ಈರುಳ್ಳಿ ದರ ತೀವ್ರ ಕುಸಿತ: ರಸ್ತೆಗೆ ಉಳ್ಳಾಗಡ್ಡಿ ಸುರಿದು ಪ್ರತಿಭಟನೆ

0
37

ಕ್ವಿಂಟಲ್‌ಗೆ 5 ಸಾವಿರ ರೂ. ಬೆಂಬಲ ಬೆಲೆ ನಿಗದಿಗೆ ಒತ್ತಾಯ | ಸರ್ಕಾರ, ವರ್ತಕರ ವಿರುದ್ಧ ಘೋಷಣೆ | ಉಗ್ರ ಹೋರಾಟದ ಎಚ್ಚರಿಕೆ

ಸಂ.ಕ.ಸಮಾಚಾರ ಹುಬ್ಬಳ್ಳಿ: ದರ ಏಕಾಏಕಿ ಕುಸಿತದಿಂದ ಕಂಗಾಲಾದ ರೈತರು ಶನಿವಾರ ಎಪಿಎಂಸಿ ರಸ್ತೆಗೆ ಉಳ್ಳಾಗಡ್ಡಿ ಸುರಿದು ತೀವ್ರ ಪ್ರತಿಭಟನೆ ನಡೆಸಿದರು.

ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಉಳ್ಳಾಗಡ್ಡಿ ದರ 300 ರಿಂದ 500 ರೂ. ಇದ್ದು, ಇದರಿಂದ ಕಟಾವಿನ ದರವೂ ಕೂಡ ಕೈಗೆ ದೊರೆಯದಂತಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಕ್ವಿಂಟಲ್‌ಗೆ 5000 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕೆಂಬುದು ರೈತರ ಪಟ್ಟು. ಇನ್ನೆರಡು ದಿನಗಳಲ್ಲಿ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿಯೂ ಎಚ್ಚರಿಸಿದರು.

ನೂರಾರು ರೈತರು ಶನಿವಾರ ಎಪಿಎಂಸಿ ಕಾರ್ಯದರ್ಶಿ ಕಚೇರಿ ಮುಂಭಾಗದಲ್ಲಿ ಉಳ್ಳಾಗಡ್ಡಿಯನ್ನು ನೆಲಕ್ಕೆ ಸುರಿದು ಆಕ್ರೋಶ ಹೊರಹಾಕಿದರು. ವಿವಿಧ ಗ್ರಾಮಗಳಿಂದ ಟ್ರ್ಯಾಕ್ಟ್‌ರ್‌ ಮೂಲಕ ಎಪಿಎಂಸಿಗೆ ಬಂದ ರೈತರು ಸರ್ಕಾರದ ವಿರುದ್ಧ ಹಾಗೂ ವರ್ತಕರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈಗಾಗಲೇ ಹೆಸರು ಬೆಳೆ ಸಂಪೂರ್ಣ ನಾಶವಾದ ಪರಿಣಾಮ ಸೂಕ್ತ ದರ ದೊರೆಯದೇ ರೈತರು ಕಂಗಾಲಾಗಿದ್ದಾರೆ. ಒಂದು ಬೆಳೆ ತೆಗೆಯಬೇಕಾದರೆ ಸಾವಿರಾರು ರೂಪಾಯಿ ಸಾಲ ಮಾಡಲೇಬೇಕಿದೆ. ಆದರೆ, ಬೆಳೆ ಕೈಗೆ ಬಂದಾಗ ಸೂಕ್ತ ದರ ಸಿಗದೆ ಅನೇಕರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಹೋರಾಟದ ನೇತೃತ್ವ ವಹಿಸಿದ್ದರು.

ರಾಜಕಾರಣಿಗಳು ಚುನಾವಣೆ ಸಮೀಪಿಸುತ್ತಿದ್ದಾಗ ನಾವು ರೈತರೊಂದಿಗೆ ಇದ್ದೇವೆ, ರೈತರು ದೇಶದ ಬೆನ್ನೆಲುಬು ಎಂದು ಘಂಟಾಘೋಷವಾಗಿ ಹೇಳುತ್ತಾರೆ. ಆದರೆ ಜನಪ್ರತಿನಿಧಿಗಳ ಮುಖವನ್ನು ನಮ್ಮ ಭಾಗದ ರೈತರು ಈವರೆಗೂ ಕಂಡಿಲ್ಲ. ಇಂದು ನಾವು ಸಾಂಕೇತಿಕವಾಗಿ ಹೋರಾಟ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಉಳ್ಳಾಗಡ್ಡಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದಲ್ಲಿ ಹುಬ್ಬಳ್ಳಿ-ಧಾರವಾಡ ಹೆದ್ದಾರಿ ಬಂದ್ ಮಾಡಿ, ಎಪಿಎಂಸಿ ಬಂದ್ ಮಾಡಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುತ್ತದೆ ಎಂದು ಧಾರವಾಡ ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಎಚ್ಚರಿಸಿದರು.

ಒಬ್ಬ ರೈತ ಒಂದು ಎಕರೆ ಭೂಮಿಯಲ್ಲಿ ಉಳ್ಳಾಗಡ್ಡಿ ಬೆಳೆಯಬೇಕಾದರೆ ಕನಿಷ್ಠ 50 ಸಾವಿರ ರೂ. ವ್ಯಯಿಸುತ್ತಾನೆ. ಇನ್ನೂ ಈ ಬಾರಿ ಜಮೀನು ಲಾವಣಿ ಮಾಡಿದವರ ಪರಿಸ್ಥಿತಿ ಹೇಳತೀರದಾಗಿದೆ. ಇಷ್ಟಾದರೂ ಸಹ ಸರ್ಕಾರ ಮಧ್ಯಸ್ಥಿಕೆ ವಹಿಸುತ್ತಿಲ್ಲ. ಖರೀದಿ ಕೇಂದ್ರ ಸ್ಥಾಪನೆ ಮಾಡುತ್ತಿಲ್ಲ. ಮಾರುಕಟ್ಟೆಯಲ್ಲಿ ವರ್ತಕರ ಮೇಲೆ ಸರ್ಕಾರ ಹಿಡಿತ ಸಾಧಿಸುತ್ತಿಲ್ಲ. ಹೀಗಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿಗೆ ಬಂದಿದ್ದಾನೆ. ನಷ್ಟ ಕಂಡ ಮುಂಗಾರು ಬೆಳೆಗಳಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಈವರೆಗೂ ಹೆಸರು ಖರೀದಿ ಕೇಂದ್ರವನ್ನು ಪ್ರಾರಂಭಿಸಿಲ್ಲ.
ಶಿವಾನಂದ ಕರಿಗಾರ | ಧಾರವಾಡ ಜಿಪಂ ಮಾಜಿ ಉಪಾಧ್ಯಕ್ಷ

Previous articleಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ: ವಿಧಾನಪರಿಷತ್‌ ಸದಸ್ಯ ಕೆ. ಶಿವಕುಮಾರ್‌ ಘೋಷಣೆ
Next articleಧಾರವಾಡ ಜಿಲ್ಲೆಗೆ 18 ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು..!

LEAVE A REPLY

Please enter your comment!
Please enter your name here