ದಾವಣಗೆರೆ: ಕನ್ಹೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಕಾವಿ ವಸ್ತ್ರ ಧರಿಸಿ ಅಸಭ್ಯ ಪದಗಳನ್ನು ಬಳಸಿ ಲಿಂಗಾಯತ ಮಠಾಧೀಶರನ್ನು ನಿಂದಿಸಿರುವುದು ಅತ್ಯಂತ ಖಂಡನೀಯ ಎಂದು ಕೂಡಲ ಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಗುರುಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವವರು. ಆದರೆ, ತಮ್ಮ ವಸ್ತ್ರದ ಗೌರವ ಮರೆತು ಧರ್ಮಗುರುಗಳ ವಿರುದ್ಧ ಅವಮಾನಕಾರಿ ಶಬ್ದ ಬಳಸುವುದು ನೈತಿಕವಾಗಿ ತಪ್ಪು ಎಂದರು.
“ಲಿಂಗಾಯತ ಮಠಾಧೀಶರ ವಿರುದ್ಧ ಕಾಡಸಿದ್ಧೇಶ್ವರ ಸ್ವಾಮೀಜಿಯ ಹೇಳಿಕೆ ಧಾರ್ಮಿಕ ಸಮಾನತೆಯ ಆತ್ಮಕ್ಕೆ ಧಕ್ಕೆಯಾಗಿದೆ. ಇಂಥ ಹೇಳಿಕೆಗಳು ಧರ್ಮಗುರುಗಳ ಗೌರವ ಹರಾಜು ಮಾಡುವಂತಿವೆ” ಎಂದು ಮಾತೆ ಗಂಗಾದೇವಿ ಖಂಡಿಸಿದರು.
ಅವರು ಮುಂದುವರಿದು, “ಸ್ವಾಮೀಜಿಯ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಕೆಲವು ಶಾಸಕರು ಮತ್ತು ರಾಜಕೀಯ ನಾಯಕರು ತಮ್ಮ ನಿಲುವು ಬದಲಿಸಬೇಕು. ಈ ವಿಚಾರವನ್ನು ಖಂಡಿಸಲು ರಾಷ್ಟ್ರೀಯ ಬಸವ ದಳ ಜಿಲ್ಲಾ ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡಿದ್ದು, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ,” ಎಂದರು.


























