ಅನುಕಂಪದ ಆಧಾರದ ಮೇಲೆ ಉದ್ಯೋಗ ಸಿದ್ದರಾಮಯ್ಯ ಭರವಸೆ: ಹುತಾತ್ಮರ ಕುಟುಂಬಕ್ಕೆ ಆಸರೆ

0
16

ಬೆಂಗಳೂರು: ಪೊಲೀಸ್ ಸಂಸ್ಮರಣಾ ದಿನಾಚರಣೆಯ ಸಂದರ್ಭದಲ್ಲಿ, ಕರ್ತವ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಹುತಾತ್ಮರಾದ ಸಿಬ್ಬಂದಿಯ 116 ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಆದೇಶವನ್ನು ಹೊರಡಿಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕಳೆದ ಒಂದು ವರ್ಷದಲ್ಲಿ ರಾಜ್ಯದ 8 ಮಂದಿ ಸೇರಿದಂತೆ ದೇಶಾದ್ಯಂತ 191 ಪೊಲೀಸ್ ಸಿಬ್ಬಂದಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದಾರೆ. ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಕುಟುಂಬಗಳ ಜೊತೆ ನಿಲ್ಲುವುದು ನಮ್ಮ ಕರ್ತವ್ಯ,” ಎಂದು ಹೇಳಿದರು.

ಪೊಲೀಸ್ ಕಲ್ಯಾಣಕ್ಕೆ ಹೊಸ ಯೋಜನೆಗಳು:

  • ಪೊಲೀಸ್ ಸಿಬ್ಬಂದಿಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಎರಡು ಪ್ರಮುಖ ಯೋಜನೆಗಳನ್ನು ಪ್ರಕಟಿಸಿದರು
  • ನಿವೃತ್ತ ಪೊಲೀಸ್ ಆರೋಗ್ಯ ಯೋಜನೆ: ಈ ಯೋಜನೆಯಡಿ ವೈದ್ಯಕೀಯ ವೆಚ್ಚದ ಮರುಪಾವತಿ ಮಿತಿಯನ್ನು ವಾರ್ಷಿಕ ರೂ.1 ಲಕ್ಷದಿಂದ ರೂ .50 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ಆರೋಗ್ಯ ತಪಾಸಣಾ ವೆಚ್ಚ: ಕರ್ತವ್ಯದಲ್ಲಿರುವ ಎಲ್ಲಾ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣಾ ವೆಚ್ಚವನ್ನು ರೂ.1ಸಾವಿರ ದಿಂದ ರೂ.1500 ಕ್ಕೆ ಏರಿಸಲಾಗಿದೆ.

ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರವನ್ನು ಶ್ಲಾಘಿಸಿದ ಸಿಎಂ, “ಸಂವಿಧಾನ ವಿರೋಧಿ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದ ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕುವಲ್ಲಿ ನಮ್ಮ ಇಲಾಖೆ ಯಶಸ್ವಿಯಾಗಿದೆ. ಅದೇ ರೀತಿ, ಮಾದಕ ವಸ್ತುಗಳ ಹಾವಳಿಯನ್ನು ತಡೆಯುವಲ್ಲಿಯೂ ಉತ್ತಮ ಕೆಲಸ ಮಾಡಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು DCRE  ಪೊಲೀಸ್ ಠಾಣೆಗಳನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ಇವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಕೋಮುವಾದಿ ಮತ್ತು ದುಷ್ಟ ಶಕ್ತಿಗಳನ್ನು ಹತ್ತಿಕ್ಕುವಲ್ಲಿ ಪೊಲೀಸರ ಪಾತ್ರ ನಿರ್ಣಾಯಕ ಎಂದು ಅವರು ಒತ್ತಿ ಹೇಳಿದರು.

Previous articleಚೀನಾಕ್ಕೆ ಟ್ರಂಪ್ ಶಾಕ್: ನವೆಂಬರ್ 1ರ ಗಡುವು, ಇಲ್ಲವೇ 155% ಸುಂಕದ ಬರೆ!
Next articleಬೆಂಗಳೂರು: ಚಿಕಿತ್ಸೆಯ ಹೆಸರಲ್ಲಿ ಯುವತಿಯೊಂದಿಗೆ 56 ವರ್ಷದ ವೈದ್ಯನ ವಿಕೃತಿ

LEAVE A REPLY

Please enter your comment!
Please enter your name here