ಸಿಎಂ ವಾಸ್ತವ ಅರಿತು ಮಾತನಾಡಲಿ: ಪ್ರಲ್ಹಾದ ಜೋಶಿ

0
74

ನವದೆಹಲಿ: ಅವೈಜ್ಞಾನಿಕವಾಗಿ ಅರೆಬರೆಯಾಗಿ ಗ್ಯಾರೆಂಟಿಗಳನ್ನು ಕೊಟ್ಟು ರಾಜ್ಯದ ಅಭಿವೃದ್ಧಿಯನ್ನು ಮೂಲೆಗುಂಪು ಮಾಡಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದಿಂದ ಬಂಡವಾಳ ‌ಶಾಹಿಗಳನ್ನು ದೂರು ಸರಿಸುತ್ತಿದೆ. ತನ್ನ ಬುಡಕ್ಕೆ ತಾನೇ ಕೊಡಲಿಪೆಟ್ಟು ಕೊಟ್ಟುಕೊಂಡು ಇದೀಗ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ʼಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕ ದ್ವೇಷಿʼ ಎಂದಿರುವ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಜೋಶಿ, ಮುಖ್ಯಮಂತ್ರಿಗಳು ರಾಜ್ಯದ ಸಂಪೂರ್ಣ ‌ಆರ್ಥಿಕತೆಯನ್ನು ಹಾಳು ಮಾಡಿ, ಇದೀಗ ʼರಾಜ್ಯಕ್ಕೆ ಕೇಂದ್ರದಿಂದ ಅನುದಾನವಿಲ್ಲʼ ಎನ್ನುತ್ತ ಪ್ರಧಾನಿ ಮೋದಿ ಅವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ತಿರುಗೇಟು ನೀಡಿದ್ದಾರೆ.

ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಮೂಲೆಗುಂಪು ಮಾಡಿದೆ.‌ ಅರೆಬರೆ ಗ್ಯಾರೆಂಟಿಗಳನ್ನು ನೀಡುತ್ತ ಆರ್ಥಿಕ ಸ್ಥಿತಿಗತಿಯನ್ನು ಹಳ್ಳಕ್ಕೆ ತಳ್ಳಿದೆ. ಆದಾಯ ಖೋತಾ ಆಗುತ್ತಲೇ ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡುವ ದುರಭ್ಯಾಸ ಮಾಡಿಕೊಂಡಿದೆ ಎಂದು ಜೋಶಿ ಕಿಡಿ ಕಾರಿದ್ದಾರೆ.

ಒಂದೆಡೆ ಅರೆಬರೆ ಗ್ಯಾರೆಂಟಿಗಳು, ಇನ್ನೊಂದೆಡೆ ಸುಮಾರು 30ಕ್ಕೂ ಹೆಚ್ಚು ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿ ರಾಜ್ಯದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಸಾಲದ್ದಕ್ಕೆ ಅಭಿವೃದ್ಧಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡದೆ ಕಮಿಷನ್‌ ದಂಧೆಯಲ್ಲಿ ತೊಡಗಿ ವ್ಯಾಪಕ ಭೃಷ್ಟಾಚಾರದಲ್ಲಿ ತೊಡಗಿದೆ. ಸುಭೀಕ್ಷವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ದಿವಾಳಿಯತ್ತ ಕೊಂಡೋಯ್ದಿದೆ ಎಂದು ಸಚಿವ ಜೋಶಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯಕ್ಕೆ ಬಂದ ಹಣವೆಲ್ಲ ಗ್ಯಾರೆಂಟಿಗೆ: ರಾಜ್ಯ ಕಾಂಗ್ರೆಸ್‌ ಸರ್ಕಾರ, ರಾಜ್ಯಕ್ಕೆ ಬರುತ್ತಿರುವ ಎಲ್ಲಾ‌ ಹಣವನ್ನು ಅವೈಜ್ಞಾನಿಕ ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿದೆ. ಈ ಮೂಲಕ ಕರ್ನಾಟಕದ ಖಜಾನೆಯನ್ನು ಬರಿದು ಮಾಡಿದೆ. ಹೆಚ್ಚುವರಿ ಆದಾಯದಲ್ಲಿದ್ದ ರಾಜ್ಯವನ್ನು ₹80,000 ಕೋಟಿಗಳಷ್ಟು‌ ಸಾಲದ ದವಡೆಗೆ ನೂಕಿದೆ. ₹8 ಲಕ್ಷ ಕೋಟಿಗೂ ಅಧಿಕ‌ ಆರ್ಥಿಕ ಹೊರೆ ಹೊರಿಸಿದೆ ಎಂದು ಹರಿ ಹಾಯ್ದಿದ್ದಾರೆ.

ಸಿಎಂ ವಾಸ್ತವವರಿತು ಮಾತನಾಡಲಿ: ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎ ಜನರ ಮೇಲೆ 27ಕ್ಕೂ ಹೆಚ್ಚು ತೆರಿಗೆಗಳನ್ನು ಕಂಡ ಕಂಡ ಹಾಗೆ ವಿಧಿಸಿ ಜನಸಾಮಾನ್ಯರ ಬದುಕನ್ನೇ ಮೂರಾಬಟ್ಟೆ ಮಾಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಶೇ.99ರಷ್ಟು ವಸ್ತುಗಳ ಮೇಲಿನ ತೆರಿಗೆಯನ್ನು ಶೂನ್ಯ ಮತ್ತು ಶೇ.5ಕ್ಕೆ ಇಳಿಸಿ ಸಾಮಾನ್ಯ ಜನರ ಜೀವನವನ್ನು ಮೇಲಸ್ಥರಕ್ಕೇರಿಸಿದೆ. ಮೊದಲು ಈ ವಾಸ್ತವವನ್ನು ಅರಿತುಕೊಳ್ಳಿ ಎಂದು ಸಿಎಂಗೆ ತಿರುಗೇಟು ನೀಡಿದ್ದಾರೆ ಸಚಿವ ಪ್ರಲ್ಹಾದ ಜೋಶಿ.

ದುರಾಡಳಿತದಿಂದ ರಾಜ್ಯಕ್ಕೆ ಸಂಕಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುರಾಡಳಿತದಿಂದಾಗಿ ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. 2023-24ರ ಸಿಎಜಿ ವರದಿಯಲ್ಲಿ ರಾಜ್ಯ ಮಾಡಿದ ಸಾಲ ₹63,000 ಕೋಟಿಗೆ ಏರಿಕೆ ಆಗಿದೆ. ಅಲ್ಲದೇ, ಮೂಲಸೌಕರ್ಯ ನಿಧಿಯನ್ನು ಇತರ ಯೋಜನೆಗಳಿಗೆ ವ್ಯಯಿಸಿರುವುದು ಬಹಿರಂಗವಾಗಿದೆ. ಇದು ನಿಮ್ಮ ಸರ್ಕಾರದ ಕೊಡುಗೆಯೇ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಕೀಳುಮಟ್ಟಕ್ಕಿಳಿದ ಸಿಎಂ: ಇನ್ನು, ಸಿದ್ದರಾಮಯ್ಯ ಅವರು ಸಂಸದ ತೇಜಸ್ವಿ ಸೂರ್ಯರನ್ನು ʼಅಮಾವಾಸ್ಯೆʼ ಎಂಬ ಪದ ಪ್ರಯೋಗಿಸಿ ಅವಹೇಳನ ಮಾಡಿದ್ದಾರೆ. ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿ ಹೀಗೆ ವೈಯಕ್ತಿಕ ನಿಂದನೆಗೆ ಇಳಿದಿರುವುದು ಅವರ ಕೀಳುಮಟ್ಟದ ರಾಜಕಾರಣಕ್ಕೆ ನಿದರ್ಶನ ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

Previous articleವಿರಾಟ್ ಕೊಹ್ಲಿ: ಪಾಕ್ ಎದುರು ಅಸಾಧ್ಯವನ್ನು ಸಾಧ್ಯವಾಗಿಸಿದ ಅವಿಸ್ಮರಣೀಯ ದಿನ!
Next articleHeavy rain: ವರುಣನ ಆರ್ಭಟಕ್ಕೆ ದಕ್ಷಿಣ ಭಾರತ ತತ್ತರ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

LEAVE A REPLY

Please enter your comment!
Please enter your name here