rain alert: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಮಳೆರಾಯ ಅಬ್ಬರಿಸುತ್ತಿದ್ದಾನೆ.
ಮುಂದಿನ ಒಂದು ವಾರಗಳ ಕಾಲ, ಅಂದರೆ ಅಕ್ಟೋಬರ್ 29ರವರೆಗೂ ದೇಶದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಮಳೆ?: ಬೆಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 25ರವರೆಗೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಈಗಾಗಲೇ ಹಲವು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಹಬ್ಬದ ಸಿದ್ಧತೆಯಲ್ಲಿರುವ ಜನರಿಗೆ ಈ ಅಕಾಲಿಕ ಮಳೆ ಅಡಚಣೆಯನ್ನುಂಟುಮಾಡುವ ಸಾಧ್ಯತೆಯಿದೆ.
ಕೇರಳ, ತಮಿಳುನಾಡಿನಲ್ಲಿ ಪ್ರವಾಹದ ಆತಂಕ: ದಕ್ಷಿಣದ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಈಗಾಗಲೇ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಲವು ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮಿಳುನಾಡಿನ ಚೆನ್ನೈ, ಕಡಲೂರು ಮತ್ತು ಕೇರಳದ ಇಡುಕ್ಕಿ, ವಯನಾಡ್‌ನಂತಹ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ಇತರೆ ರಾಜ್ಯಗಳಲ್ಲೂ ಮಳೆ ಅಬ್ಬರ: ಈ ಮಳೆಯ ಪ್ರಭಾವ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿಲ್ಲ. ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರದ ಹಲವು ಭಾಗಗಳು, ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ಅಕ್ಟೋಬರ್ 24ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಉತ್ತರದ ರಾಜ್ಯಗಳಾದ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲೂ ಮಳೆ ಮುಂದುವರಿಯಲಿದೆ ಎಂದು ವರದಿಯಾಗಿದೆ.
ಅಕ್ಟೋಬರ್ ಅಂತ್ಯದವರೆಗೂ ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ವಾತಾವರಣ ಮುಂದುವರಿಯಲಿದ್ದು, ಕರಾವಳಿ ಹಾಗೂ ತಗ್ಗು ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಲಾಗಿದೆ.