ಪಂಜಾಬ್‌: ಗರೀಬ್ ರಥ ಎಕ್ಸ್‌ಪ್ರೆಸ್‌ ರೈಲನಲ್ಲಿ ಬೆಂಕಿ

0
83

ಚಂಡೀಗಢ: ಲುಧಿಯಾನದಿಂದ ದೆಹಲಿಗೆ ತೆರಳುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12204) ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೋಚ್‌ಗಳು ಹೊತ್ತಿ ಉರಿದ ಘಟನೆ ಪಂಜಾಬ್‌ನ ಸಿರ್ಹಿಂದ್ ರೈಲು ನಿಲ್ದಾಣದ ಹತ್ತಿರ ಬೆಳಗ್ಗೆ ಸಂಭವಿಸಿದೆ.

ಘಟನೆಯು ಇಂದು ಬೆಳಗ್ಗೆ 7:30ರ ಸುಮಾರಿಗೆ ನಡೆದಿದ್ದು, ರೈಲಿನ ಜಿ-19 ಕೋಚ್ ಸೇರಿ 2 ರಿಂದ 3 ಎಸಿ ಕೋಚ್‌ಗಳು ಬೆಂಕಿಗೆ ಆಹುತಿಯಾಗಿವೆ ಎಂದು ಜಿಆರ್‌ಪಿ (Government Railway Police) ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಪ್ರಯಾಣಿಕರೊಬ್ಬರು ಸರಪಳಿ ಎಳೆದು ರೈಲನ್ನು ತಕ್ಷಣ ನಿಲ್ಲಿಸಿದರು. ಚಾಲಕರು ಕೂಡಲೇ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಇಳಿಯುವಂತೆ ಕೇಳಿಕೊಂಡು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ರೈಲ್ವೆ ಸಿಬ್ಬಂದಿ ಮತ್ತು ಪೊಲೀಸರು ಕೂಡಲೇ ಎಚ್ಚರಗೊಂಡು ಸ್ಥಳಕ್ಕೆ ಧಾವಿಸಿದರು.

ಸ್ಥಳೀಯ ಅಗ್ನಿಶಾಮಕ ದಳ, ಜಿಆರ್‌ಪಿ, ಆರ್‌ಪಿಎಫ್ ಹಾಗೂ ರೈಲ್ವೆ ನಿಲ್ದಾಣದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿಯ ಮೂಲ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಎಸಿ ಯಂತ್ರದ ದೋಷದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ.

ಗೊಂದಲದಲ್ಲಿ ರೈಲಿನಿಂದ ಇಳಿಯುವ ವೇಳೆ ಕೆಲವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಂಜಾಬ್ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಮುಂದಿನ ಪ್ರಯಾಣಕ್ಕಾಗಿ ಹೊಸ ಕೋಚ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ.

ರೈಲು ಅಮೃತಸರದಿಂದ ಬಿಹಾರದ ಸಹರ್ಸಾ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರ ತ್ವರಿತ ಪ್ರತಿಕ್ರಿಯೆ ಮತ್ತು ಸಿಬ್ಬಂದಿಗಳ ಸಮಯೋಚಿತ ಕ್ರಮದಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

Previous articleಜೊತೆಗಿದ್ದವರನ್ನು ಹೊರಗೆ ಕಳುಹಿಸಿ ಖರ್ಗೆ  ಡಿಕೆಶಿ ರಹಸ್ಯ ಮಾತುಕತೆ
Next articleಐಪಿಎಲ್ ಆದಾಯಕ್ಕೆ ಕತ್ತರಿ: ಬಿಸಿಸಿಐಗೆ ಆಘಾತ, ಆರ್ಸಿಬಿಗೆ ಗರಿಮೆ!

LEAVE A REPLY

Please enter your comment!
Please enter your name here