ಬೆಂಗಳೂರಿನಲ್ಲೇ ನಾಯಕನಾಗಿ ರಿಷಭ್ ಪಂತ್ ಕಮ್‌ಬ್ಯಾಕ್: 8 ತಿಂಗಳ ಕಾಯುವಿಕೆ ಅಂತ್ಯ!

0
15

ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅಬ್ಬರವನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಇಂಗ್ಲೆಂಡ್ ಪ್ರವಾಸದ ವೇಳೆ ಸಂಭವಿಸಿದ್ದ ಪಾದದ ಗಾಯದಿಂದಾಗಿ ಸುಮಾರು 8 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಪಂತ್, ಇದೀಗ ಸಂಪೂರ್ಣತಯಾರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ವಿಶೇಷವೆಂದರೆ, ಅವರು ಆಟಗಾರನಾಗಿ ಮಾತ್ರವಲ್ಲ, ಭಾರತ ‘ಎ’ ತಂಡದ ನಾಯಕನಾಗಿ ಹೊಸ ಜವಾಬ್ದಾರಿಯೊಂದಿಗೆ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಮ್‌ಬ್ಯಾಕ್ ಪಂದ್ಯ: ಅಕ್ಟೋಬರ್ 30 ರಿಂದ ಬೆಂಗಳೂರಿನ ಎನ್‌ಸಿಎಯಲ್ಲಿ (ಈಗಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್) ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ನಡೆಯಲಿರುವ ಎರಡು ಚತುರ್ದಿನ ಪಂದ್ಯಗಳ ಸರಣಿಯಲ್ಲಿ ರಿಷಭ್ ಪಂತ್ ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಸರಣಿ ಕೇವಲ ಪಂತ್ ವಾಪಸಾತಿಯಷ್ಟೇ ಅಲ್ಲ, ಬದಲಿಗೆ ಫಿಟ್ನೆಸ್ ಮತ್ತು ನಾಯಕತ್ವದ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆಯಾಗಿದೆ. ಇಲ್ಲಿ ತೋರುವ ಪ್ರದರ್ಶನವು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ (ಬಾರ್ಡರ್-ಗವಾಸ್ಕರ್ ಟ್ರೋಫಿ) ಟೀಮ್ ಇಂಡಿಯಾಕ್ಕೆ ಮರಳಲು ಅವರಿಗೆ ದಾರಿ ಮಾಡಿಕೊಡಲಿದೆ. ಹೀಗಾಗಿ, ಬಿಸಿಸಿಐ ಆಯ್ಕೆ ಸಮಿತಿಯು ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಿದೆ.

ತಂಡದಲ್ಲಿ ಕನ್ನಡಿಗರ ದಂಡು: ಈ ಸರಣಿಯು ಕನ್ನಡಿಗ ಕ್ರಿಕೆಟಿಗರ ಪಾಲ್ಗೊಳ್ಳುವಿಕೆಯಿಂದಲೂ ವಿಶೇಷ ಗಮನ ಸೆಳೆದಿದೆ. ಯುವ ಪ್ರತಿಭೆ ದೇವದತ್ ಪಡಿಕ್ಕಲ್ ಎರಡೂ ಪಂದ್ಯಗಳಲ್ಲೂ ಸ್ಥಾನ ಪಡೆದಿದ್ದಾರೆ.

ಅನುಭವಿ ಆಟಗಾರ ಕೆ.ಎಲ್. ರಾಹುಲ್ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು, ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿರುವ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಕೂಡ ಎರಡನೇ ಪಂದ್ಯದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಸುದೀರ್ಘ ವಿರಾಮಕ್ಕೆ ಬ್ರೇಕ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದರಿಂದ ಪಂತ್, ಏಷ್ಯಾ ಕಪ್, ವೆಸ್ಟ್ ಇಂಡೀಸ್ ಪ್ರವಾಸ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಸೇರಿದಂತೆ ಹಲವು ಮಹತ್ವದ ಟೂರ್ನಿಗಳಿಂದ ಹೊರಗುಳಿಯಬೇಕಾಯಿತು.

ಇದೀಗ ಅವರ ವಾಪಸಾತಿ ಭಾರತೀಯ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕಕ್ಕೆ ಹೊಸ ಬಲ ತಂದುಕೊಡುವ ನಿರೀಕ್ಷೆಯಿದೆ. ಒಟ್ಟಿನಲ್ಲಿ, ಪಂತ್ ಈ ಹೊಸ ಇನ್ನಿಂಗ್ಸ್ ಯಶಸ್ವಿಯಾಗಲಿ ಮತ್ತು ಶೀಘ್ರದಲ್ಲೇ ಮತ್ತೆ ನೀಲಿ ಜೆರ್ಸಿಯಲ್ಲಿ ಮಿಂಚಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Previous articleKMF ನಂದಿನಿಯ ಸಿಹಿ ಯಶಸ್ಸು — ₹46 ಕೋಟಿಗಳ ದಾಖಲೆ ಮಾರಾಟ
Next articleಚಂದನ್- ಕ್ರಿಸ್ ದೀಪಾವಳಿ ಧಮಾಕಾ

LEAVE A REPLY

Please enter your comment!
Please enter your name here