ಜಪಾನ್‌ನಲ್ಲಿ ಭಾರತೀಯರಿಗೆ UPI ಪಾವತಿ ಸೌಲಭ್ಯ

0
19

ಡಿಜಿಟಲ್ ಭಾರತದ ಹೆಜ್ಜೆ ಜಾಗತಿಕ ವೇದಿಕೆಯತ್ತ

ನವದೆಹಲಿ: ಭಾರತೀಯ ಪ್ರವಾಸಿಗರು ಇನ್ನು ಜಪಾನ್‌ನಲ್ಲಿಯೂ ಸಹ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಮೂಲಕ ಪಾವತಿಸಬಹುದಾಗಿದೆ. ವಿದೇಶಗಳಲ್ಲಿ ಭಾರತದ ಡಿಜಿಟಲ್ ಪಾವತಿ ವ್ಯಾಪ್ತಿಯನ್ನು ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿದೆ ಇದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್‌ ಮಾಡಿ, “ಜಪಾನ್ ಇದೀಗ ಭಾರತೀಯ ಪ್ರವಾಸಿಗರಿಗೆ UPI ಮೂಲಕ ಪಾವತಿಸಲು ಅವಕಾಶ ನೀಡಲಿದೆ. ಇದು ಡಿಜಿಟಲ್ ಭಾರತದ ವಿಶ್ವಮಟ್ಟದ ಪಾದಚಿಹ್ನೆಯನ್ನು ವಿಸ್ತರಿಸುವ ಮಹತ್ವದ ಕ್ರಮ,” ಎಂದು ತಿಳಿಸಿದ್ದಾರೆ.

ಜಪಾನ್‌ನ NTT DATA ಮತ್ತು NPCI ಇಂಟರ್‌ನ್ಯಾಷನಲ್ ನಡುವಿನ ಪಾಲುದಾರಿಕೆಯಿಂದ, ಆಯ್ದ ಜಪಾನಿನ ವ್ಯಾಪಾರಿಗಳು ಇದೀಗ UPI ಪಾವತಿಗಳನ್ನು ಸ್ವೀಕರಿಸಲಿದ್ದಾರೆ. ಇದರಡಿ ಭಾರತೀಯ ಪ್ರವಾಸಿಗರು ವ್ಯಾಪಾರಿಗಳ QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಶಾಪಿಂಗ್, ಊಟ ಮತ್ತು ಸಾರಿಗೆ ಸೇರಿದಂತೆ ವಿವಿಧ ಸೇವೆಗಳಿಗೆ ಸುಗಮವಾಗಿ ಪಾವತಿಸಬಹುದು.

ಈ ಕ್ರಮವು ಭಾರತದ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆ UPI ಯನ್ನು ಜಪಾನ್‌ನ CAFIS ನೆಟ್‌ವರ್ಕ್‌ಗೆ ಸಂಪರ್ಕಿಸುತ್ತದೆ. ಇದರಿಂದ ಜಪಾನ್‌ಗೆ ಭೇಟಿ ನೀಡುವ ಭಾರತೀಯರಿಗೆ ನಗದು ರಹಿತ, ಸುರಕ್ಷಿತ ಮತ್ತು ವೇಗವಾದ ಪಾವತಿ ಅನುಭವ ಸಾಧ್ಯವಾಗಲಿದೆ.

2016 ರಲ್ಲಿ ಭಾರತದಲ್ಲಿ ಪ್ರಾರಂಭವಾದ UPI ಪಾವತಿ ವ್ಯವಸ್ಥೆ ಅತಿ ಕಡಿಮೆ ಅವಧಿಯಲ್ಲೇ ಕ್ರಾಂತಿಕಾರಿಯಾಗಿ ಬೆಳವಣಿಗೆ ಕಂಡಿದೆ. ಸೆಪ್ಟೆಂಬರ್ 2025ರ NPCI ದತ್ತಾಂಶದ ಪ್ರಕಾರ, ಭಾರತದಲ್ಲಿ 19.63 ಬಿಲಿಯನ್ ವಹಿವಾಟುಗಳು ನಡೆದಿದ್ದು, ಒಟ್ಟು ಮೌಲ್ಯ ರೂ. 24.9 ಟ್ರಿಲಿಯನ್ ತಲುಪಿದೆ. ಆಗಸ್ಟ್ 2025ರ ವರದಿ ಪ್ರಕಾರ, UPI ವಹಿವಾಟುಗಳು 31% ಏರಿಕೆ ಕಂಡು, ಒಟ್ಟು ಮೌಲ್ಯ ₹24.85 ಲಕ್ಷ ಕೋಟಿ ತಲುಪಿದೆ.

ಡಿಜಿಟಲ್ ಇಂಡಿಯಾದ ಈ ನವೀನ ಸಾಧನೆಯು ಭಾರತದ ತಂತ್ರಜ್ಞಾನ ಶಕ್ತಿಯನ್ನು ವಿಶ್ವದಾದ್ಯಂತ ಗುರುತಿಸಿಸುವಂತಾಗಿದೆ.

Previous articleಚಿತ್ರದುರ್ಗ: ಅಜ್ಜಿಗೆ ಫೋನ್ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಒದೆ, ವಿಡಿಯೋ ವೈರಲ್!
Next articleಸಚಿವ ಎಂ. ಬಿ.ಪಾಟೀಲ್ ಭೇಟಿಯಾದ ಉದ್ಯಮಿ ಕಿರಣ್‌ ಮಜುಂದಾರ್‌ ಷಾ

LEAVE A REPLY

Please enter your comment!
Please enter your name here