ವಿದೇಶಿ ಕೆಲಸ ಬಿಟ್ಟು ಬಂದು ಬೆಲ್ಲದ ಉದ್ದಿಮೆ ಕಟ್ಟಿದರು!

0
65
ನವೆಂಬರ್ 4ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕನ್ನಡ ನಾಡಿನ ಚಿನ್ನದ ಸಾಧಕರು ಅಡಿ ಪ್ರಕಟವಾದ ಲೇಖನ

ಲಕ್ಷ ಗಳಿಸುತ್ತಿದ್ದ ವಿಮಲಾ ದಂಪತಿ ಕೈಗಳೀಗ ಲಕ್ಷ ಲಕ್ಷ ಸಂಬಳ ಕೊಡುತ್ತಿವೆ | ಇದು ಸಾವಯವ ಕ್ರಾಂತಿಯ ಕತೆ

ವಿದೇಶದಲ್ಲಿ ನೌಕರಿ ಗಿಟ್ಟಿಸಿಕೊಳ್ಳುವುದೇ ಸಾಧನೆ ಎಂಬ ಮನೋಭಾವ ಇಂದೂ ಅನೇಕರಲ್ಲಿರವ ಈ ಸಂದರ್ಭದಲ್ಲಿ ವಿದೇಶದಲ್ಲಿಯೇ ಕೆಲಸ ಗಿಟ್ಟಿಸಿಕೊಂಡು, ಕೈತುಂಬ ಲಕ್ಷಲಕ್ಷ ಸಂಬಳ ಬರುತ್ತಿರುವಾಗ ಆ ಕೆಲಸ ತೊರೆದು ಮಾತೃಭೂಮಿಗೆ ಮರಳುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಅದರಲ್ಲೂ ತನ್ನ ಜನರಿಗೆ, ತನ್ನ ನೆರೆಹೊರೆ ಊರಿನ ಮಂದಿಗೆ ಏನಾದರೂ ಒಳ್ಳೆಯದು ಮಾಡಬೇಕೆಂಬ ಏಕಮಾತ್ರ ಉದ್ದೇಶದಿಂದ ವಿದೇಶದ ಕೆಲಸ ಬಿಟ್ಟು ಬರುವುದು ಅನೇಕರ ಕಲ್ಪನೆಗೂ ಮೀರಿದ ವಿಷಯ ಬಿಡಿ.

ಆದರೆ ಇದಕ್ಕೆ ಹೊರತಾದ ಒಂದು ಉದಾಹರಣೆಯ ಕತೆಯೇ ಸಾವಯವ ಬೆಲ್ಲದ ಉದ್ದಿಮೆ ಕಟ್ಟಿದ ನಿರಂಜನ ಮೂರ್ತಿ ಮತ್ತು ವಿಮಲಾ ದಂಪತಿಯ ಈ ಕತೆ.

`ನಾವು ವಿದೇಶದಲ್ಲಿ ಏನೇ ಸಾಧನೆ ಮಾಡಲಿ ಮರಳಿ ಮಣ್ಣಿಗೆ ಅನ್ನೋ ರೀತಿ ಮತ್ತೆ ನಮ್ಮ ನಾಡಿಗೆ ನಾವು ಬರಲೇಬೇಕು. ಎಷ್ಟೇ ದುಡ್ಡು ಸಂಪಾದನೆ ಮಾಡಿದರೂ, ಎಂಥಾ ಒಳ್ಳೆಯ ಬಟ್ಟೆ ಹಾಕ್ಕೊಂಡರೂ ಅದನ್ನು ನೋಡಲು ನಮ್ಮವರೇ ಇಲ್ಲ ಅಂದರೆ ಹೇಗೆ? ನಮ್ಮ ಎಲ್ಲಾ ಸಾಧನೆಯನ್ನು ನೋಡಲು ನಮಗೆ ನಮ್ಮವರು ಅನ್ನೋ ಜನ ಬೇಕು. ಅದು ವಿದೇಶಗಳಲ್ಲಿ ಸಾಧ್ಯವಿಲ್ಲ.’ ಇವು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಾರಿಗನೂರಿನಲ್ಲಿ ವಿದೇಶಿ ಕೆಲಸ ಬಿಟ್ಟು ಬಂದು ಸಾವಯವ ಉದ್ದಿಮೆ ಸ್ಥಾಪಿಸಿರುವ ಶ್ರೀಮತಿ ವಿಮಲಾ ನಿರಂಜನ್ ಅವರ ಮಾತುಗಳು.

ದಾವಣಗೆರೆಯಿಂದ ಚನ್ನಗಿರಿಗೆ ಹೊರಟರೆ ದಾರಿಯಲ್ಲಿ ಕಾರಿಗನೂರು ಸಿಗುತ್ತದೆ. ಇದು ಮಾಜಿ ಸಿಎಂ ಜೆ.ಎಚ್.ಪಟೇಲರ ಊರು ಕೂಡ ಹೌದು. ಇಲ್ಲೇ ಇದೆ ದೊಗ್ಗಳ್ಳಿಯವರ ಸಾವಯವ ಬೆಲ್ಲದ ಕಾರ್ಖಾನೆ. ಎಲ್ಲರೂ ಸಕ್ಕರೆಯ ಮೊರೆ ಹೋಗುತ್ತಿರುವಾಗ ಬೆಲ್ಲದಿಂದಲೇ ಆರೋಗ್ಯ ವೃದ್ಧಿ ಸಾಧ್ಯ ಎಂದು ನಿರ್ಧರಿಸಿದ ನಿರಂಜನ್-ವಿಮಲಾ ದಂಪತಿ ತಮ್ಮ ಹಳ್ಳಿಗೆ ಬಂದು ಶುರು ಮಾಡಿದ ಸಾವಯವ ಬೆಲ್ಲದ ಉದ್ಯಮ ಇಂದು ಲಕ್ಷಾಂತರ ರೂಪಾಯಿ ಟರ್ನ್ಓವರ್ ಹೊಂದಿದೆ.

ಎಲ್ಲಾ ಬೆಲ್ಲ ಒಂದೇ, ಎಲ್ಲವನ್ನೂ ಎಲ್ಲದಕ್ಕೂ ಉಪಯೋಗಿಸಬಹುದು ಮತ್ತು ಎಲ್ಲದರ ಔಟ್‌ಕಮ್ ಕೂಡ ಒಂದೇ ಆಗಿರುತ್ತದೆ ಎಂಬುದು ಅನೇಕರ ಅಭಿಪ್ರಾಯ. ಆದರೆ ಬೆಲ್ಲದಲ್ಲಿರುವ ವಿವಿಧತೆ ಹಾಗೂ ಅದರಿಂದ ಆರೋಗ್ಯ ವೃದ್ಧಿ ಆಗುವ ಬಗ್ಗೆ ಅನೇಕರಿಗೆ ಗೊತ್ತಿರುವುದಿಲ್ಲ. ಆದರೆ ದೊಗ್ಗಳ್ಳಿಯವರ ಕಾರ್ಖಾನೆಯಲ್ಲಿ ನಾನಾ ಥರದ ಬೆಲ್ಲ ತಯಾರಾಗುತ್ತದೆ.

  1. ಮೈಲ್ಡ್ ಬೆಲ್ಲ: ಇವು ಸಕ್ಕರೆಯಷ್ಟೇ ಆಕಾರದ ಬೆಲ್ಲದ ಪುಡಿಗಳು. ಈ ಬೆಲ್ಲವನ್ನು ಶುಗರ್ ಇದ್ದವರೂ ಕೂಡ ದಿನಕ್ಕೆ 25-30 ಗ್ರಾಂನಷ್ಟು ತಿನ್ನಬಹುದು. ಇದು ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
  2. ಮಕ್ಕಳ ಸ್ಪೇಷಲ್ ಬೆಲ್ಲ: ಈ ಬೆಲ್ಲ ಜೋಳದ ಕಣದಷ್ಟು ಆಕಾರವನ್ನು ಹೊಂದಿರುತ್ತದೆ. ಬಿಸಿ ಹಾಲಿನಲ್ಲಿ ಇದನ್ನು ಮಿಕ್ಸ್ ಮಾಡಿ ಕೊಟ್ಟರೆ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಅದೇ ರೀತಿಯಲ್ಲಿ ಈ ಬೆಲ್ಲವನ್ನು ದೇಹದಲ್ಲಿ ರಕ್ತ ಕಡಿಮೆ ಇದ್ದವರೂ ಸೇವಿಸಬಹುದು.
  3. ಗ್ರಾನ್ಯುಅಲ್ ಸ್ಟ್ರಾಂಗ್ ಬೆಲ್ಲ: ಇದು ಒಂದು ಶೇಂಗಾ ಕಾಳಿನಷ್ಟು ದೊಡ್ಡದಿರುತ್ತದೆ. ಗ್ಯಾಸ್ಟಿçಕ್ ಹಾಗೂ ಆ್ಯಸಿಡಿಟಿ ಇದ್ದವರು ಇದನ್ನು ಸೇವಿಸಬಹುದು.
  4. ಅತಿದೊಡ್ಡ ಬೆಲ್ಲ: ಈ ಮೂರಕ್ಕಿಂತಲೂ ಈ ಬೆಲ್ಲ ಆಕಾರದಲ್ಲಿ ದೊಡ್ಡದಿರುತ್ತದೆ. ಇದನ್ನು ಬೇಕರಿ ಅಥವಾ ರೆಡಿಮೇಡ್ ಫುಡ್‌ಗೆ ಬಳಸಿಕೊಳ್ಳಬಹುದು.
  5. ಕೃಷಿ ಬೆಲ್ಲ: ಇದನ್ನು ಸಾವಯವ ಕೃಷಿಗೆಂದೇ ವಿಶೇಷವಾಗಿ ತಯಾರಿ ಮಾಡಲಾಗುತ್ತದೆ.

ಮೇಲಿನ ಈ ಎಲ್ಲಾ ಮಾಹಿತಿ ನೀಡಿದ್ದು ದೊಗ್ಗಳ್ಳಿ ಸಾವಯವ ಬೆಲ್ಲ ಕಾರ್ಖಾನೆಯ ಸಂಸ್ಥಾಪಕಿ ವಿಮಲಾ ನಿರಂಜನ್ ಅವರು. ಬೆಲ್ಲವನ್ನು ಇಷ್ಟೆಲ್ಲಾ ರೀತಿಯಲ್ಲಿ ಮಾಡಬಹುದು, ಇಷ್ಟೆಲ್ಲಾ ಕೆಲಸಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂಬುದು ಅನೇಕರಿಗೆ ಗೊತ್ತಿರುವುದಿಲ್ಲ. ಅಲ್ಲವೇ?

20ಕ್ಕೂ ಹೆಚ್ಚು ಮಹಿಳೆಯರಿಗೆ ಕೆಲಸ: ಇಂದು ಈ ಉದ್ದಿಮೆ ಲಕ್ಷಾಂತರ ರೂಪಾಯಿ ದುಡಿಯುತ್ತಿದೆ. ತಮ್ಮ ಕಾರ್ಖಾನೆಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರಿಗೆ ವಿಮಲಾ ಅವರು ಕೆಲಸ ಕೊಟ್ಟಿದ್ದಾರೆ.

ಇವತ್ತಿಗೆ ಅವರ ಟರ್ನ್ಓವರ್ ಲಕ್ಷಗಟ್ಟಲೇ ಇದೆ. ಖುದ್ದು ವಿಮಲಾ ನಿರಂಜನ್ ಅವರೇ ಬೆಳಗ್ಗೆಯಿಂದ ರಾತ್ರಿ 11ರವರೆಗೆ ಖುದ್ದು ತಾವೇ ಎಲ್ಲದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಆದರೆ ಈ ಕೆಲಸ ಇಷ್ಟು ಸುಲಭದ್ದಾಗಿರಲಿಲ್ಲ. ಮೊದಲು ಕರಿ ಬೆಲ್ಲವನ್ನು ತಯಾರಿ ಮಾಡಿ ಮಾರಾಟ ಮಾಡಲು ಮುಂದಾದಾಗ ಜನ ಅದಕ್ಕೆ ಕೊಂಕಾಡಿದ್ದರಂತೆ. ಆದರೆ ಧೃತಿಗೆಡದ ವಿಮಲಾ ದಂಪತಿ ಅಂಗಡಿ ಅಂಗಡಿಗೆ ಹೋಗಿ ಸಾವಯವ ಬೆಲ್ಲವನ್ನು ಮಾರಾಟ ಮಾಡಿದ್ದರು.

ಉದ್ದಿಮೆಯ ಆರಂಭದಲ್ಲೇ ಸುಮಾರು 2 ಕೋಟಿ ರೂಪಾಯಿಯನ್ನು ಈ ಕೆಲಸಕ್ಕಾಗಿ ವಿಮಲಾ ದಂಪತಿ ಮೀಸಲಾಗಿಟ್ಟಿದ್ದರು. ತಮ್ಮದೇ ಒಂದೂವರೆ ಎಕರೆ ಜಾಗದಲ್ಲಿ ಉದ್ದಿಮೆ ಸ್ಥಾಪಿಸಿದ್ದರು. ಇಂದು ಅದು ಯಶಸ್ಸು ಕಂಡಿದೆ, ಕಾಣುತ್ತಿದೆ. ರಾಜ್ಯದ ನಾನಾ ಕಡೆಯಿಂದ ದೊಗ್ಗಳ್ಳಿ ಸಾವಯವ ಬೆಲ್ಲಕ್ಕೆ ಬೇಡಿಕೆ ಬರುತ್ತಿದೆ.

ಬೆಲ್ಲದಲ್ಲಿ ಸೋಪ್ ತಯಾರಿಸೋದು ನನ್ನ ಮುಂದಿನ ಗುರಿ: ವಿಮಲಾ ನಿರಂಜನ
ಬೆಲ್ಲದಲ್ಲಿ ಸೋಪ್ ತಯಾರಿಸಬೋದು ಎನ್ನುತ್ತಾರೆ ವಿಮಲಾ ಅವರು. ಈ ಉತ್ಪನ್ನವನ್ನ ತಯಾರು ಮಾಡುವುದೇ ಅವರ ಮುಂದಿನ ಗುರಿ ಅಂತೆ. ಜತೆಗೆ ಬೆಲ್ಲದಿಂದ ಐಸ್‌ಕ್ರೀಂ ಮಾಡುವುದು ಹಾಗೂ ಬಿಸ್ಕತ್ ತಯಾರಿಸುವ ಉದ್ದೇಶವನ್ನೂ ಅವರು ಹೊಂದಿದ್ದಾರಂತೆ. ಸತತ ಆರು ವರ್ಷಗಳ ಪರಿಶ್ರಮದ ಫಲವಾಗಿ ಇಂದು ನಮ್ಮ ಉದ್ದಿಮೆ ಈ ಹಂತಕ್ಕೆ ಬಂದು ನಿಂತಿದೆ. ಇಂಥದ್ದನ್ನೆಲ್ಲ ಮಾಡಲು ತಾಳ್ಮೆ ಅತ್ಯಗತ್ಯ. ಅದು ನಮಗಿತ್ತು.

Previous articleಭಾರತೀಯ ರೈಲ್ವೆಗೆ ಕರಾಳ ಬುಧವಾರ: ಎರಡು ಪ್ರತ್ಯೇಕ ದುರಂತಗಳಲ್ಲಿ 10 ಮಂದಿ ದುರ್ಮರಣ
Next articleಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ, ಕ್ಯನ್ಸರ್‌ ಪ್ರತಿಬಂಧಕ!

LEAVE A REPLY

Please enter your comment!
Please enter your name here