ಸಂ.ಕ. ಸಮಾಚಾರ ಮೈಸೂರು: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರು ಏನೇ ಹೇಳಿದರು ಅದು ಮುಖ್ಯವಲ್ಲ. ಕಾಂಗ್ರೆಸ್ ಹೈ ಕಮಾಂಡ್ ಹೇಳುವುದಷ್ಟೇ ಮುಖ್ಯ. ನವೆಂಬರ್ 15ಕ್ಕೆ ದೆಹಲಿಯಲ್ಲಿ ರಾಹುಲ್‌ಗಾಂಧಿಯನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಬಿಹಾರ ಮುಖಂಡರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಗರಂ ಆದ ಸಿಎಂ, ಕಾಂಗ್ರೆಸ್ ಹೈ ಕಮಾಂಡ್ ಏನಾದರೂ ಸಿಎಂ ಬದಲಾವಣೆ ಮಾಡುವ ಬಗ್ಗೆ ಹೇಳಿದಿಯಾ ಎಂದು ಪ್ರಶ್ನಿಸಿದರು. ಯಾಕೆ ಪದೆ ಪದೆ ಅದನ್ನೇ ಮಾತನಾಡುತ್ತಿದ್ದಿರಾ ಎಂಬುವುದೇ ಗೊತ್ತಾಗುತ್ತಿಲ್ಲ. ಜನ ಮಾತನಾಡುತ್ತಿಲ್ಲ, ಮಾಧ್ಯಮದವರೇ ಪದೇ ಪದೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಹೈ ಕಮಾಂಡ್ ಇದೆ. ಹೈ ಕಮಾಂಡ್ ಹೇಳುವುದು ಮಾತ್ರವೇ ಮುಖ್ಯ ಹಾಗೂ ಅದೇ ಅಂತಿಮ.
ನಾನು ಬಿಹಾರ ಚುನಾವಣೆ ಬಳಿಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೇನೆ. ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡುತ್ತೇನೆ. ಇದಕ್ಕಾಗಿಯೇ ನವಂಬರ್ 15ಕ್ಕೆ ದೆಹಲಿಗೆ ಹೋಗುತ್ತಿದ್ದೇನೆ. ಪುನಾರಚನೆ ಬಗ್ಗೆ ಹೈ ಕಮಾಂಡ್ ಏನು ಸೂಚನೆ ನೀಡುತ್ತದೆಯೋ ಆ ರೀತಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಹುಲಿ ದಾಳಿ ಪ್ರಕರಣದ ಪರಿಶೀಲನೆಗೆ ಶೀಘ್ರದಲ್ಲಿ ಸಭೆ: ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೆಸಾರ್ಟ್ಗಳು ತಲೆ ಎತ್ತುತ್ತಿದ್ದು, ಸಫಾರಿಗಳು ಸೇರಿದಂತೆ ಜನರ ಸಂಚಾರ ಹೆಚ್ಚುತ್ತಿದೆ. ನೀರು ಮತ್ತು ಮೇವಿನ ಕೊರತೆ ಹಾಗೂ ಹುಲಿ ಚಿರತೆ, ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಸಭೆ ಈಗಾಗಲೇ ನಡೆಸಿದ್ದು, ನನ್ನ ಅಧ್ಯಕ್ಷತೆಯಲ್ಲಿಯೂ ಶೀಘ್ರದಲ್ಲಿ ಸಭೆ ನಡೆಯಲಿದೆ.
ಅಕ್ರಮವಾಗಿ ರೆಸಾರ್ಟ್‌ಗಳನ್ನು ನಡೆಸುತ್ತಿರುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿಗರಿಗಾಗಿ ಕೈಗೊಳ್ಳುವ ಸಫಾರಿಗಳ ಸಂಖ್ಯೆಯನ್ನೂ ಕಡಿಮೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಒಂದು ಸತ್ಯ ಹೇಳುತ್ತೇನೆ ಕೇಳಿ. ಜನರು ಕಾಡಿನೊಳಗೆ ಓಡಾಡಲು ಶುರುಮಾಡಿದ್ದಾರೆ. ಹೀಗಾಗಿ ಪ್ರಾಣಿಗಳು ಹೊರಬರಲು ಪ್ರಾರಂಭಿಸಿದೆ. ಕಾಡಿನೊಳಗೆ ಪ್ರಾಣಿಗಳಿಗೆ ಮೇವು ನೀರು ಸಿಗುತ್ತಿಲ್ಲ. ಇದರಿಂದಲೂ ನಾಡಿಗೆ ಪ್ರಾಣಿಗಳು ಬರುತ್ತಿದೆ ಎಂದು ಹೇಳಿದರು.

























