ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಏಕೈಕ ಕಾರ್ಮಿಕ ವಿಮಾ ಆಸ್ಪತ್ರೆ ದಾಂಡೇಲಿಯಲ್ಲಿದೆ. ಈ ಆಸ್ಪತ್ರೆ 1969 ರಲ್ಲಿ ಪ್ರಾರಂಭಗೊಂಡಿದ್ದು, 20 ಸಾವಿರ ಇ.ಎಸ್.ಐ ಕಾರ್ಡು ದಾರರ ಕಾರ್ಮಿಕ ಕುಟುಂಬಗಳು ಇದರ ವ್ಯಾಪ್ತಿಗೆ ಬರುತ್ತದೆ.
ಜಿಲ್ಲೆಯ ಉದ್ಯಮ ನಗರವಾಗಿರುವ ದಾಂಡೇಲಿಯ ಕಾರ್ಮಿಕರ ಕುಟುಂಭಗಳಿಗೆ ಈ ಆಸ್ಪತ್ರೆ ಸಂಜೀವಿನಿಯಂತೆ ಕಾರ್ಯ ನಿವ೯ಹಿಸುತಿತ್ತು. ಸತತ 55 ವರ್ಷ ಸೇವೆ ಪೂರೈಸಿರುವ ಈ ಆಸ್ಪತ್ರೆಯನ್ನು ಇದೀಗ ಮುಚ್ಚುವ ಹುನ್ನಾರ ನಡೆಸಿದ್ದಾರೆಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ, ಕಾರ್ಯದರ್ಶಿ ರಾಘವೇಂದ್ರಗಡೆಪ್ಪನವರ ಆರೋಪಿಸಿದ್ದಾರೆ.
ಇತ್ತಿಚಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಇದ್ದಂತಹ ವೈದ್ಯರು ಹಾಗೂ ಸಿಬ್ಬಂಧಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಒರ್ವ ವೈದ್ಯರನ್ನು ಇಟ್ಟು ಕಾರ್ಮಿಕ ಕುಟುಂಬಗಳಿಗೆ ಚಿಕಿತ್ಸೆ ನೀಡದೆ ಚೀಟಿ ಬರೆದು ಧಾರವಾಡದ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತಿದೆ. ಎಲ್ಲಾ ಮೂಲಭೂತ ಸೌಕರ್ಯಗಳಿದ್ದರೂ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೊಸ ಎಕ್ಸ್ ರೇ ಮಶೀನು ಎರಡು ವರ್ಷದಿಂದ ಉಪಯೋಗಿಸದೆ ಬಿದ್ದಿದೆ.
50 ಲಕ್ಷ ರೂಪಾಯಿಯ ಸುಸಜ್ಜಿತ ಹೊಸ ಅಂಬ್ಯುಲೆನ್ಸ್ ಒಂದು ರೋಗಿಗಳಿಗಾಗಿ ಉಪಯೋಗಿಸದೆ ಶೆಡ್ಡೊಂದರಲ್ಲಿ ನಿಲ್ಲಿಸಿಡಲಾಗಿದೆ. ಇದನ್ನು ಪ್ರಶ್ನಿಸಿದರೆ ವಾಹನದ ಇನ್ಸೂರೆನ್ಸ್ ತುಂಬಿಲ್ಲ. ಚಾಲಕರಿಲ್ಲ ಎನ್ನುವ ಹಾರಿಕೆ ಉತ್ತರಗಳು ಸಿಗುತ್ತಿದೆ. ಹುಬ್ಬಳ್ಳಿಯ ಕೆಲ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕೊಸ್ಕರ ಈ ಆಸ್ಪತ್ರೆ ಮುಚ್ಚುವ ಪ್ರಯತ್ನ ನಡೆಸಿದ್ದಾರೆಂದು ಆರೋಪಿಸಲಾಗುತ್ತಿದೆ.
ಕೂಡಲೇ ಕಾರ್ಮಿಕ ಸಚಿವರು, ಸ್ಥಳೀಯ ಶಾಸಕರು ವೈದ್ಯರು ಮತ್ತು ಸಿಬ್ಬಂಧಿಗಳನ್ನು ನೇಮಿಸಿ ಇ ಎಸ್.ಐ ಆಸ್ಪತ್ರೆಯಲ್ಲಿ ಈ ಹಿಂದಿನಂತೆ ಸೇವಾ ಸೌಲಭ್ಯ ಕಾರ್ಮಿಕ ಕುಟುಂಬಗಳಿಗೆ ಸಿಗುವಂತಾಗಬೇಕೆಂದು ಆಗ್ರಹಿಸಿದ್ದಾರೆ.
























