ಬೆಂಗಳೂರು: ನಗರದಲ್ಲಿ ಕ್ಷುಲ್ಲಕ ಕಾರಣಗಳು ಎಂತಹ ಘೋರ ಅಪರಾಧಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ಕೇವಲ ಮದ್ಯ ಕೊಡಿಸಲಿಲ್ಲ ಎಂಬ ಕ್ಷುಲಕ ಕಾರಣಕ್ಕಾಗಿ, ಸ್ನೇಹಿತನ ಮೇಲೆ ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಹೇಯ ಕೃತ್ಯವೊಂದು ಅರಸು ಕಾಲೋನಿಯ ಮಾರಮ್ಮ ದೇಗುಲದ ಬಳಿ ನಡೆದಿದೆ. ಅಕ್ಟೋಬರ್ 21ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.
ಘಟನೆಯ ವಿವರಗಳಿಗೆ ಬಂದರೆ, ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಮುನಿಯಪ್ಪ ಎಂಬುವವರು ಈಸ್ಟ್ ಎಂಡ್ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದರು. ಇದೇ ವೇಳೆ, ಅಲ್ಲಿಗೆ ಅವರ ಸ್ನೇಹಿತರಾದ ಗೌತಮ್ ಮತ್ತು ಸೂರ್ಯ ಬಂದಿದ್ದಾರೆ. ‘ನಮಗೂ ಎಣ್ಣೆ ಕೊಡಿಸು’ ಎಂದು ಕೇಳಿದಾಗ, ಮುನಿಯಪ್ಪ, “ನನ್ನ ಬಳಿ ಹಣವಿಲ್ಲ, ನಿನಗೆ ಯಾಕೆ ನಾನು ಎಣ್ಣೆ ಕೊಡಿಸಬೇಕು?” ಎಂದು ನಿರಾಕರಿಸಿದ್ದಾರೆ.
ಈ ಸಣ್ಣ ನಿರಾಕರಣೆ ಆರೋಪಿಗಳ ಅಹಂಗೆ ಪೆಟ್ಟುಕೊಟ್ಟಿತ್ತು. ಬಳಿಕ, ಅರಸು ಕಾಲೋನಿಯ ಮಾರಮ್ಮ ದೇಗುಲದ ಬಳಿ ಮುನಿಯಪ್ಪನನ್ನು ಅಡ್ಡಗಟ್ಟಿದ ಆರೋಪಿಗಳು, ಮತ್ತೆ ಜಗಳಕ್ಕೆ ನಿಂತಿದ್ದಾರೆ. “ನಾನು ಜೈಲಿನಿಂದ ಹೊರಬಂದು ಕೇವಲ 15 ದಿನಗಳಾಗಿವೆ. ನನ್ನನ್ನು ಕಂಡರೆ ನಿನಗೆ ಭಯವಿಲ್ಲವೇ?” ಎಂದು ಗೌತಮ್ ದರ್ಪ ಮೆರೆದಿದ್ದಾನೆ. ಮಾತಿಗೆ ಮಾತು ಬೆಳೆದು, ಕೋಪದ ಭರದಲ್ಲಿ ಗೌತಮ್ ಮತ್ತು ಸೂರ್ಯ ತಾವು ತಂದಿದ್ದ ಲಾಂಗ್‌ನಿಂದ ಮುನಿಯಪ್ಪನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದ ಮುನಿಯಪ್ಪ ನೀಡಿದ ದೂರಿನ ಅನ್ವಯ, ತಿಲಕ್‌ನಗರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಕರಣ ಸಂಬಂಧ ಇಬ್ಬರೂ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಪವಿತ್ರ ದೇವಸ್ಥಾನದ ಬಳಿಯೇ ಇಂತಹ ಘೋರ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

























