“ಮದುವೆ ಆಗಬೇಕಿದ್ದರೆ ಮುಸ್ಲಿಂ ಆಗು”: ಬೆಂಗಳೂರಿನಲ್ಲಿ ಪ್ರೀತಿಯ ಹೆಸರಲ್ಲಿ ಯುವತಿಗೆ ವಂಚನೆ

1
27

ಬೆಂಗಳೂರು: ಪ್ರೀತಿಯ ಬಲೆಗೆ ಬೀಳಿಸಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು, ಕೊನೆಗೆ ಮದುವೆಯಾಗಬೇಕಿದ್ದರೆ ಧರ್ಮ ಬದಲಿಸಬೇಕು ಎಂದು ಒತ್ತಾಯಿಸಿದ ಗಂಭೀರ ಆರೋಪವೊಂದು ರಾಜಧಾನಿಯಲ್ಲಿ ಕೇಳಿಬಂದಿದೆ.

ಆಂಧ್ರಪ್ರದೇಶ ಮೂಲದ ಹಿಂದೂ ಯುವತಿಯೊಬ್ಬಳು ತನಗೆ ಮುಸ್ಲಿಂ ಯುವಕನಿಂದ “ಲವ್, ಸೆಕ್*, ದೋಖಾ” ಆಗಿದೆ ಎಂದು ಆರೋಪಿಸಿ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇನ್‌ಸ್ಟಾಗ್ರಾಂನಲ್ಲಿ ಶುರುವಾದ ಪ್ರೀತಿಯ ಕಥೆ: ಆಂಧ್ರಪ್ರದೇಶ ಮೂಲದ ಸಂತ್ರಸ್ತ ಯುವತಿ ಮತ್ತು ಬೆಂಗಳೂರಿನ ಮೊಹಮ್ಮದ್ ಇಶಾಕ್ ಬಿನ್ ಅಬ್ದುಲ್ ರಸೂಲ್ ನಡುವೆ ಇನ್‌ಸ್ಟಾಗ್ರಾಂನಲ್ಲಿ ಶುರುವಾದ ಪರಿಚಯ, ಕೆಲವೇ ದಿನಗಳಲ್ಲಿ ಸ್ನೇಹಕ್ಕೆ ತಿರುಗಿ, ನಂತರ ಪ್ರೀತಿಗೆ ಅನುವು ಮಾಡಿಕೊಟ್ಟಿತ್ತು.

ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. 2024ರ ಅಕ್ಟೋಬರ್ 30ರಂದು, ಇಬ್ಬರೂ ಬೆಂಗಳೂರಿನ ಎಲಿಮೆಂಟ್ಸ್ ಮಾಲ್ ಬಳಿ ಭೇಟಿಯಾಗಿ, ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಬಳಿಕ, ಮದುವೆಯಾಗುವುದಾಗಿ ಬಲವಾಗಿ ನಂಬಿಸಿದ ಇಶಾಕ್, ಯುವತಿಯನ್ನು ಖಾಸಗಿ ಲಾಡ್ಜ್‌ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಂದಿನಿಂದ, ಮದುವೆಯ ಭರವಸೆಯ ಮೇಲೆ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕಗಳು ನಡೆದಿದ್ದವು ಎಂದು ಯುವತಿ ತನ್ನ ದೂರಿನಲ್ಲಿ ವಿವರಿಸಿದ್ದಾಳೆ.

ಬಯಲಾದ ಅಸಲಿ ಮುಖ, ಮತಾಂತರಕ್ಕೆ ಒತ್ತಡ: 2025ರ ಸೆಪ್ಟೆಂಬರ್ ವೇಳೆಗೆ ಇಶಾಕ್‌ನ ನಿಜ ಬಣ್ಣ ಬಯಲಾಗಿದೆ. ಆತ ಇನ್ನೂ ಹಲವು ಯುವತಿಯರೊಂದಿಗೆ ಸಂಪರ್ಕದಲ್ಲಿರುವುದು ಯುವತಿಗೆ ತಿಳಿದುಬಂದಿದೆ. ಇದರಿಂದ ಆಘಾತಗೊಂಡ ಆಕೆ, ತಕ್ಷಣ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.

ಆದರೆ ಇಶಾಕ್ ದಿನದಿಂದ ದಿನಕ್ಕೆ ನೆಪ ಹೇಳಿ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದ. ಇದರ ನಡುವೆಯೇ, ಆತ ಬೇರೊಂದು ಮುಸ್ಲಿಂ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಆಘಾತಕಾರಿ ವಿಷಯ ಸಂತ್ರಸ್ತೆಗೆ ತಿಳಿದುಬಂದಿದೆ.

ಇದನ್ನು ಪ್ರಶ್ನಿಸಿದಾಗ, ಇಶಾಕ್ “ನಿನ್ನ ದಾರಿ ನೀನು ನೋಡಿಕೋ, ನನ್ನ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಎಲ್ಲಾ ಘಟನೆಗಳಿಂದ ಮನನೊಂದು ಯುವತಿ ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದಳು.

ಆಗ ಮಧ್ಯಪ್ರವೇಶಿಸಿದ ಇಶಾಕ್‌ನ ಕುಟುಂಬಸ್ಥರು, “ಮದುವೆ ಆಗಬೇಕಿದ್ದರೆ ನೀನು ಇಸ್ಲಾಂಗೆ ಮತಾಂತರವಾಗಬೇಕು. ನಲವತ್ತು ದಿನಗಳ ಕಾಲ ನಮಾಜ್ ಕಲಿಯಬೇಕು. ಮೊದಲು ಧರ್ಮ ಬದಲಿಸು, ನಂತರ ಮದುವೆ ಮಾತುಕತೆ” ಎಂದು ಷರತ್ತು ವಿಧಿಸಿದ್ದರು ಎಂದು ಯುವತಿ ಆರೋಪಿಸಿದ್ದಾಳೆ.

ಸದ್ಯ ಯುವತಿಯು ತನಗಾದ ಮೋಸ, ಬೆದರಿಕೆ ಮತ್ತು ಮತಾಂತರಕ್ಕೆ ಒತ್ತಡ ಹೇರಿದ ಬಗ್ಗೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೊಹಮ್ಮದ್ ಇಶಾಕ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

Previous articleಟೆಕ್ ಶೃಂಗಸಭೆ 2025:ಬೃಹತ್ ತಂತ್ರಜ್ಞಾನ ಉತ್ಸವಕ್ಕೆ ಸಜ್ಜಾದ ಬೆಂಗಳೂರು
Next articleಆಂಗ್ಲ ಭಾಷೆಯಲ್ಲಿ ಕಾಂತಾರ ದರ್ಶನ

1 COMMENT

  1. ಇಂತಹ ಪ್ರಕರಣಗಳಲ್ಲಿ ಯುವತಿಯರೇ ಎಚ್ಚರ ವಹಿಸಬೇಕು. ಅದರಲ್ಲೂ ವಿದ್ಯಾವಂತ ಯುವತಿಯರೇ ಹೆಚ್ಚೆಚ್ಚು ಬಲಿಯಾಗುತ್ತಿದ್ದಾರೆ. ಹಿಂದೂ ಕುಟುಂಬಗಳಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು ಆಗ ಮಾತ್ರ ಈ ರೀತಿ ಶೀಲಾ ಕಳೆದುಕೊಂಡು ಪರಿತಪಿಸುವ ಪರಿಸ್ಥಿತಿ ಬರುವುದಿಲ್ಲ.

LEAVE A REPLY

Please enter your comment!
Please enter your name here