ನಮ್ಮದು ಕೃಷಿ ಪ್ರಧಾನ ರಾಜ್ಯ. ವರುಣನೇ ನಮ್ಮ ಅತ್ಯಂತ ದೊಡ್ಡ ಉದ್ಯೋಗದಾತ. ಅವನ ಮುಂದೆ ಯಾವ ಉದ್ಯಮಿಯೂ ಇಲ್ಲ.
ಮಾತು ಬೆಳ್ಳಿ ಮೌನ ಬಂಗಾರ ಎಂಬ ಮಾತು ಕರ್ನಾಟಕಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಕನ್ನಡಿಗರು ತೂಕದ ಮಾತಿಗೆ ಬೆಲೆ ಕೊಡುವವರು. ಎಲ್ಲೆ ಮೀರಿ ಹೋಗಿಲ್ಲ. ಹೋಗುವುದೂ ಇಲ್ಲ. ಅದರಿಂದಲೇ ರಾಜ್ಯದ ಘನತೆ ಗೌರವಕ್ಕೆ ಕುಂದುಬಂದಿಲ್ಲ. ಇಂದಿನ ಪ್ರಚಾರ ಯುಗದಲ್ಲಿ ಸಾಧನೆ ಮಾಡುವುದಕ್ಕಿಂತ ಹೇಳಿಕೊಳ್ಳುವುದೇ ಹೆಚ್ಚು. ನಮಗೆ ಇದರಲ್ಲಿ ನಂಬಿಕೆ ಇಲ್ಲ. ದೇಶದಲ್ಲಿರುವ ಎಲ್ಲ ಸಮಸ್ಯೆಗಳೂ ನಮ್ಮ ರಾಜ್ಯದಲ್ಲಿ ತಲೆಎತ್ತಿದ್ದು ನಿಜ. ಆದರೆ ಅದನ್ನು ಜನಸಾಮಾನ್ಯರಿಗೆ ತೊಂದರೆಯಾಗದಂತೆ ನಿವಾರಿಸಿದ್ದು ನಮ್ಮ ಪ್ರೌಢಿಮೆಗೆ ಸಾಕ್ಷಿ.
ಮೊದಲನೆಯದಾಗಿ ಕಾನೂನು ಸುವ್ಯವಸ್ಥೆ ಪಾಲನೆ. ಈ ವಿಚಾರದಲ್ಲಿ ನಮ್ಮ ರಾಜ್ಯ ಮುಂದಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಪೊಲೀಸರು ಎನ್ನುವುದಕ್ಕಿಂತ ಜನಸಾಮಾನ್ಯರ ಬೆಂಬಲ ಸಿಗದೇ ಇರುವುದು ಇದರಿಂದ ಹೊರಗಿನಿಂದ ಬಂದ ಶಕ್ತಿಗಳು ತಂತಾನೇ ಮಾಯವಾಗುತ್ತವೆ. ಎಲ್ಲ ರಾಜ್ಯಗಳ ಹಾಗೆ ನಮ್ಮ ರಾಜ್ಯವೂ ಕೊರೊನಾದಿಂದ ಪರಿತಪಿಸಿತು. ಆದರೂ ಚೇತರಿಕೆ ಕಂಡಿತು.
ಹಿಂದೆ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂಬ ಕೂಗು ಕೇಳಿ ಬರುತ್ತಿತ್ತು. ಅದಕ್ಕೆ ಈಗ ವಿರಾಮ. ಇನ್ನು ನೈಸರ್ಗಿಕ ವಿಕೋಪ. ಇದನ್ನು ಎದುರಿಸುವ ಶಕ್ತಿ ರಾಜ್ಯಕ್ಕಿದೆ. ನಮ್ಮದು ಕೃಷಿ ಪ್ರಧಾನ ರಾಜ್ಯ. ವರುಣನೇ ನಮ್ಮ ಅತ್ಯಂತ ದೊಡ್ಡ ಉದ್ಯೋಗದಾತ. ಅವನ ಮುಂದೆ ಯಾವ ಉದ್ಯಮಿಯೂ ಇಲ್ಲ. ಈಗ ಬಾರಿ ಉತ್ತಮ ಮಳೆಯಾಗಿದೆ. ಕೆರೆಕಟ್ಟೆಗಳು ತುಂಬಿವೆ. ಜಲಾಶಯಗಳಲ್ಲಿ ಜಲರಾಶಿ ಕಣ್ಣುತುಂಬಿ ನಿಂತಿವೆ. ದೇಶದ ಮೊದಲ 5 ರಾಜ್ಯಗಳಲ್ಲಿ ಕರ್ನಾಟಕವೂ ಒಂದು.
ದೇಶದ ಒಟ್ಟು ಸಾಫ್ಟ್‌ವೇರ್ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ. 38. ಒಟ್ಟು 21 ಲಕ್ಷ ಜನ ಈ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. 16 ಶತಕೋಟಿ ಡಾಲರ್ ಬಂಡವಾಳ ರೂಪದಲ್ಲಿ ಕರ್ನಾಟಕಕ್ಕೆ ಬಂದಿದೆ. ಜಲವಿದ್ಯುತ್ ಉತ್ಪಾದನೆ ಕೂಡ ಅಧಿಕಗೊಂಡಿದೆ. ಕೈಗಾರಿಕೆಗಳಲ್ಲಿ ಹೆಚ್ಚು ಉದ್ಯಮಿಗಳು ಸ್ವಯಂ ವಿದ್ಯುತ್ ಉತ್ಪಾದನೆಗೆ ಆಸಕ್ತಿ ತೋರುತ್ತಿರುವುದು ಶುಭಸೂಚನೆ. ಇದರಿಂದ ವಿದ್ಯುತ್ ರಂಗದಲ್ಲಿ ಖಾಸಗಿ ಬಂಡವಾಳ ಅಧಿಕಗೊಳ್ಳಲಿದೆ.
ಒಟ್ಟು ಉತ್ಪಾದನೆಯಲ್ಲಿ ಶೇ. 40ರಷ್ಟು ಸೋಲಾರ್ ವಿದ್ಯುತ್ ಆಗಿರುವುದು ಮತ್ತೊಂದು ಗಮನಾರ್ಹ ಬೆಳವಣಿಗೆ. ರಾಜ್ಯದಲ್ಲಿ ಒಟ್ಟು 8.5 ಲಕ್ಷ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿವೆ. ಕೈಗಾರಿಕೆಯೊಂದಿಗೆ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ವಿತರಣೆ, ಕುಡಿಯುವ ನೀರು, ವಸತಿ ಸವಲತ್ತು ಉತ್ತಮಗೊಳ್ಳುತ್ತಿದೆ. ಇದೆಲ್ಲವೂ ಇರುವುದರಿಂದ ವಿದೇಶಿ ನೇರ ಬಂಡವಾಳ ಅಧಿಕಗೊಳ್ಳಲು ಕಾರಣವಾಗುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಕೌಟುಂಬಿಕ ವಾತಾವರಣವಿದೆ.
ಹೊರಗಿನವರು ಯಾವುದೇ ಸಮಸ್ಯೆ ಇಲ್ಲದೆ ನೆಮ್ಮದಿಯಾಗಿ ಬದುಕಬಹುದು. ಈ ವಾತಾವರಣ ಬೇರೆ ರಾಜ್ಯಗಳಲ್ಲಿ ಇಲ್ಲ ಎಂಬುದು ಸ್ಪಷ್ಟ. ಹೊರಗಿನಿಂದ ಬರುವ ಜನ ಮೊದಲು ಹುಡುಕುವುದು ಈ ಕೌಟುಂಬಿಕ ವಾತಾವರಣವನ್ನೇ ಎಂಬುದನ್ನು ಮರೆಯುವ ಹಾಗಿಲ್ಲ. ಕೊರೊನಾ ನಿವಾರಣೆಯಲ್ಲಿ ಕರ್ನಾಟಕ ಮುಂದಿದ್ದ ಹಾಗೆ ಈಗ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ದಿಕ್ಕಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ಜನಸಾಮಾನ್ಯರು ಸ್ವಯಂಪ್ರೇರಣೆಯಿಂದ ಕಾನೂನು ಉಲ್ಲಂಘಿಸದೇ ಇರುವ ಹಾಗೆ ಜಾಗೃತಿ ಮೂಡಿಸುವುದಷ್ಟೇ ಸರ್ಕಾರದ ಕರ್ತವ್ಯ. ಕರ್ನಾಟಕದ ಎಲ್ಲ ಪ್ರಮುಖ ನಗರಗಳಿಗೆ ರಸ್ತೆ ಮತ್ತು ರೈಲು ಸಂಪರ್ಕ ಕಲ್ಪಿಸುವ ಕೆಲಸ ಭರದಿಂದ ಸಾಗಿದೆ. ಮೈಸೂರು-ಬೆಂಗಳೂರು 6 ಪಥಗಳ ಹೆದ್ದಾರಿ, ಪುಣೆ-ಬೆಂಗಳೂರು-ಚೆನೈ ಕೈಗಾರಿಕಾ ಕಾರಿಡಾರ್‌ಗಳು ರಾಜ್ಯದ ಚಿತ್ರಣವನ್ನೇ ಬದಲಿಸಿದೆ.
ಇದಕ್ಕೆ ಕೇಂದ್ರದ ನೆರವೂ ಲಭಿಸಿದೆ. ಆರ್ಥಿಕ ಪ್ರಗತಿ ಎಂದರೆ ಕೇವಲ ಐಷಾರಾಮಿ ಹೊಟೇಲ್, ಗಗನಚುಂಬಿ ಕಟ್ಟಡಗಳ ನಿರ್ಮಾಣವಲ್ಲ, ಕೋಟ್ಯಧಿಪತಿಗಳು ನಮ್ಮಲ್ಲಿ ಬಂದು ವ್ಯಾಪಾರ ವ್ಯವಹಾರ ನಡೆಸಿದರೆ ನಮ್ಮ ಖಜಾನೆ ತುಂಬುವುದಲ್ಲ ಕಟ್ಟಕಡೆಯ ಹಳ್ಳಿಯ ಮಗುವಿಗೆ ಎಲ್ಲ ಶಿಕ್ಷಣ ಸವಲತ್ತು ಕಲ್ಪಿಸಿ ಅದು ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಎಲ್ಲ ಮಕ್ಕಳಿಗೆ ಸರಿಸಮಾನವಾಗಿ ನಿಲ್ಲುವ ಬುದ್ಧಿಮತ್ತೆಯನ್ನು ಬೆಳೆಸುವುದು ಮುಖ್ಯ. ಈ ದಿಸೆಯಲ್ಲಿ ಕರ್ನಾಟಕ ಇಡುತ್ತಿರುವ ಹೆಜ್ಜೆ ಗಮನಾರ್ಹ. ಇದಕ್ಕೆ ನಿಸರ್ಗವೂ ನಮಗೆ ಸಹಕಾರಿಯಾಗಿದೆ.
ಇಲ್ಲಿಯ ತಂಪಾದ ಹವಾಗುಣ ಉತ್ತರ ಭಾರತದ ಜನರನ್ನು ಕೈಬೀಸಿ ಕರೆಯುತ್ತಿದೆ. ನಾವು ಹೊರಗಿನಿಂದ ಯಾರೇ ಬರಲಿ ಇವನಾರವ, ಇವನಾರವ ಎಂದು ಕೇಳುವುದಿಲ್ಲ. ಇವ ನಮ್ಮವ ಎನ್ನುತ್ತೇವೆ. ಅದರಿಂದಲೇ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದುಬರಲು ಕಾರಣವಾಗಿದೆ. ನಮ್ಮ ರಾಜ್ಯದ ಬೆಳವಣಿಗೆಗೆ ಸಾಕ್ಷಿಯಾಗಿ ಐಟಿ-ಬಿಟಿ, ಇಸ್ರೋ, ಡಿಆರ್‌ಡಿಒ, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಸಾಕ್ಷಿಯಾಗಿವೆ.
ನಮ್ಮ ಆರ್ಥಿಕ ಬೆಳವಣಿಗೆ ಶೇ.7.4. ದೇಶದ ಆರ್ಥಿಕ ಬೆಳವಣಿಗೆಗೆ ಐಟಿಬಿಟಿ ಕೊಡುಗೆ ಶೇ.43. ನಮ್ಮ ರಾಜ್ಯಕ್ಕೆ ಇದರಿಂದ ಒಟ್ಟು ವರಮಾನ ಶೇ.25 ಎಂಬುದನ್ನು ಮರೆಯುವ ಹಾಗಿಲ್ಲ. ಇಸ್ರೋ ಪ್ರಧಾನ ಕಚೇರಿ ನಮ್ಮಲ್ಲೇ ಇದೆ. ಇದುವರೆಗೆ 525 ಉಪಗ್ರಹ ಉಡಾವಣೆ ಮಾಡಿರುವುದು ನಮಗೊಂದು ಹೆಮ್ಮೆ. ನಮ್ಮಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಜಾಗತಿಕ ಮನ್ನಣೆ ಪಡೆದಿದೆ.
ಡಿಆರ್‌ಡಿಓ ನಮ್ಮ ಸೇನೆಯನ್ನು ಸಬಲಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅಬ್ದುಲ್ ಕಲಾಂ ರಾಷ್ಟ್ರಪತಿಯಾಗುವುದಕ್ಕೆ ಮುನ್ನ ನಮ್ಮಲ್ಲೇ ಇದ್ದರು ಎಂಬುದು ಹೆಮ್ಮೆಯ ಸಂಗತಿ. ನಮ್ಮ ರಾಜ್ಯ ಆರೋಗ್ಯ ಮತ್ತು ಕೈಗಾರಿಕೆ ರಂಗದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಅಗತ್ಯವಿದೆ. ಯುವಕರಿಗೆ ಉತ್ತಮ ಜ್ಞಾನ ಕೊಡುತ್ತಿದ್ದೇವೆ. ಅದೇರೀತಿ ಉದ್ಯೋಗ ಅವಕಾಶ ಕಲ್ಪಿಸಿಕೊಡುವುದರಲ್ಲಿ ಹೆಚ್ಚು ಗಮನಹರಿಸುವ ಅಗತ್ಯವಿದೆ.


























