ದರ್ಶನ್ ಆಟ ಶುರು: ಕೊಲೆ, ಅಪಹರಣ ಸೇರಿ 11 ಆರೋಪಗಳ ಚಕ್ರವ್ಯೂಹ!

0
13

ಬೆಂಗಳೂರು: ಇಡೀ ಸ್ಯಾಂಡಲ್‌ವುಡ್ ಹಾಗೂ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣವು ಇದೀಗ ನಿರ್ಣಾಯಕ ಹಂತ ತಲುಪಿದ್ದು, ನಟ ದರ್ಶನ್ ತೂಗುದೀಪ, ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ ಎಲ್ಲಾ 17 ಆರೋಪಿಗಳ ವಿರುದ್ಧ ನ್ಯಾಯಾಲಯವು ಗಂಭೀರ ಆರೋಪಗಳನ್ನು ನಿಗದಿಪಡಿಸಿದೆ.

ಇದರೊಂದಿಗೆ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾದ ಕ್ರೈಂ ಪ್ರಕರಣಗಳಲ್ಲೊಂದಾದ ಇದರ ವಿಚಾರಣೆಗೆ ಅಧಿಕೃತವಾಗಿ ಚಾಲನೆ ದೊರೆತಿದೆ.

ಆ ಒಂದು ಮೆಸೇಜ್‌ನಿಂದ ಬರ್ಬರ ಹತ್ಯೆಯವರೆಗೆ: ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಇನ್‌ಸ್ಟಾಗ್ರಾಮ್‌ನಲ್ಲಿ ಕಳುಹಿಸಿದರೆನ್ನಲಾದ ಅಶ್ಲೀಲ ಸಂದೇಶವೇ ಈ ಇಡೀ ದುರಂತಕ್ಕೆ ಮೂಲ ಕಾರಣ ಎಂದು ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಇದೇ ದ್ವೇಷದ ಹಿನ್ನೆಲೆಯಲ್ಲಿ, ದರ್ಶನ್, ಪವಿತ್ರಾ ಮತ್ತು ಇತರ 15 ಮಂದಿ ಸೇರಿ ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಮೊದಲಿಗೆ, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಿಸಿ, ನಗರದ ಹೊರವಲಯದಲ್ಲಿರುವ ಪಟ್ಟಣಗೆರೆ ಶೆಡ್‌ನಲ್ಲಿ ಅಕ್ರಮವಾಗಿ ಕೂಡಿಹಾಕಲಾಗಿದೆ.

ಅಲ್ಲಿ, ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದರ್ಶನ್ ಅವರೇ ರೇಣುಕಾಸ್ವಾಮಿಯ ಎದೆ ಮತ್ತು ಮರ್ಮಾಂಗಕ್ಕೆ ಒದ್ದು ಸಾವಿಗೆ ಕಾರಣರಾದರು ಎಂಬ ಆಘಾತಕಾರಿ ಅಂಶವೂ ದೋಷಾರೋಪ ಪಟ್ಟಿಯಲ್ಲಿದೆ.

ಸಾಕ್ಷ್ಯ ನಾಶಕ್ಕೆ 30 ಲಕ್ಷದ ಪ್ಲಾನ್: ಕೃತ್ಯ ಎಸಗಿದ ನಂತರ ಅದನ್ನು ಮುಚ್ಚಿಹಾಕಲು ಮತ್ತು ಪ್ರಮುಖ ಆರೋಪಿಗಳನ್ನು ಕಾನೂನಿನ ಕುಣಿಕೆಯಿಂದ ಪಾರುಮಾಡಲು ವ್ಯವಸ್ಥಿತ ಪ್ರಯತ್ನ ನಡೆದಿದೆ. ಇದಕ್ಕಾಗಿ 30 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಬಳಸಿಕೊಂಡು, ಬೇರೆ ವ್ಯಕ್ತಿಗಳ ಮೇಲೆ ಕೊಲೆ ಆರೋಪವನ್ನು ಹೊರಿಸಲು ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲು ಸಂಚು ರೂಪಿಸಲಾಗಿತ್ತು ಎಂಬ ಗಂಭೀರ ಆರೋಪವೂ ಆರೋಪಿಗಳ ಮೇಲಿದೆ.

ನ್ಯಾಯಾಲಯದಲ್ಲಿ “ನಾವು ನಿರಪರಾಧಿಗಳು” ಎಂದ ಆರೋಪಿಗಳು: ಸೋಮವಾರ, ಪರಪ್ಪನ ಅಗ್ರಹಾರ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಎಲ್ಲಾ 17 ಆರೋಪಿಗಳನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು, “ಕೊಲೆ, ಅಪಹರಣ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯನಾಶದಂತಹ ಗಂಭೀರ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದಾಗ, ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಎಲ್ಲರೂ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದರು.

ಆರೋಪಿಗಳು ನಿರಪರಾಧಿಗಳು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 10ಕ್ಕೆ ಮುಂದೂಡಿದೆ. ಅಂದಿನಿಂದ ಸಾಕ್ಷಿಗಳ ವಿಚಾರಣೆ ಆರಂಭವಾಗುವ ಸಾಧ್ಯತೆಯಿದ್ದು, ಇಡೀ ಪ್ರಕರಣವು ಹೊಸ ತಿರುವು ಪಡೆಯಲಿದೆ.

Previous articleಬೆಳಗಾವಿಯಲ್ಲಿ ವಿಜಯೇಂದ್ರ ಗುಡುಗು: ‘ಇದು ರೈತರ ನೋವು ಕೇಳದ ಸರ್ಕಾರ!’
Next articleಮೈಸೂರುಗೆ ‘ಗ್ರೇಟರ್’ ಪಟ್ಟ: ಮೈಸೂರಿನಲ್ಲಿ ಭೂಮಿಗೆ ಬರಲಿದೆಯೇ ಬಂಗಾರದ ಬೆಲೆ?

LEAVE A REPLY

Please enter your comment!
Please enter your name here