ದಿನ ಎಕರೆಗೆ ಸಾವಿರಾರು ರೂಪಾಯಿ ನಿರ್ವಹಣಾ ವೆಚ್ಚವನ್ನು ರೈತನೇ ಭರಿಸಬೇಕು ತಾನೆ? ಈ ವರ್ಷ 2.85 ಕೋಟಿ ಟನ್ ಕಬ್ಬು ರೈತರಲ್ಲಿದೆ. ಕಳೆದ ಸಾಲಿಗಿಂತ ಸುಮಾರು 15 ಲಕ್ಷ ಟನ್‌ಗೂ ಅಧಿಕ. ಇನ್ನೊಂದು ತಮಾಷೆ ನೋಡಿ. ಎಲ್ಲ ಕೃಷಿ ಉತ್ಪನ್ನಗಳು, ಅಷ್ಟೇ ಅಲ್ಲ, ಉತ್ಪಾದಕರಿಂದ ಖರೀದಿಸುವ ಎಲ್ಲ ಸಾಮಗ್ರಿಗಳಿಗೂ ಖರೀದಿಸುವಾಗಲೇ ತಕ್ಷಣವೇ ಹಣ ಕೊಡಬೇಕು. ಆತ ಗ್ರಾಹಕನಾಗಿರಲಿ. ವಿತರಕನಾಗಿರಲಿ. ಆದರೆ ಕಬ್ಬು ಬೆಳೆಗಾರ ಮಾತ್ರ ಕಾರ್ಖಾನೆಗೆ ಉದ್ರಿಯಲ್ಲಿ ಕಬ್ಬು ಹಾಕಬೇಕು!

1955ರ ಈ ಉದ್ರಿ ಕಾಯ್ದೆಯನ್ನು ಯಾವ ಸರ್ಕಾರ ಬಂದರೂ ಬದಲಿಸಲಿಲ್ಲ. ಹಿಂದೊಮ್ಮೆ ಪ್ರತಿಭಟನೆಯಾದಾಗ 15 ದಿನಗಳ ಬದಲು 14 ದಿನಕ್ಕೆ ಉದ್ರಿ ಸಮಯ ಇಳಿಸಿದರು. ಅಂದರೆ ಕೇವಲ ಒಂದು ದಿನ ಕಡಿಮೆ ಅಷ್ಟೇ! ಆದರೆ ರೈತರಿಗೆ ಹಣ 14 ದಿನ ಬಿಡಿ. 3 ತಿಂಗಳು, 3 ವರ್ಷ ಬಾಕಿ ಉಳಿಸಿಕೊಂಡ ಕಾರ್ಖಾನೆಗಳಿವೆ! ಹಣಕ್ಕಾಗಿ ರೈತರು ಚಪ್ಪಲಿ ಸವೆಸುತ್ತಿದ್ದಾರೆ. ಗುಜರಾತ, ಮಹಾರಾಷ್ಟ್ರ ಮಾದರಿಯಲ್ಲಿ ರೈತರಿಗೆ ಕೊಡಬೇಕಾದ ಬಾಕಿಯನ್ನು ಕಟ್ಟು ನಿಟ್ಟಾಗಿ ಕೊಡಿಸುವ ತಾಕತ್ತು ಸಕ್ಕರೆ ಸಚಿವರಿಗಿಲ್ಲ!.

ರೈತರ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದು ಹೇಳುವ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಸಚಿವರು. ಅವರವೂ ಸೇರಿದಂತೆ, ಅವರ ಸರ್ಕಾರದ ಹಲವು ಶಾಸಕರುಗಳದ್ದೇ ಕಾರ್ಖಾನೆಗಳಿವೆ. ಅವರ ಕಾರ್ಖಾನೆಗಳಲ್ಲಿ ರೈತ ಕೋರುವ ದರ ಕೊಡುತ್ತಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ, ಶಾಸಕ ವಿಜಯೇಂದ್ರ ರಸ್ತೆಯ ಮೇಲೆ ಮಲಗಿದ್ದಾರೆ. ಅವರ ಪಕ್ಷದ ನಾಯಕರುಗಳ ಕಾರ್ಖಾನೆಗಳಿವೆ.

ಮುರುಗೇಶ ನಿರಾಣಿ, ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ, ಉಚ್ಚಾಟನೆಗೊಂಡಿರುವ ಶಿವರಾಮ ಹೆಬ್ಬಾರ, ಬಸವನಗೌಡ ಪಾಟೀಲ ಯತ್ನಾಳ ಮೊದಲಾದವರದ್ದು. ಬಿಜೆಪಿಯ ಆಂತರಿಕ ಬಿಕ್ಕಟ್ಟು ವಿಜಯೇಂದ್ರ ಅವರನ್ನು ರಸ್ತೆಯಲ್ಲಿ ಮಲಗಿಸಿದೆ. ಅವರ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ರಮೇಶ ಜಾರಕಿಹೊಳಿ ಕುಟುಂಬ, ಹಾಗೆಯೇ ಬಸನಗೌಡ ಪಾಟೀಲ ಯತ್ನಾಳ, ಜಿ.ಎಂ.ಸಿದ್ದೇಶ್ವರ ಇವರೆಲ್ಲರ ವಿರುದ್ಧವಾಗಿಯೂ ವಿಜಯೇಂದ್ರ ಧರಣಿ ನಡೆಸಿ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದಾರೆ!

ಈ ಎಲ್ಲ ರಾಜಕೀಯ ಮತ್ತು ಬಲಾಢ್ಯರ ಸುಳಿಯಲ್ಲಿ ಸಿಲುಕಿ ರೈತ ಮಂಕಾಗಿದ್ದಾನೆ. ದುರಂತ ಎಂದರೆ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಸಕ್ಕರೆಯ ಲಾಬಿ ಮಣಿಸುವ ಸರ್ಕಾರವೂ ಇಲ್ಲ; ಸಚಿವರೂ ಇಲ್ಲ. ಪರೋಕ್ಷವಾಗಿ ರೈತರನ್ನು ಓಲೈಸುವ- ಬೆಂಬಲಿಸುವ ಪ್ರಯತ್ನವಂತೂ ಸಾಗಿದೆ. ಅಂತೂ ಇಂತೂ ಕಬ್ಬು ಬೆಳೆಗಾರ ಸದಾ ಕಹಿ ಉಣ್ಣುವುದೇ ಆಗಿದೆ, ಅಲ್ಲವೇ!?

Previous articleಬೆಂಗಳೂರು ಮೆಟ್ರೋ: ಗುಲಾಬಿ ಹಾದಿ ಸಲೀಸು, ಉಳಿದ ಮಾರ್ಗಗಳಿಗೆ ಅಡೆತಡೆಗಳ ಸರಮಾಲೆ!
Next articleಕಬ್ಬಿನ ಕಿಚ್ಚು: ಸರ್ಕಾರದ ಮುಂದಿದೆ ರೈತರ ಗಡುವು, ಸಂಪುಟ ಸಭೆಯತ್ತ ಎಲ್ಲರ ಚಿತ್ತ!

LEAVE A REPLY

Please enter your comment!
Please enter your name here