ಶಾಂತಿ- ನೆಮ್ಮದಿಯೇ ದೀವಳಿಗೆಯ ದೀಪ ಮಾಲೆ

0
16
ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ದೀಪಾವಳಿ ವಿಶೇಷ ಪ್ರಕಟವಾದ ಲೇಖನ.

ಮತ್ತೆ ದೀಪಾವಳಿ ಬಂದಿದೆ. ಪ್ರಸಕ್ತ ಕ್ಯಾಲೆಂಡರ್ ವರ್ಷದ ಈ ಎಂಟು ತಿಂಗಳುಗಳಲ್ಲಿ ಏನೆಲ್ಲ ಅನಾಹುತಗಳು, ಅವಘಡಗಳು, ದುರಂತಗಳು ಮತ್ತು ದುಷ್ಟ ಶಕ್ತಿಗಳ ಅಟ್ಟಹಾಸವನ್ನು ನೋಡಿ ಅನುಭವಿಸಬೇಕಾಯಿತು ನಾಡು? ದೀಪಾವಳಿ ಇವೆಲ್ಲವುಗಳಿಗೆ ಕಡಿವಾಣ ಹಾಕಿ ಮತ್ತೆ ಬೆಳಕು ಮೂಡಿಸಲಿ. ಸಮಾಜದಲ್ಲಿ ಶಾಂತಿಯ ನಂದಾದೀಪ ನಿರಂತರವಾಗಿ ಉರಿಯುವುದಕ್ಕೆ ದೀಪಾವಳಿ ಮುನ್ನುಡಿಯಾಗಲಿ. ಈ ಶಾಂತಿಗೆ ಸಂಕೇತವಾದ ಭಾವಿ ಪ್ರಜೆಗಳು ಖುಷಿ ಖುಷಿಯಾಗಿ ಬದುಕುವಂತಾಗಲಿ. ನಾಡಿನ ಅಶಾಂತಿಯ ಮತ್ತು ಕತ್ತಲೆಯ ಪುಟಗಳಿಂದ ಅತೀ ಹೆಚ್ಚು ಬಾಧಿತರಾಗುವವರು ನಮ್ಮ ಭವಿಷ್ಯದ ಪ್ರಜೆಗಳೇ. ಆದ್ದರಿಂದ ಈ ಚಿಣ್ಣರು ನೆಮ್ಮದಿಯಾಗಿ ಬಾಳಿ, ಸಮಾಜದಲ್ಲಿ ಸಮೃದ್ಧಿ ಮೂಡಲಿ ಎನ್ನುವ ಆಶಯವನ್ನು ದೀವಳಿಗೆ ಹೊತ್ತಿದೆ. ಬಾಹ್ಯವಾಗಿ ಬೆಳಗುತ್ತಿರುವ ನಾಡಿನ ಸಡಗರ ಮನಸ್ಸುಗಳಿಗೂ ಹಬ್ಬಲಿ.

  • ಬಿ. ಅರವಿಂದ

ರಂಗವಲ್ಲಿಯ ಮುಂದೆ ಹೂ ಮಕ್ಕಳಾಡುತಿರೆ.. ಮನೆಯೊಳಗೆ ದೀಪಗಳ ಮಾಲೆ ಮಾಲೆ… ! ಪ್ರಸಕ್ತ ದೀಪಾವಳಿಗೆ ಅತ್ಯಂತ ಸೂಕ್ತವಾಗಿ ಹೊಂದಾಣಿಕೆಯಾಗುವ ಕವಿವಾಣಿ ಇದು. ದೀಪಾವಳಿ ಎಂದರೆ ಸಂತೋಷ. ಬೆಳಕು. ಧನಾತ್ಮಕತೆಯ ಝಗಮಗಕ್ಕೆ ಸಂಕೇತ. ಮಕ್ಕಳು ನೆಮ್ಮದಿ ಮತ್ತು ಸಂತೋಷದಿಂದ ಇದ್ದಾರೆಂದರೆ ಅದು ನಾಡಿನ ಶಾಂತಿಯ ದ್ಯೋತಕದ ಮಾನದಂಡ. ದೇಶವೆಂಬ ಮನೆಯ ದೀಪಾವಳಿಗೆ ಈ ಶಾಂತಿಯೇ ಅರ್ಥಪೂರ್ಣ ದೀಪಗಳ ಮಾಲೆ.

ವರ್ಷದ ಈ ಎಂಟು ತಿಂಗಳುಗಳಲ್ಲಿ ಏನೇಲ್ಲ ನೋಡಬೇಕಾಯಿತು? ಎಷ್ಟೆಲ್ಲ ಅನುಭವಿಸಬೇಕಾಯಿತು? ಒಂದಿಷ್ಟು ಜಿಎಸ್‌ಟಿ ಕಡಿತವಾದಾಗ್ಯೂ ಒಟ್ಟಾರೆ ಬಾಳು ಈ ಅವಧಿಯಲ್ಲಿ ದುಬಾರಿಯಾಗಿದೆ. 2025ರ ಕ್ಯಾಲೆಂಡರ್ ಮುಗಿಯಲು ಎರಡು ತಿಂಗಳುಗಳಷ್ಟೇ ಉಳಿದಿದ್ದು, ಈ ಎಂಟು ತಿಂಗಳುಗಳಲ್ಲಿ ನಾವೆಲ್ಲ ಊಹಿಸಲೂ ಅಸಾಧ್ಯವಾದ ಅನಾಹುತ- ದುರಂತಗಳಿಗೆ ಸಾಕ್ಷಿಯಾದೆವು. ನೊಂದೆವು. ಎಲ್ಲಕ್ಕಿಂತ ಹೆಚ್ಚಾಗಿ ಮುಗ್ಧ ಮಕ್ಕಳ ನಲಿವನ್ನು ಕಿತ್ತುಕೊಳ್ಳುವ ಘಾತುಕತೆಯ ಪರಮಾವಧಿಗೆ ಸಾಕ್ಷಿಯಾದೆವು. ನಾಡಿನ ಅಶಾಂತಿಯ ಮತ್ತು ಕತ್ತಲೆಯ ಪುಟಗಳಿಂದ ಅತೀ ಹೆಚ್ಚು ಬಾಧಿತರಾಗುವವರು ನಮ್ಮ ಭವಿಷ್ಯದ ಪ್ರಜೆಗಳೇ.

ಮಕ್ಕಳು ಬಾಯಿಬಿಟ್ಟು ಹೇಳುವುದಿಲ್ಲ ಎಂದರೆ ಅವರ ಮನಸ್ಸಿನಲ್ಲೂ ತಮ್ಮದೇ ಆದ ತಾಕಲಾಟ- ಆಲೋಚನೆಗಳು ನಡೆಯುವುದಿಲ್ಲವೇ? ತಮ್ಮ ಕಣ್ಣ ಮುಂದೆಯೇ ತಂದೆಯನ್ನು ಕೊಂದ ಕರಾಳ ಘಟನೆಯನ್ನು ಆ ಮಕ್ಕಳು ಮರೆತಿರುತ್ತಾರೆಯೇ? ಪೆಹಲ್ಗಾಮಿನ ಹಿಮಾಚ್ಛಾದಿತ ಪರ್ವತ ಶ್ರೇಣಿಯನ್ನು ಮರೆತಾರು. ಕಣ್ಣೆದುರು ಚಿಮ್ಮಿದ ಅಪ್ಪನ ರಕ್ತದ ಹನಿಗಳು ಅವರ ಮನಸ್ಸಿನಲ್ಲಿ ಈಗಲೂ ಇದ್ದೇ ಇವೆಯಲ್ಲ… ಮಕ್ಕಳ ಸೆನ್ಸಿಟಿವಿಟಿ ಬೇರೆಯೇ ಸ್ತರದ್ದು ಎಂಬುದನ್ನು ಮರೆಯಬಾರದು. ಸಿಹಿ ತಿನಿಸು ಕೊಟ್ಟ ಮಾತ್ರಕ್ಕೆ; ಬಟ್ಟೆ ಕೊಡಿಸಿದ ಮಾತ್ರಕ್ಕೆ, ಸಂತೋಷದಿಂದ ಆಡಿ ನಲಿದಾವೆಯೇ ಈ ಮುಗ್ಧ ಮಕ್ಕಳು? ಇದನ್ನು ಅರ್ಥ ಮಾಡಿಕೊಳ್ಳೋದು ಮುಖ್ಯ.

ಹಾಗಾಗಿಯೇ ಈಗ ಬೆಳಕಿಗಾಗಿ ಕಾತರಿಸುತ್ತಿದ್ದೇವೆ. ಚಿಣ್ಣರು ನೆಮ್ಮದಿಯಾಗಿ ಬಾಳಿ, ಸಮಾಜದಲ್ಲಿ ಸಮೃದ್ಧಿ ಮೂಡಲಿ ಎನ್ನುವ ಆಶಯದೊಂದಿಗೆ ಪುನಃ ದೀಪಾವಳಿ ಕಾಲಿಟ್ಟಿದೆ. ದೇಶ- ಸಮಾಜ ಮತ್ತು ಎಲ್ಲರ ಬದುಕಿಗೆ ಮುಗ್ಧ ಮಕ್ಕಳೇ ಭವಿಷ್ಯ. ಎಳೆಯರು ಖುಷಿ ಖುಷಿಯಿಂದ ಮನೆಯಂಗಳದಲ್ಲಿ (ಆಧುನಿಕ ಸಂದರ್ಭದಲ್ಲಿ ಅಪಾರ್ಟ್ಮೆಂಟ್ ಸಂಕೀರ್ಣದ ಆವರಣದಲ್ಲಿ !) ಆಡಿ ನಲಿಯುತ್ತಿದ್ದರೆ, ಯಾಂತ್ರಿಕವಾಗಿ ದೀಪ ಹಚ್ಚದಿದ್ದರೂ, ನಾಡು ಮತ್ತು ನಾಡವರ ಮನಸ್ಸುಗಳಿಗೆ ದೀಪಾವಳಿಯೇ… ದೇಶ- ರಾಜ್ಯವೆಂಬ ನಮ್ಮ ಆಲಯಗಳಿಗೆ ಸಂಭ್ರಮದ ಪ್ರಕಾಶವೇ…

ಮಕ್ಕಳ ನೆಮ್ಮದಿ ಇಡೀ ಬಾಳ್ವೆಯ ನೆಮ್ಮದಿ: ಮಕ್ಕಳ ಸಂತೋಷದ ಆಟ- ಕಿಲಾಡಿತನಗಳು ದೀಪ ಹಚ್ಚಿದ್ದಕ್ಕಿಂತ ಹೆಚ್ಚು. ಕೆಟ್ಟ ಸುದ್ದಿಗಳು, ಸಂಭವಿಸುತ್ತಲೇ ಇರುವ ದುರಂತಗಳು, ಮುಗಿಯುತ್ತವೋ ಇಲ್ಲವೋ ಎಂದು ವ್ಯಾಕುಲತೆ ಮೂಡಿಸಿರುವ ಯುದ್ಧಗಳು, ಭಯೋತ್ಪಾದಕ ಶಕ್ತಿಗಳು, ಕೋಮು ಶಕ್ತಿಗಳು ಹೀಗೆ ಹತ್ತಾರು ನಕಾರಾತ್ಮಕ ಅಂಶಗಳು ಒಗ್ಗೂಡಿ ರಂಗವಲ್ಲಿಯ ಮುಂದೆ ಹೂ ಮಕ್ಕಳಾಟದ ಸಂಭ್ರಮವನ್ನು ಕಿತ್ತುಕೊಂಡಿವೆ. ಈ ದೀಪಾವಳಿಯ ಸಂದರ್ಭದಲ್ಲಾದರೂ ಮುಗ್ಧ ಮಕ್ಕಳು ಮುಕ್ತವಾಗಿ ಆಡಿ ನಲಿದು, ನಾಡು ಮತ್ತೆ ಶಾಂತಿಯ ಬೆಳಕಿನಲ್ಲಿ ಮೀಯುವಂತಾಗಲಿ ಎಂಬ ಆಶಯ ಈ ಬಾರಿಯ ಹಬ್ಬಕ್ಕೆ ಸೂಕ್ತ. ಹೌದು. ಬಾಳೆಂಬ ಪಥದಲ್ಲಿ ಆಶಾಭಾವನೆಯೇ ಹೆದ್ದಾರಿ. ಈ ಮಾರ್ಗದ ಮೇಲೆ ಪಯಣಿಸುತ್ತಲೇ ದೀಪಾವಳಿಯಿಂದ ಹೊಸ ಬದುಕಿಗೆ ತೆರೆದುಕೊಳ್ಳುವ ಸಕಾರಾತ್ಮಕ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಕಾದ ದಿನಗಳಿವು.

ಏಕೆಂದರೆ, ಪ್ರಕೃತಿಯ ನವ ಮನ್ವಂತರಕ್ಕೆ ವಸಂತ ಕಾವ್ಯ ಬರೆದರೆ, ಒಟ್ಟಾರೆ ಬದುಕಿನ ಭವ್ಯ ಭವಿಷ್ಯಕ್ಕೆ ದೀಪಾವಳಿಯೇ ಅಡಿಪಾಯ. ದೀಪಗಳು ಪ್ರಜ್ವಲಿಸಿ, ಬಾಳು ಬೆಳಗಿದರೆ, ಇನೈದು ತಿಂಗಳಿಗೆ ಅಡಿ ಇಡುವ ವಸಂತನ ಹೊಸ ಅಧ್ಯಾಯವೂ ಯುಗಾದಿಗೆ ಅರ್ಥ ತರುತ್ತದೆ. ಆದ್ದರಿಂದ ದೀಪಾವಳಿಯ ಹೊತ್ತಿನಲ್ಲಿ ಮನಸ್ಸುಗಳು ಜ್ವಾಜಲ್ಯಮಾನವಾಗಿ ಪ್ರಕಾಶಿಸುವುದಕ್ಕೆ ಎಲ್ಲರೂ ಸಂಕಲ್ಪ ತೊಡಬೇಕಾದ ದಿನಗಳಿವು.

ದೀಪಾವಳಿಗೆ ಕಾರ್ ಖರೀದಿಸಿದೆ. ಹಳೆಯ ಫ್ರಿಜ್- ವಾಷಿಂಗ್ ಮಷಿನ್ ಬದಲಿಸಿದೆ. ಬಟ್ಟೆ- ಬರೆ ಖರೀದಿಸಿದೆ. ಕುಟುಂಬ ಸದಸ್ಯರಿಗೆ ಸತತ ನಾಲ್ಕು ದಿನ ಶ್ರೀಮಂತಿಕೆ ಸಾರುವ ಸಮೃದ್ಧ ಸಿಹಿ ಉಣಿಸಿದೆ. ಸ್ನೇಹಿತರು- ಬಂಧು ಬಾಂಧವರೆಲ್ಲರಿಗೂ ಗಿಫ್ಟ್ ಕೊಟ್ಟೆ… ಇತ್ಯಾದಿ ಇತ್ಯಾದಿಗಳೆಲ್ಲ ಇರಲಿ. ಬೇಡವೆಂದವರು ಯಾರು? ಈ ಎಲ್ಲ ಪ್ರ್ಯಾಕ್ಟಿಕಲ್ ವಿಷಯಗಳ ಆಚೆ, ಪ್ರತಿಯೊಬ್ಬರ ಬಾಳಿನಲ್ಲಿ, ನಾಡು- ಸಮಾಜದಲ್ಲಿ ಶಾಂತಿಯ ನಂದಾದೀಪ ಬೆಳಗಿಸಬೇಕು ಎಂಬುದು ನಮ್ಮೆಲ್ಲರ ಸಂಕಲ್ಪವಾಗಬೇಕಿದೆ.

ತಲ್ಲಣಿಸಿದ ಮನಸ್ಸುಗಳಿಗೆ ಮತ್ತೆ ನೆಮ್ಮದಿಯನ್ನು; ಹತಾಶೆಯ ಸಾಗರಕ್ಕೆ ಪೌರ್ಣಿಮೆಯ ಸಮಾಧಾನವನ್ನು; ನೊಂದ ಬಾಳಿಗೆ ಭವಿಷ್ಯದ ಆಶಾಕಿರಣವನ್ನು ಉಣಬಡಿಸಲು ಶಾಂತಿಯ ನಂದಾದೀಪದಿಂದ ಮಾತ್ರ ಸಾಧ್ಯ. ಪ್ರಸಕ್ತ ವರ್ಷದ ದೀಪಾವಳಿಗೆ ಈ ಸಂಕಲ್ಪವೇ ಆಧಾರವಾಗಲಿ.

ಹಾಗೆಯೇ, ಪ್ರಳಯ ಬರಲಿದೆ; ಮುಂದಿನ ಸಾವಿರ ದಿನಗಳು ದುರಂತಗಳಿಗೆ ಸಾಕ್ಷಿಯಾಗಲಿವೆ ಎಂದು ಪೂಂಗುತ್ತ, ದೇಶದಲ್ಲಿ ಭಯ ಹುಟ್ಟಿಸಿರುವ ಯೂ ಟ್ಯೂಬ್ ಪಾಡ್‌ಕಾಸ್ಟ್ಗಳಪಂಡಿತರಿಗೆ ಶಾಂತಿಯ ಬೆಳಕಿನ ಸಂಕಲ್ಪ ತಕ್ಕ ಉತ್ತರವಾಗಲಿ. ದೀಪಾವಳಿಯ ಜ್ಯೋತಿ(ಶಾಂತಿಯುತ ಬಾಳಿನ ಆಸೆ) ಬಲಗೊಳ್ಳದಿದ್ದರೆ ದೀಪಗಳ ಹಬ್ಬಕ್ಕೆ ಅರ್ಥ ಉಳಿಯದು ಎನ್ನುವುದನ್ನು ಈ ದೀವಳಿಗೆ ತಿಳಿಸಿಕೊಡಲಿ.

ನಾಡಿಗೆಲ್ಲ ಹಬ್ಬ… ನಲ್ಮೆಯ ಹಬ್ಬ !
ದೀಪಾವಳಿ ದೊಡ್ಡ ಹಬ್ಬ. ಇದಕ್ಕೆ ಮನೆಯ ಚೌಕಟ್ಟುಗಳನ್ನು ಮೀರಿದ ಮನದ ಸಂಭ್ರಮವಿದೆ. ಪ್ರಕೃತಿಗೆ ವಸಂತ ಋತುವಿನ ಆಗಮನದಂತೆ, ಮಹಾನಗರಗಳ ಬಾಳಿಗೆ ದೀಪಾವಳಿ ಹಬ್ಬದ ಬರುವಿಕೆ. ದೀಪಾವಳಿ ಮುಹೂರ್ತದಿಂದ ಇದನ್ನು ಮಾಡೋಣ- ಅದನ್ನು ಆರಂಭಿಸೋಣ ಇತ್ಯಾದಿ ಮಾತುಗಳು ನಗರ ಪ್ರದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿವೆ. ಸಕಲರೂ ಡಿಜಿಟಲೀಕರಣದ ಯಾಂತ್ರಿಕತೆ ಹಾಗೂ ಅದರ ಸ್ವಾಭಾವಿಕ ನ್ಯಾಯವೇನೋ ಎಂಬಂತೆ ಬಂದೆರಗಿರುವ ಮಬ್ಬನ್ನು ದೂರವಾಗಿಸಿಕೊಳ್ಳಲು ಶತಪ್ರಯತ್ನಪಡುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಇಲ್ಲಿ ದೇವತಾ ಆರಾಧನೆಯಷ್ಟೇ ಪ್ರಾಮುಖ್ಯ ಚಂದ ಚಂದ ಕಲೆಯುವಿಕೆಗೆ. ಸಂತೋಷದಿಂದ ಬೆರೆತು ಸಿಹಿ ಮಾತು- ಸಿಹಿ ನಡೆಯ ಮಿಲನಕ್ಕೆ ಆದ್ಯತೆ. ಪರಸ್ಪರರು ಬೆಳಕಿನಲ್ಲಿ ಒಬ್ಬರ ಮುಖವನ್ನು ಇನ್ನೊಬ್ಬರು ಆತ್ಮೀಯತೆಯಿಂದ ನೋಡುವುದಕ್ಕೆ ಒತ್ತು. ಈ ಕಾರಣದಿಂದ ಕೋವಿಡ್ ನಂತರದ ದೀಪಾವಳಿಗೆ ಎಲ್ಲ ನಗರಗಳಲ್ಲಿ ಇನ್ನಿಲ್ಲದ ಮಹತ್ವ. ಪ್ರಸಕ್ತ ದೀಪಾವಳಿಯ ಸಂದರ್ಭದಲ್ಲಂತೂ ಏನೋ ಸಕಾರಾತ್ಮಕ ನಿರೀಕ್ಷೆ.

ರಚನಾತ್ಮಕ ಚಿಂತನೆ. ಪರಸ್ಪರರು ತಮ್ಮ ನಡುವೆ ಕಟ್ಟಿಕೊಂಡು ಕೂತಿರುವ ಗೋಡೆಗಳನ್ನು ಕೊರೆದು ಬೆಳಕು ಹರಿಸಲಿರುವ ಹೃದಯ ಶ್ರೀಮಂತ ದೀಪಾವಳಿಯನ್ನು ಈಗ ನಗರ ಪ್ರದೇಶದಲ್ಲಿ ಕಾಣುವಂತಾಗಲು ಕಾರಣ, ಮೂರು ವರ್ಷ ದೀಪದ ಮಹತ್ವವನ್ನೇ ಮರೆತಂತೆ ಸಾಗಿದ್ದ ಜೀವನ. ನಗರ ಪ್ರದೇಶದ ಓ-2ನಂತೆ ಈ ದೀಪಾವಳಿ ಕಾಲಿಟ್ಟಿದೆ ಎಂದರೆ ಖಂಡಿತ ಅತಿಶಯೋಕ್ತಿಯಾಗದು.

`ಹೂವು ಬಳ್ಳಿಗೆ ದೀಪ… ಹಸಿರು ಬಯಲಿಗೆ ದೀಪ… ಸ್ನೇಹಭಾವ ನಮ್ಮನಿಮ್ಮೆಲ್ಲರ ದೀಪ’ ಎಂಬ ಅರಿವು ಹೆಚ್ಚಿರುವ ದಿನಗಳಿವು. ಈ ಅರಿವು ಬೆಳಕಾಗಿ ಹರಿಯಲು ಕಾತರಿಸುವುದೇ ದೀಪಾವಳಿಯ ಸೊಗಸು. ಅಂತರಂಗದ ಬೆಳಕು ಶಾಶ್ವತ. ಆದರೂ ಮನುಷ್ಯನಿಗೆ ಬಾಹ್ಯ ಬೆಳಕು ಬೇಕೇಬೇಕು. ಅದನ್ನು ದೀವಳಿಗೆಯ ಮೆರವಣಿಗೆಯಲ್ಲಿ, ಈ ವಾಣಿಜ್ಯ- ಕಾರ್ಪೋರೇಟ್ ನೆಲದ ಜಂಜಡದಲ್ಲಿ ಕಾಣುವಂತಾಗಿದೆ. ಹೀಗಾಗಿ ಈ ಬಾರಿಯ ದೀಪವಾಳಿ ಎಲ್ಲ ದೃಷ್ಟಿಯಿಂದ ಮೈದುಂಬಿದೆ. ವಿಜೃಂಭಣೆಯಿಂದ ಕೂಡಿದೆ. ನಲ್ಮೆಯ ನೋಟವನ್ನು ನಗರ ಪ್ರದೇಶದಲ್ಲಿ ಕಾಣುವಂತಾಗಿದೆ.

Previous articleಚಂದನ್- ಕ್ರಿಸ್ ದೀಪಾವಳಿ ಧಮಾಕಾ
Next articleಬಹಿರಂಗವಾದ ಇನ್ಸ್‌ಪೆಕ್ಟರ್‌ ‘ಚಿನ್ನು-ಮುದ್ದು’ ಚಾಟ್; ಅತ್ಯಾಚಾರ ಆರೋಪ!

LEAVE A REPLY

Please enter your comment!
Please enter your name here