ಬೆಳಗಾವಿ: ಕಬ್ಬಿಗೆ ನ್ಯಾಯಯುತ ಬೆಲೆ ಸಿಗದೆ ಬೀದಿಗಿಳಿದು ಹೋರಾಟ ನಡೆಸುತ್ತಿರುವ ರೈತರ ಆಕ್ರೋಶದ ಬೆಂಕಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತುಗಳು ಮತ್ತಷ್ಟು ತುಪ್ಪ ಸುರಿದಿವೆ.
ಗುರ್ಲಾಪುರದಲ್ಲಿ ಪ್ರತಿಭಟನಾನಿರತ ರೈತರನ್ನುದ್ದೇಶಿಸಿ ಮಾತನಾಡಿದ ಅವರು, “ಇದು ರೈತರ ಸಂಕಷ್ಟಕ್ಕೆ ಸ್ಪಂದಿಸದ, ಅವರ ನೋವು ಕೇಳದ ಸರ್ಕಾರ” ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘ನಾನು ಯಡಿಯೂರಪ್ಪನ ಮಗನಾಗಿ ಬಂದಿದ್ದೇನೆ’: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ವಿಜಯೇಂದ್ರ, ರೈತರ ಬೇಡಿಕೆಗಳು ಸಂಪೂರ್ಣವಾಗಿ ನ್ಯಾಯಯುತವಾಗಿವೆ. ಸಾವಿರಾರು ರೈತರು ಬೀದಿಗಿಳಿದರೂ ಈ ಸರ್ಕಾರ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಸರ್ಕಾರ ಸ್ಪಂದಿಸದಿದ್ದಾಗ ವಿರೋಧ ಪಕ್ಷವಾಗಿ ನಾವು ಧ್ವನಿಯಾಗಬೇಕಿದೆ. ಇಂದು ನಾನು ಇಲ್ಲಿಗೆ ಕೇವಲ ಬಿಜೆಪಿ ಅಧ್ಯಕ್ಷನಾಗಿ ಬಂದಿಲ್ಲ, ರೈತ ನಾಯಕ ಯಡಿಯೂರಪ್ಪನ ಮಗನಾಗಿ ಬಂದಿದ್ದೇನೆ ಎಂದು ಹೇಳುವ ಮೂಲಕ ತಮ್ಮ ತಂದೆಯ ರೈತಪರ ಹೋರಾಟಗಳನ್ನು ನೆನಪಿಸಿದರು.
2014ರಲ್ಲಿ ಇದೇ ಕಬ್ಬಿನ ದರಕ್ಕಾಗಿ ರೈತ ವಿಠ್ಠಲ್ ಅರಬಾವಿ ಅಧಿವೇಶನದ ಮುಂದೆ ಪ್ರಾಣ ತೆತ್ತಾಗ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಯಡಿಯೂರಪ್ಪನವರು ಹೋರಾಡಿ ನ್ಯಾಯ ಕೊಡಿಸಿದ್ದರು ಎಂಬುದನ್ನು ಸ್ಮರಿಸಿದರು.
‘ರೈತರ ಆದಾಯದಿಂದ ಬೊಕ್ಕಸ, ಆದರೆ ರೈತರಿಗೆ ಸಿಗದು ಕಾಸು’: ಸರ್ಕಾರದ ನಿರ್ಲಕ್ಷ್ಯವನ್ನು ಕಟುವಾಗಿ ಟೀಕಿಸಿದರು, “ರಾಜ್ಯದ ಸಕ್ಕರೆ ಕಾರ್ಖಾನೆಗಳು ವಾರ್ಷಿಕ 6 ಮಿಲಿಯನ್ ಟನ್ ಕಬ್ಬನ್ನು ಅರೆಯುತ್ತವೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 50-60 ಸಾವಿರ ಕೋಟಿ ರೂಪಾಯಿ ಆದಾಯ ಬರುತ್ತದೆ.
ಆದರೆ, ಆ ಆದಾಯಕ್ಕೆ ಕಾರಣರಾದ ರೈತರು ಇಂದು ಸಂಕಷ್ಟದಲ್ಲಿದ್ದರೂ ಅವರ ಪರಿಸ್ಥಿತಿ ಕೇಳಲು ಸರ್ಕಾರ ಮುಂದೆ ಬರುತ್ತಿಲ್ಲ. ಅತಿವೃಷ್ಟಿಯಿಂದ ಉತ್ತರ ಕರ್ನಾಟಕ ತತ್ತರಿಸಿದಾಗಲೂ ಯಾವೊಬ್ಬ ಸಚಿವರೂ ಇತ್ತ ತಲೆಹಾಕಲಿಲ್ಲ. ಈ ಸರ್ಕಾರಕ್ಕೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೇ? ಎಂದು ಪ್ರಶ್ನಿಸಿದರು.
‘ಸರ್ಕಾರದಲ್ಲಿ ಕುರ್ಚಿಗಾಗಿ ಯುದ್ಧ ನಡೆದಿದೆ’: ಸರ್ಕಾರದ ಆಂತರಿಕ ಕಚ್ಚಾಟದ ಬಗ್ಗೆಯೂ ಪ್ರಸ್ತಾಪಿಸಿದ ವಿಜಯೇಂದ್ರ, “ಡಿಸೆಂಬರ್ ಅಧಿವೇಶನಕ್ಕೆ ಹೊಸ ಸಿಎಂ ಬರುತ್ತಾರೆ ಎಂದು ಕೇವಲ ರಾಮುಲು ಹೇಳುತ್ತಿಲ್ಲ, ಆಡಳಿತ ಪಕ್ಷದ ಶಾಸಕರು, ಸಚಿವರೇ ಈ ಮಾತುಗಳನ್ನಾಡುತ್ತಿದ್ದಾರೆ. ಸರ್ಕಾರದಲ್ಲಿ ಅಭಿವೃದ್ಧಿಗಿಂತ ಕುರ್ಚಿಗಾಗಿ ಯುದ್ಧವೇ ಜೋರಾಗಿ ನಡೆದಿದೆ. ಬಿಹಾರ ಚುನಾವಣೆ ಫಲಿತಾಂಶದ ನಂತರ ಎಲ್ಲವೂ ಬಯಲಾಗುತ್ತದೆ,” ಎಂದು ಭವಿಷ್ಯ ನುಡಿದರು.
ತಕ್ಷಣವೇ ಮುಖ್ಯಮಂತ್ರಿಗಳು ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಅಧಿಕಾರಿಗಳ ಸಭೆ ಕರೆದು ರೈತರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

























