ಗೋವಾ: ಮಾಜಿ ಮುಖ್ಯಮಂತ್ರಿ ರವಿ ನಾಯ್ಕ್ ನಿಧನ

0
79

ಪಣಜಿ: ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ಕೃಷಿ ಸಚಿವ ರವಿ ನಾಯ್ಕ್ (Ravi Naik) ಅವರು ಮಂಗಳವಾರ ತಡರಾತ್ರಿ ಹೃದಯಸ್ತಂಭನ (Cardiac Arrest)ದಿಂದ ನಿಧನರಾಗಿದ್ದಾರೆ.

ಪಣಜಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತಮ್ಮ ನಿವಾಸದಲ್ಲಿ ರವಿ ನಾಯ್ಕ್(79) ಅವರಿಗೆ ಅಕಸ್ಮಾತ್ ಹೃದಯ ತೀವ್ರ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಪೊಂಡಾ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರ ಪ್ರಯತ್ನ ಫಲಿಸದೆ ಅವರು ತಡರಾತ್ರಿ 1 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.

ಕುಟುಂಬ ಮೂಲಗಳ ಪ್ರಕಾರ, ರವಿ ನಾಯ್ಕ್ ಅವರ ಅಂತ್ಯಕ್ರಿಯೆ ಇಂದು ಸಂಜೆ 3 ಗಂಟೆಗೆ ಪೊಂಡಾದಲ್ಲಿ ನೆರವೇರಲಿದೆ. ಅವರು ತಮ್ಮ ಹಿಂದೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಾಜಕೀಯ ಜೀವನ ಮತ್ತು ಕೊಡುಗೆ: ರವಿ ನಾಯ್ಕ್ ಅವರು ಗೋವಾ ರಾಜ್ಯದ ರಾಜಕೀಯದಲ್ಲಿ ಹಲವು ದಶಕಗಳಿಂದ ಪ್ರಮುಖ ಪಾತ್ರವಹಿಸಿದ್ದರು. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದು, ಏಳು ಬಾರಿ ಶಾಸಕರಾಗಿ ಜನರಿಂದ ಆಯ್ಕೆಯಾದಿದ್ದರು. ಅವರ ನಾಯಕತ್ವದಲ್ಲಿ ಗೋವಾ ರಾಜ್ಯದ ಕೃಷಿ, ಶಿಕ್ಷಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಕೊಡುಗೆಗಳು ದಾಖಲಾಗಿವೆ.

ರಾಜ್ಯ ಮತ್ತು ರಾಷ್ಟ್ರ ನಾಯಕರಿಂದ ಸಂತಾಪ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಂತಾಪ ಸೂಚಿಸಿ, “ರವಿ ನಾಯ್ಕ್ ಅವರ ನಾಯಕತ್ವ, ವಿನಯತೆ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ನೀಡಿದ ಸೇವೆಗಳು ಅಪ್ರತಿಮ. ಅವರ ನಿಧನ ಗೋವಾ ರಾಜ್ಯಕ್ಕೆ ಅಪಾರ ನಷ್ಟ,” ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ರವಿ ನಾಯ್ಕ್ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ “ಗೋವಾ ಸರ್ಕಾರದ ಸಚಿವ ಶ್ರೀ ರವಿ ನಾಯಕ್ ಜೀ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಅನುಭವಿ ಆಡಳಿತಗಾರ ಮತ್ತು ಸಮರ್ಪಿತ ಸಾರ್ವಜನಿಕ ಸೇವಕರಾಗಿ ನೆನಪಿನಲ್ಲಿ ಉಳಿಯುತ್ತಾರೆ. ಗೋವಾದ ಅಭಿವೃದ್ಧಿ ಪಥವನ್ನು ಅವರು ಸಮೃದ್ಧಗೊಳಿಸಿದರು. ವಿಶೇಷವಾಗಿ ದಲಿತರ ಮತ್ತು ಅಂಚಿನಲ್ಲಿರುವವರ ಸಬಲೀಕರಣಕ್ಕಾಗಿ ಅವರು ಉತ್ಸಾಹಿಯಾಗಿದ್ದರು. ಈ ದುಃಖದ ಕ್ಷಣದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಪ್ರಾರ್ಥನೆಗಳು. ಓಂ ಶಾಂತಿ ಎಂದಿದ್ದಾರೆ

ಜನಪ್ರಿಯತೆ ಮತ್ತು ವಿನಯತೆ: ರಾಜಕೀಯ ಜೀವನದ ಎಲ್ಲ ಹಂತಗಳಲ್ಲಿ ರವಿ ನಾಯ್ಕ್ ಅವರು ಜನರ ನಡುವೆ ವಿನಯಪೂರ್ಣ ನಡವಳಿಕೆ ಮತ್ತು ಜನಪರ ನಿಲುವುಗಳಿಗಾಗಿ ಹೆಸರು ಪಡೆದಿದ್ದರು. ಪೊಂಡಾ ಪ್ರದೇಶದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಥಳೀಯರು ಸ್ಮರಿಸುತ್ತಿದ್ದಾರೆ.

Previous articleಅಂಕೋಲಾ: ಪುರಸಭೆ ಮುಖ್ಯಾಧಿಕಾರಿ, ಜ್ಯೂನಿಯರ್ ಇಂಜೀನಿಯರ ಅಮಾನತು
Next articleಬೆಂಗಳೂರು: ಕನ್ನಡ ಕನ್ನಡ ಅಂತ ಬೊಗಳುತ್ತಲೇ ಇರಿ ಎಂದ ರಾಗಿಣಿ

LEAVE A REPLY

Please enter your comment!
Please enter your name here