ದಾವಣಗೆರೆ: ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವುದು ಬಿಟ್ಟು ದೇಶ ಪ್ರೇಮಕ್ಕೆ ಹೆಸರಾಗಿರುವ ಆರ್ ಎಸ್ ಎಸ್ ನ ಬ್ಯಾನ್ ಮಾಡಲು ಮುಂದಾದರೆ ಬರುವ 2028ರ ಚುನಾವಣೆಯಲ್ಲಿ ಜನರು ನಿಮ್ಮನ್ನು ಅಡ್ರೆಸ್ ಇಲ್ಲದಂತೆ ಮನೆಗೆ ಕಳಿಸುತ್ತಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ನೆರೆಹಾವಳಿ ಸೇರಿದಂತೆ ಅನೇಕ ಪ್ರಾಕೃತಿಕ ಸಂಕಷ್ಟಕ್ಕೆ ಸಿಲುಕಿದಾಗ, ದೇಶದ ಜನತೆಗೆ ಬೆನ್ನೆಲುಬಾಗಿ ಆರೆಸ್ಸೆಸ್ ಸ್ವಯಂ ಸೇವಕರು ನಿಂತಿದ್ದಾರೆ. ಆದರೆ, ಇಂಥ ಸೇವಾ ಮನೋಭಾವ ಇರುವ ಸಂಘಟನೆಯನ್ನು ಬ್ಯಾನ್ ಮಾಡಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ ಎಂದರೆ ಇವರಿಗೆ ಅಧಿಕಾರರ ಮದ ನೆತ್ತಿಗೇರಿದೆ ಅನ್ನಿಸುತ್ತದೆ ಎಂದು ಕಿಡಿಕಾರಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರೆಸ್ಸೆಸ್ ನಿಷೇಧ ಮಾಡಿ ಒಂದೇ ವರ್ಷದಲ್ಲಿ ಅದನ್ನು ವಾಪಸ್ಸು ಪಡೆದಿದ್ದರು, ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮತ್ತು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ಆರ್ ಎಸ್ಎಸ್ ಬ್ಯಾನ್ ಮಾಡಿ ಮತ್ತೆ ವಾಪಸ್ಸು ಪಡೆದರು. ನಿಮಗೆ ತಾಕತ್ ಇದ್ದರೆ ಆರೆಸ್ಸೆಸ್ ಬ್ಯಾನ್ ಮಾಡಿ ನೋಡೋಣ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.
ಆರ್ ಎಸ್ಎಸ್ ಖುರ್ಚಿಗಾಗಿ ಯಾವತ್ತು ಆಸೆ ಪಟ್ಟಿಲ್ಲ ದೇಶದ ಕೆಲಸ ಮಾಡುತ್ತಿದೆ. ಆದರೆ ಪ್ರಿಯಾಂಕಾ ಖರ್ಗೆಯವರು ಸೂಪರ್ ಸಿಎಂ ರಂತೆ ವರ್ತಿಸಿ, ನಿನ್ನೆ ಸಚಿವ ಸಂಪುಟದಲ್ಲಿ ಆರ್ ಎಸ್ಎಸ್ ಗೆ ಅಂಕುಶ ಹಾಕುವ ಕೆಲಸ ಮಾಡಿದ್ದಾರೆ.
ಅಧಿಕಾರಕ್ಕೆ ಬಂದಿದ್ದೀರೆಂದು ಆರ್ ಎಸ್ಎಸ್ ನ ಮೇಲೆ ಪ್ರಹಾರ ಮಾಡುತ್ತಿರುವ ಇವರುಗಳಿಗೆ ಮನೆಗಳಿಗೆ ಬೆಂಕಿ ಇಟ್ಟವರು, ಪೊಲೀಸರ ಮೇಲೆ ಹಲ್ಲೆ ಮಾಡಿದವರು, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರು, ಕಲ್ಲು ತೂರಾಟ ನಡೆಸಿದವರೆಲ್ಲಾ ಇವರ ಸಹೋದರರು ಎಂದು ಕುಟುಕಿದರು.
ಆರ್ ಎಸ್ ಎಸ್ ಮಾನ್ಯತೆ ಪಡೆದಿರುವ ಸಂಘಟನೆಯಾ ಎಂದು ಪ್ರಶ್ನಿಸುತ್ತಾರೆ. ಇಡೀ ದೇಶದ ಜನರ ಮನ್ನಣೆ ಪಡೆದು ಮಾನ್ಯತೆ ಪಡೆದುಕೊಂಡಿರುವ ಸಂಘಟನೆ ಆರೆಸ್ಸೆಸ್. ಗೋಮಾತೆಯನ್ನು ಕೊಂದು ದೇಶವಿರೋಧಿ ಕೆಲಸ ಮಾಡೋರು ನಿಮಗೆ ದೇಶಪ್ರೇಮಿಗಳಂತೆ ಕಾಣುತ್ತಾರೆ. ಮಾರಕಾಸ್ತ್ರ ಹಿಡಿದು ಓಡಾಡುವವರನ್ನು ಸುಮ್ಮನೆ ಬಿಟ್ಟು ಈಗ ದಂಡ ಹಿಡಿದು ಓಡಾಡಿದವರ ಮೇಲೆ ಕ್ರಮಕೈಗೊಳ್ಳುತ್ತಿರೇನು ಎಂದು ಪ್ರಶ್ನಿಸಿದರು.
ಗಣೇಶ ಹಬ್ಬದಲ್ಲಿ ಬಂದು ಭಾಷಣ ಮಾಡಿದರೆ ನಾಯಕರಾಗಲ್ಲ: ಸ್ವಂ ಘೋಷಿತ ನಾಯಕರಾಗಬಾರದು, ಜನ ಮೆಚ್ವಿದ ನಾಯಕನಾಗಬೇಕು ಎಂದು ಸ್ವಪಕ್ಷದ ನಾಯಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬಕ್ಕೆ ತೆರಳಿ ಭಾಷಣ ಮಾಡೋದು. ನನಗೆ ಅವರ ಬೆಂಬಲ ಇದೆ. ಇವರ ಬೆಂಬಲ ಇದೆ ಎನ್ನುವ ಅವರಿಗೆ ಯಾರ ಬೆಂಬಲ ಇದೆ ಎಂದು ಸ್ಪಷ್ಟಪಡಿಸಲಿ ಆಗ್ರಹಿಸಿದರು.