ಸಂ. ಕ. ಸಮಾಚಾರ, ಮಂಗಳೂರು: ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಐದು ವರ್ಷ ನೀವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೀರಾ’ ಎಂಬ ಪ್ರಶ್ನೆಗೆ ಉತ್ತರಿಸಿ, ಹೈಕಮಾಂಡ್ ತೀರ್ಮಾನ ಮಾಡಿದರೆ ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ.
ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್ ಗೆ ಸೇರಿದ್ದಾಗಿದೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿಯೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
‘ಮುಖ್ಯಮಂತ್ರಿ ಬದಲಾವಣೆ ವಿಷಯ ಪದೇ ಪದೇ ಏಕೆ ಚರ್ಚೆಯಾಗುತ್ತಿದೆ’ ಎಂಬ ಪ್ರಶ್ನೆಗೆ ಉತ್ತರಿಸಿ, ‘ನೀವು (ಮಾಧ್ಯಮದವರು) ಪದೇ ಪದೇ ಕೇಳುತ್ತೀರಲ್ಲ. ಅದಕ್ಕೆ ವಿಷಯ ಚರ್ಚೆಗೆ ಬರುತ್ತದೆ’ ಎಂದರು.
ದ್ವೇಷಪೂರಿತ ಭಾಷಣದ ವಿರುದ್ಧ ಎಫ್‌ಐಆರ್: ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿ, ದ್ವೇಷಪೂರಿತ ಭಾಷಣ ಮಾಡುವವರ ಮೇಲೆ ಎಫ್ ಐ ಆರ್ ದಾಖಲಾಗುತ್ತದೆ. ಅವರು ಮಹಿಳೆಯರಿಗೆ ಅಗೌರವವಾಗಿ ಭಾಷಣದಲ್ಲಿ ಮಾತನಾಡಿದ್ದಾರೆ ಎಂದರು.
ಎಸ್.ಐ.ಟಿ. ವರದಿ: ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್.ಐ.ಟಿ ವರದಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿ, ಎಸ್.ಐ.ಟಿ.ಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಈ ತಿಂಗಳಾಂತ್ಯದಲ್ಲಿ ಎಸ್ ಐ ಟಿ ವರದಿಯ ಸಲ್ಲಿಕೆಯಾಗಲಿದೆ ಎಂದು ಎಸ್ ಐ ಟಿ ತಿಳಿಸಿರುವುದಾಗಿ ಗೃಹಸಚಿವರು ತಿಳಿಸಿರುವುದಾಗಿ ತಿಳಿಸಿದರು.

























