ವಿಧಾನಸಭಾ ಅಧ್ಯಕ್ಷರ ಕಚೇರಿಯಲ್ಲಿ ಕೋಟ್ಯಂತರ ಭ್ರಷ್ಟಾಚಾರ ಆರೋಪ

1
74

ಮಂಗಳೂರು: ವಿಧಾನಸಭಾ ಅಧ್ಯಕ್ಷರ ಕಚೇರಿಯಲ್ಲಿ ಆಡಳಿತಾತ್ಮಕ ಸುಧಾರಣೆ ಎಂಬ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಹಾಗೂ ದುಂದುವೆಚ್ಚ ನಡೆದಿದೆ ಎಂಬ ಗಂಭೀರ ಆರೋಪವನ್ನು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾಡಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, “ಅನವಶ್ಯಕವಾಗಿ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಶಾಸಕರ ಭವನವನ್ನು ಸ್ಮಾರ್ಟ್ ಮಾಡಲಾಗುತ್ತಿದೆ. ಆದರೆ ಇದರ ಹಿಂದೆ ಭಾರೀ ದುರುಪಯೋಗ ಮತ್ತು ಹಣಕಾಸು ಅಕ್ರಮಗಳಿವೆ. ಈ ಕುರಿತು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಯಬೇಕಾಗಿದೆ” ಎಂದು ಒತ್ತಾಯಿಸಿದರು.

ಅವರು ಆರೋಪಿಸಿದ ಪ್ರಕಾರ, ವಿಧಾನಸೌಧ ಮತ್ತು ಶಾಸಕರ ಭವನಗಳಿಗೆ ದುಬಾರಿ ವಸ್ತುಗಳ ಖರೀದಿ, ಅತಿರೇಕದ ಒಳಸಜ್ಜೆ, ವಿದೇಶಿ ಅಧ್ಯಯನ ಪ್ರವಾಸಗಳ ಹೆಸರಿನಲ್ಲಿ ಅನಗತ್ಯ ವೆಚ್ಚ, ಹಾಗು ವಿಧಾನಸೌಧದ ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ಸ್ಥಾಪನೆಗೆ ಸಂಬಂಧಿಸಿದ ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ.

“ಕೋಟ್ಯಂತರ ರೂಪಾಯಿಗಳ ಮರದ ಬಾಗಿಲು, ದುಬಾರಿ ನೆಲಹಾಸು, ಪುಸ್ತಕ ಮೇಳ, ಸಭಾಂಗಣದ ಎಐ ಕ್ಯಾಮೆರಾ ಹಾಗೂ ಹೊಸ ಟಿವಿಗಳ ಖರೀದಿ, ಯಾವುದೇ ವಸ್ತು ಖರೀದಿಗೆ ಹಣಕಾಸು ಇಲಾಖೆಯ ಅನುಮತಿ ಹಾಗೂ ಟೆಂಡರ್ ಪ್ರಕ್ರಿಯೆ ಅಗತ್ಯವಾದರೂ, ಈ ಪ್ರಕರಣದಲ್ಲಿ ಆ ನಿಯಮಗಳು ಉಲ್ಲಂಘನೆಗೊಂಡಿವೆ. “ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ಕೋಟ್ಯಂತರ ವೆಚ್ಚ ಮಾಡಲಾಗಿದೆ. ವಸ್ತುಗಳ ದರವನ್ನು ಎರಡು ಮೂರು ಪಟ್ಟು ಹೆಚ್ಚಾಗಿ ತೋರಿಸಿ ಅನುಮತಿ ಪಡೆದಿದ್ದಾರೆ. ತುರ್ತು ಕಾಮಗಾರಿ ಹೆಸರಿನಲ್ಲಿ 4ಜಿ ವಿನಾಯಿತಿ ನೀಡಿರುವುದು ಸಂಶಯಾಸ್ಪದವಾಗಿದೆ,” ಎಂದು ಅವರು ವಿವರಿಸಿದರು.

ಅದೇ ವೇಳೆ, ಬಿಜೆಪಿ ಶಾಸಕರ ಅಮಾನತು ನಿರ್ಣಯದ ಕುರಿತು ಮಾತನಾಡಿದ ಅವರು, “ಸಭಾಧ್ಯಕ್ಷರ ಪಕ್ಷಪಾತಿ ನಿರ್ಣಯಗಳು ಚರ್ಚೆಗೆ ಗ್ರಾಸವಾಗಿವೆ. ಅವರು ಸರ್ವಜ್ಞ ಸಿಂಡ್ರೋಮ್‌ನಿಂದ ಬಳಲುತ್ತಿರುವಂತೆ ಕಾಣಿಸುತ್ತಿದೆ” ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜಗೋಪಾಲ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂರ್ಣಿಮಾ, ರಮೇಶ್ ಕಂಡೆಟ್ಟು, ವಸಂತ ಪೂಜಾರಿ ಮತ್ತು ಅರುಣ್ ಶೇಟ್ ಹಾಜರಿದ್ದರು.

Previous articleಅಪ್ಪು ಎಂಬ ಅಜರಾಮರ ಚೇತನ: ನಾಲ್ಕು ವರ್ಷಗಳ ಹಿಂದಿನ ಕರಾಳ ದಿನದ ನೆನಪು
Next articleಕೊಪ್ಪಳದಲ್ಲಿ ಬಡವರ ಪಿಂಚಣಿಗೆ ಕನ್ನ: 46,885 ನಕಲಿ ಫಲಾನುಭವಿಗಳು ಪತ್ತೆ!

1 COMMENT

  1. ದುಬಾರಿ ವಸ್ತುಗಳ ಖರೀದಿ, ಅತಿರೇಕದ ಒಳಸಜ್ಜೆ, ವಿದೇಶಿ ಅಧ್ಯಯನ ಪ್ರವಾಸಗಳ ಹೆಸರಿನಲ್ಲಿ ಅನಗತ್ಯ ವೆಚ್ಚ, ಹಾಗೂ ಮೇಕಪ್, ಪೋಟೋ ಸೆಷನ್, ಜೈಕಾರ ಜನತೆ ಖರ್ಚು ಮೊದಲಾದವುಗಳಿಗೆ ಸಂಬಂಧಿಸಿದಂತೆ ಮೋದೀಜಿ ವಿರುದ್ಧ ಸುಮೋಟೋ ದೂರು ದಾಖಲಾಗಲಿ

LEAVE A REPLY

Please enter your comment!
Please enter your name here