ಬೆಂಗಳೂರಿನ ಮಹತ್ವಾಕಾಂಕ್ಷಿ ಸುರಂಗ ರಸ್ತೆ ಯೋಜನೆ ಇದೀಗ ರಾಜಕೀಯ ಜಟಾಪಟಿಗೆ ಕೇಂದ್ರಬಿಂದುವಾಗಿದೆ.
ಸಂಸದ ತೇಜಸ್ವಿ ಸೂರ್ಯ ವಿರೋಧಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರನ್ನು “ಖಾಲಿ ಟ್ರಂಕ್” ಎಂದು ಜರಿದಿದ್ದು, “ಅವನ ಮಾತು ಕೇಳಿ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ” ಎಂದು ಏಕವಚನದಲ್ಲೇ ಗುಡುಗಿದ್ದಾರೆ.
ಈ ಮೂಲಕ ಸುರಂಗ ರಸ್ತೆ ನಿರ್ಮಾಣದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
“ಲಾಲ್‌ಬಾಗ್‌ಗೆ ತೊಂದರೆಯಿಲ್ಲ, ಕೆಲಸ ನಿಲ್ಲಲ್ಲ”: ಬೆಂಗಳೂರು ನಡಿಗೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸರ್ಕಾರ ಒಂದು ಒಳ್ಳೆಯ ಕೆಲಸ ಮಾಡಿ ಹೆಸರು ಗಳಿಸಬಾರದು ಎಂಬುದು ಕೆಲವರ ಉದ್ದೇಶ. ಆದರೆ, ಯಾವುದೇ ವಿರೋಧಕ್ಕೂ ನಾನು ಜಗ್ಗುವುದಿಲ್ಲ. ಈ ಯೋಜನೆಗಾಗಿ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ.
ಲಾಲ್‌ಬಾಗ್‌ನ ಐತಿಹಾಸಿಕತೆಗೆ ಧಕ್ಕೆಯಾಗುತ್ತದೆ ಎನ್ನುವುದು ಸುಳ್ಳು. ಕಾಮಗಾರಿ ನಡೆಯುವಾಗ ಕೇವಲ ಸಣ್ಣ ಭಾಗವನ್ನು ತಾತ್ಕಾಲಿಕವಾಗಿ ಬಳಸಿಕೊಂಡು, ಕೆಲಸ ಮುಗಿದ ತಕ್ಷಣ ಅದನ್ನು ಉದ್ಯಾನವನಕ್ಕೆ ಹಿಂತಿರುಗಿಸಲಾಗುವುದು, ಎಂದು ಸ್ಪಷ್ಟಪಡಿಸಿದರು.
ಮುಂಬೈ, ದೆಹಲಿಯಲ್ಲಿ ಇಲ್ಲದ ವಿರೋಧ ಇಲ್ಲಿ ಯಾಕೆ?: ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಅವರು, “ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ಇದೇ ಮಾದರಿಯ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿರುವಾಗ, ಬೆಂಗಳೂರಿನಲ್ಲಿ ಮಾತ್ರ ವಿರೋಧಿಸುವುದೇಕೆ? ಟೀಕೆಗಳು ಮರೆಯಾಗುತ್ತವೆ, ಆದರೆ ನಾವು ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ನಾವು ಜನರ ಅನುಕೂಲಕ್ಕಾಗಿ ಈ ಯೋಜನೆ ಮಾಡುತ್ತಿದ್ದೇವೆ,” ಎಂದರು.
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಮತ್ತು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಕೆಶಿ, “ಬೆಂಗಳೂರಿನ ಸಂಸದರಾಗಿ ಈ ನಗರದ ಅಭಿವೃದ್ಧಿಗೆ ಕೇಂದ್ರದಿಂದ 10 ರೂಪಾಯಿ ವಿಶೇಷ ಅನುದಾನವನ್ನಾದರೂ ತಂದಿದ್ದಾರೆಯೇ? ಅವರದೇ ಸರ್ಕಾರವಿದ್ದಾಗ ಸಂಚಾರ ದಟ್ಟಣೆ ನಿವಾರಿಸಲು ಯಾವ ಕ್ರಮ ಕೈಗೊಂಡರು? ಕಸದ ಟೆಂಡರ್ ಕರೆಯಲು, ರಸ್ತೆ ಅಗಲೀಕರಣ ಮಾಡಲು ಅವರಿಂದ ಯಾವುದು ಸಾಧ್ಯವಾಗಲಿಲ್ಲ? ಕೇಬಲ್ ಮಾಫಿಯಾ ಜೊತೆ ಕೈಜೋಡಿಸಿ ಬೆಂಗಳೂರನ್ನು ಹಾಳು ಮಾಡಿದ್ದೇ ಅವರ ಸಾಧನೆ,” ಎಂದು ಆರೋಪಿಸಿದರು.
ಸುರಂಗ ರಸ್ತೆಯು ಶ್ರೀಮಂತರಿಗೆ ಮಾತ್ರ ಎಂಬ ಟೀಕೆಗೆ ಉತ್ತರಿಸಿದ ಅವರು, ಹೌದು, ಟೋಲ್ ಕಟ್ಟಿ ವೇಗವಾಗಿ ಸಾಗಲು ಇಚ್ಛಿಸುವವರಿಗಾಗಿ ಈ ರಸ್ತೆ. ಈ ಯೋಜನೆ ಬೇಡ ಎನ್ನುವವರು, ಸಂಚಾರ ದಟ್ಟಣೆ ನಿವಾರಣೆಗೆ ಪರ್ಯಾಯ ಯೋಜನೆ ನೀಡಲಿ.
ಜನರು ನಮ್ಮ ಮೇಲೆ ನಂಬಿಕೆ ಇಟ್ಟು 140 ಶಾಸಕರನ್ನು ಗೆಲ್ಲಿಸಿದ್ದಾರೆ. ಜಾಗತಿಕ ನಗರವಾಗಿರುವ ಬೆಂಗಳೂರಿನ ಘನತೆಯನ್ನು ಉಳಿಸಲು ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ಕೆಲಸವನ್ನು ಮಾಡಿಯೇ ತೀರುತ್ತೇವೆ, ಎಂದು ದೃಢವಾಗಿ ನುಡಿದರು.

























