ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿ, ಕಸ ಮತ್ತು ಟ್ರಾಫಿಕ್ ಸಮಸ್ಯೆಗಳ ಕುರಿತು ಸರಣಿ ಟ್ವೀಟ್‌ಗಳ ಮೂಲಕ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ, ಇದೀಗ ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ರಾಜಕೀಯ ಮತ್ತು ಉದ್ಯಮ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಭೇಟಿಯ ಹಿಂದಿನ ಕಾರಣವೇನು?: ಕೆಲ ದಿನಗಳ ಹಿಂದಷ್ಟೇ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿ, ಆಡಳಿತ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಕಿರಣ್ ಶಾ ಈ ದಿಢೀರ್ ಭೇಟಿಯ ಹಿಂದಿನ ಉದ್ದೇಶವೇನು ಎಂಬ ಚರ್ಚೆ ಜೋರಾಗಿತ್ತು. ಆದರೆ, ತಮ್ಮ ಸೋದರಳಿಯನ ಮದುವೆಗೆ ಆಹ್ವಾನ ನೀಡಲೆಂದೇ ತಾವು ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಆದರೂ, ಈ ಭೇಟಿಯನ್ನು ಕೇವಲ ವೈಯಕ್ತಿಕ ಕಾರ್ಯಕ್ರಮದ ಆಹ್ವಾನ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಡೆದ ವಾಕ್ಸಮರದ ನಂತರ, ಉಂಟಾಗಿದ್ದ ಬಿಕ್ಕಟ್ಟನ್ನು ಶಮನಗೊಳಿಸುವ ಪ್ರಯತ್ನ ಇದಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಡಿಕೆಶಿ ಹೇಳಿದ್ದೇನು?: ಭೇಟಿಯ ನಂತರ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಕಿರಣ್ ಮಜುಂದಾರ್-ಶಾ ಬೆಂಗಳೂರಿನ ಹಿತದೃಷ್ಟಿಯಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ನಾನೂ ಕೂಡ ಶೀಘ್ರದಲ್ಲೇ ಐಟಿ-ಬಿಟಿ ಸೇರಿದಂತೆ ಎಲ್ಲಾ ಉದ್ಯಮಗಳ ಮುಖ್ಯಸ್ಥರ ಸಭೆ ಕರೆದು, ನಗರದ ಅಭಿವೃದ್ಧಿ ಕುರಿತು ಚರ್ಚಿಸಲಿದ್ದೇನೆ,” ಎಂದು ಹೇಳುವ ಮೂಲಕ ಸಕಾರಾತ್ಮಕ ಸಂದೇಶ ರವಾನಿಸಿದ್ದಾರೆ.
ಈ ಹಿಂದೆ, ಬಿಜೆಪಿ ಸರ್ಕಾರದ ಅವಧಿಯಲ್ಲೂ ತಾವು ಮೂಲಸೌಕರ್ಯಗಳ ಬಗ್ಗೆ ಧ್ವನಿ ಎತ್ತಿದ್ದೆವು ಎಂದು ಕಿರಣ್ ಶಾ ಸಮರ್ಥಿಸಿಕೊಂಡಿದ್ದರು. ಇದೀಗ ಸರ್ಕಾರದ ಮುಖ್ಯಸ್ಥರನ್ನೇ ಖುದ್ದು ಭೇಟಿಯಾಗಿ ಮಾತುಕತೆ ನಡೆಸಿರುವುದು, ಟೀಕೆಗಳ ಮೂಲಕ ಉಂಟಾಗಿದ್ದ ಮುಜುಗರವನ್ನು ತಿಳಿಗೊಳಿಸುವ ಮತ್ತು ಸರ್ಕಾರದೊಂದಿಗೆ ಸೇರಿ ಕೆಲಸ ಮಾಡುವ ಒಂದು ರಾಜತಾಂತ್ರಿಕ ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.