ಹೆಚ್ಚು ವಿರಾಮ, ಕಡಿಮೆ ಚಿಂತೆ, ಜಾಸ್ತಿ ಖುಷಿ…

0
42
(ಭಾನುವಾರ 12-10-2025ರಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿಪ್ರಕಟವಾದ ಲೇಖನ)

ಮೂಲ: ಇಸಬೆಲ್ ಅಯೆಂದೆ
ಕನ್ನಡ ನಿರೂಪಣೆ: ಎಂ. ಆರ್. ಕಮಲ

ಚಿಲಿ ದೇಶದ ಇಸಬೆಲ್ ಅಯೆಂದೆ ವಿಶ್ವಮಾನ್ಯ ಲೇಖಕಿ ಹಾಗೂ ಇಳಿವಯಸ್ಸಿನಲ್ಲೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವವರು. ಅವರ ಇಪ್ಪತ್ತೆಂಟು ಕೃತಿಗಳು ವಿಶ್ವದ ನಲವತ್ತೆರಡು ಭಾಷೆಗಳಿಗೆ ಅನುವಾದಗೊಂಡಿವೆ, ಎಂಬತ್ತು ದಶಲಕ್ಷ ಪ್ರತಿಗಳು ಮಾರಾಟವಾಗಿವೆ. ಅವರ ವಿಶಿಷ್ಟವಾದ `ದ ಸೋಲ್ ಆಫ್ ಎ ವುಮನ್’ ಆತ್ಮಕತೆಯನ್ನು ಕನ್ನಡದಲ್ಲಿ ನಿರೂಪಿಸಿದವರು ಹೆಸರಾಂತ ಕವಿ, ಪ್ರಬಂಧಕಾರ್ತಿ, ಅನುವಾದಕಿ ಎಂ. ಆರ್. ಕಮಲ. ಅಮೂಲ್ಯ ಪುಸ್ತಕ ಪ್ರಕಟಿಸಿರುವ ಪ್ರಸ್ತುತ ಕೃತಿಯ ಆಯ್ದ ಭಾಗವಿದು.

ಇದು ನನ್ನ ಪಾಲಿಗೆ ಸಂತೋಷದ ಕಾಲ. ಇದನ್ನು ಕಲಕಲದ, ಉತ್ಕೃಷ್ಟ ಕಾಲ ಎಂದೆಲ್ಲ ಹೇಳಲಾಗುವುದಿಲ್ಲ. ಇದೊಂದು ಕೋಲಾಹಲವಿರದ, ಶಾಂತ, ಮೃದುತನದ ಒಳಗಿನ ಭಾವನೆ. ಇದು ಆರಂಭವಾಗುವುದು ನನ್ನನ್ನು ನಾನು ಪ್ರೀತಿಸುವುದರಿಂದಲೇ. ನಾನೀಗ ಸ್ವತಂತ್ರವಾಗಿದ್ದೇನೆ. ಯಾರಿಗೂ ಏನನ್ನೂ ಒಪ್ಪಿಸಿ, ಸಾಧಿಸಿ ತೋರಿಸಬೇಕಿಲ್ಲ. ನನ್ನ ಮಕ್ಕಳ ಮತ್ತು ಮೊಮ್ಮಕ್ಕಳ ಕಾಳಜಿ ವಹಿಸಬೇಕಿಲ್ಲ.

ಅವರೆಲ್ಲ ಸ್ವಾವಲಂಬಿ ವಯಸ್ಕರು. ನನ್ನ ಅಜ್ಜ ಹೇಳುತ್ತಿದ್ದಂತೆ ಕರ್ತವ್ಯವನ್ನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿಯೇ ಮಾಡಿದ್ದೇನೆ. ಕೆಲವರು ಭವಿಷ್ಯದ ಬಗ್ಗೆ ಯೋಜನೆಗಳನ್ನು ಹಾಕುತ್ತಾರೆ. ಮತ್ತೆ ಕೆಲವರು ವೃತ್ತಿಜೀವನದ ಬಗ್ಗೆಯೂ! ಈಗಾಗಲೇ ಹೇಳಿದಂತೆ ಬಾಲ್ಯದಿಂದ ನನಗಿದ್ದ ಒಂದೇ ಗುರಿಯೆಂದರೆ ನನ್ನನ್ನು ನಾನು ಬೆಂಬಲಿಸಿಕೊಳ್ಳುವುದು. ಅದನ್ನು ಮಾಡಿದ್ದೇನೆ. ಉಳಿದಂತೆ ನನ್ನ ಬದುಕಿನ ಪ್ರಯಾಣದಲ್ಲಿ ಕುರುಡಾಗಿ ನಡೆದಿದ್ದೇನೆ.

ಜಾನ್ ಲೆನನ್, ನಾವು ಬೇರೇನೋ ಯೋಜನೆಗಳನ್ನು ಹಾಕುವಾಗ ಘಟಿಸುವಂಥದ್ದು ಬದುಕು' ಎನ್ನುತ್ತಾನೆ. ಬೇರೆ ಪದಗಳಲ್ಲಿ ಹೇಳುವುದೆಂದರೆ ಇದೊಂದು ನಕಾಶೆಯಿಲ್ಲದ ರಸ್ತೆ. ಹಿಂದಿರುಗುವುದಕ್ಕಂತೂ ಸಾಧ್ಯವಿಲ್ಲ. ನನ್ನ ಬದುಕನ್ನು, ವ್ಯಕ್ತಿತ್ವವನ್ನು ನಿರ್ಣಯಿಸಿದ ಪ್ರಮುಖ ಘಟನೆಗಳ ಮೇಲೆ ನನಗೆ ನಿಯಂತ್ರಣವಿರಲಿಲ್ಲ, ನನ್ನ ತಂದೆ ಮಾಯವಾಗಿದ್ದು, ಚಿಲಿಯಲ್ಲಿನ ಸೈನ್ಯದ ದಂಗೆ, ಗಡೀಪಾರು, ಮಗಳ ಸಾವು,ದಿ ಹೌಸ್ ಆಫ್ ಸ್ಪಿರಿಟ್ಸ್’ನ ಗೆಲುವು ಮತ್ತು ಎರಡು ವಿಚ್ಛೇದನಗಳು ಹೀಗೆ. ನೀವು ನನ್ನ ವಿಚ್ಛೇದನಗಳ ಮೇಲೆ ನಿಯಂತ್ರಣವಿರಬಹುದಿತ್ತೆಂದು ಹೇಳಬಹುದು. ಆದರೆ ಒಂದು ಮದುವೆಯ ಗೆಲುವು ಅದರಲ್ಲಿ ಭಾಗಿಯಾದ ಇಬ್ಬರ ಮೇಲೂ ಅವಲಂಬಿತವಾಗಿರುತ್ತದೆ…

ಜನರು ಬರುತ್ತಾರೆ ಮತ್ತು ಹೋಗುತ್ತಾರೆ. ತೀರಾ ಹತ್ತಿರವಾದ ಕುಟುಂಬದ ಸದಸ್ಯರು ಕೂಡ ಈಗ ಚೆಲ್ಲಾಪಿಲ್ಲಿಯಾಗಿದ್ದಾರೆ. ಯಾರನ್ನಾದರೂ, ಯಾವುದಕ್ಕಾದರೂ ಆತುಕೊಳ್ಳುವುದು ಅರ್ಥಹೀನವೆಂದು ತಿಳಿದಿದೆ. ಈ ವಿಶ್ವವಂತೂ ಆಗಲಿಕೆ, ಅವ್ಯವಸ್ಥೆ, ಅನಿಶ್ಚಿತತೆ ಕಡೆಗೆ ಹೋಗುತ್ತದೆಯೇ ಹೊರತು ಒಗ್ಗಟ್ಟಿನ ಕಡೆಗಲ್ಲ. ನಾನೀಗ ಸರಳ ಜೀವನವನ್ನು ಆರಿಸಿಕೊಂಡಿದ್ದೇನೆ. ಕೆಲವೇ ವಸ್ತುಗಳು, ಹೆಚ್ಚು ವಿರಾಮ, ಕಡಿಮೆ ಚಿಂತೆ. ಜಾಸ್ತಿ ಖುಷಿಯನ್ನು ಅಪ್ಪಿಕೊಂಡಿದ್ದೇನೆ. ಸಾಮಾಜಿಕ ಬದ್ಧತೆಗಳನ್ನು ಮಿತಿಗೊಳಿಸಿ ನಿಜವಾದ ಗೆಳೆತನವನ್ನು, ಗಡಿಬಿಡಿಯಿರದ ಬದುಕನ್ನು ಮತ್ತು ಮೌನವನ್ನು ಇಷ್ಟಪಡುತ್ತೇನೆ…

ನಾನಿದನ್ನು ಮಾರ್ಚ್ 2020ರಲ್ಲಿ ಬರೆಯುತ್ತಿದ್ದೇನೆ. ಕೊರೊನ ವೈರಸ್ನಿಂದಾಗಿ ರೋಜರ್ ಜೊತೆ ಮನೆಯಲ್ಲಿಯೇ ಬಂಧಿತಳಾಗಿದ್ದೇನೆ. ಇಲ್ಲದಿದ್ದರೆ ಗಾರ್ಸಿಯಾ ಮಾರ್ಕೆಸ್ನಿಂದ ಸ್ಫೂರ್ತಿಗೊಂಡು `ಲವ್ ಇನ್ ದಿ ಟೈಮ್ ಆಫ್ ಪ್ಯಾಂಡೆಮಿಕ್’ ಬರೆಯುತ್ತಿದ್ದೆ. ಈ ವಯಸ್ಸಿನಲ್ಲಿ ರೋಜರ್ ಅಥವಾ ನನಗೆ ವೈರಸ್ ತಗುಲಿದರೆ ಕತೆ ಮುಗಿದಂತೆ. ಯಾರ ಮೇಲೂ ಆರೋಪ ಮಾಡಲಾಗುವುದಿಲ್ಲ.

ಮುಂಚೂಣಿಯಲ್ಲಿ ನಿಂತು ವೈರಸ್ನೊಂದಿಗೆ ಹೋರಾಡುತ್ತಿರುವ ನಮ್ಮ ಹೀರೋಗಳಿಗಿಂತ ಹೆಚ್ಚು ಸುರಕ್ಷಿತವಾಗಿದ್ದೇವೆ. ಹೆಚ್ಚು ಜನರು ಕ್ವಾರಂಟೈನ್ನಲ್ಲಿಯೇ ಉಳಿಯಬೇಕಾಗಿದೆ. ವೃದ್ಧರು, ರೋಗಿಗಳು, ಮನೆಯಿಲ್ಲದವರು, ಯಾವುದೇ ಬಗೆಯ ಸುರಕ್ಷಿತತೆ ಅಥವಾ ಸಹಾಯವಿಲ್ಲದವರು, ಹೆಚ್ಚು ಜನರು ವಾಸಮಾಡುವ ವಠಾರದಲ್ಲಿ, ನಿರಾಶ್ರಿತ ಶಿಬಿರದಲ್ಲಿರುವವರು ಮತ್ತು ಸಂಪನ್ಮೂಲಗಳಿಲ್ಲದೆ ತುರ್ತುಪರಿಸ್ಥಿತಿಯಲ್ಲಿ ಇರುವವರನ್ನು ನೆನೆಸಿಕೊಂಡರೆ ನನಗೆ ನೋವಾಗುತ್ತದೆ…

ಪ್ರಪಂಚ ಹೀಗೆ ಅಸ್ತವ್ಯಸ್ತವಾದೀತೆಂದು ಕೆಲವೇ ದಿನಗಳ ಹಿಂದೆಯೂ ನಾವು ಊಹಿಸಿರಲಿಲ್ಲ. ಸಾಮಾಜಿಕ ಜೀವನವೆಲ್ಲ ನಿಂತೇಹೋಗಿದೆ. ಆಟಗಳಿಂದ ಹಿಡಿದು ಕುಡಿತದವರೆಗೂ ಜನರು ಒಟ್ಟಿಗೆ ಸೇರುವುದನ್ನು ನಿರ್ಬಂಧಿಸಲಾಗಿದೆ. ಸಭೆಗಳು, ಶಾಲೆಗಳು, ವಿಶ್ವವಿದ್ಯಾಲಯಗಳು, ರೆಸ್ಟೋರೆಂಟ್ಗಳು, ಕಾಫಿ ಶಾಪ್ಗಳು, ಪುಸ್ತಕದಂಗಡಿಗಳು, ಮಾಲ್ಗಳು ಮುಂತಾದವೆಲ್ಲ ಮುಚ್ಚಿಹೋಗಿವೆ. ಪ್ರಯಾಣ ಮಾಡುವುದಂತೂ ಸಾಧ್ಯವೇ ಇಲ್ಲ.

ಯಾರು ಉಳಿತಾಯ ಖಾತೆಯಲ್ಲಿ ಹಣವಿಟ್ಟಿದ್ದರೋ ಅವರು ಅದನ್ನು ತೆಗೆದುಕೊಂಡು ತಮ್ಮ ಹಾಸಿಗೆಯ ಕೆಳಗೆ ಮುಚ್ಚಿಡುತ್ತಿದ್ದಾರೆ. ಸಮರ್ಥನೀಯವಲ್ಲದ ಗ್ರಾಹಕ ಆರ್ಥಿಕತೆಯ ಸತ್ಯ ಹೊರಬಂದಿದೆ. ಬೀದಿಗಳು ಭಣಗುಟ್ಟುತ್ತಿವೆ. ನಗರಗಳು ಸ್ತಬ್ಧವಾಗಿವೆ. ದೇಶಗಳು ಹೆದರಿವೆ. ನಾವು ನಾಗರಿಕತೆಯನ್ನೇ ಪ್ರಶ್ನಿಸುತ್ತಿದ್ದೇವೆ.

ಹಾಗೆಂದ ಮಾತ್ರಕ್ಕೆ ಎಲ್ಲ ಸುದ್ದಿಗಳು ಕೆಟ್ಟವೇನಲ್ಲ. ಮಾಲಿನ್ಯ ಕುಗ್ಗಿದೆ. ವೆನಿಸ್ನ ಕಾಲುವೆಗಳಲ್ಲಿ ನೀರು ಸ್ವಚ್ಛವಾಗಿದೆ. ಬೀಜಿಂಗ್ನ ಆಕಾಶ ನೀಲಿಯಾಗಿದೆ ಮತ್ತು ಹಕ್ಕಿಗಳು ನ್ಯೂಯಾರ್ಕ್ನ ಎತ್ತರೆತ್ತರದ ಕಟ್ಟಡಗಳ ನಡುವೆ ಹಾಡುತ್ತಿವೆ. ಸಂಬಂಧಿಗಳು, ಗೆಳೆಯರು, ಸಹೋದ್ಯೋಗಿಗಳು, ನೆರೆಹೊರೆಯವರು ಎಷ್ಟು ಸಾಧ್ಯವೋ ಅಷ್ಟು ಸಂವಹನ ನಡೆಸುತ್ತ ಪರಸ್ಪರರಿಗೆ ಬೆಂಬಲ ನೀಡುತ್ತಿದ್ದಾರೆ.

ನಿರ್ಧಾರ ಮಾಡದಿದ್ದ ಪ್ರೇಮಿಗಳು ಒಟ್ಟಿಗೆ ಬದುಕಲು ಯೋಜಿಸುತ್ತಿದ್ದಾರೆ. ನಮಗೆ ನಿಜವಾಗಿಯೂ ಬೇಕಾಗಿರುವುದು ಪ್ರೀತಿ ಎಂದು ಇದ್ದಕ್ಕಿದ್ದಂತೆ ಅರ್ಥವಾಗಿದೆ. ನಿರಾಶಾವಾದಿಗಳು ಇದೊಂದು ವೈಜ್ಞಾನಿಕ ಕಾದಂಬರಿಯ ಕಾಲ್ಪನಿಕ ಜಗತ್ತಿನಂತಾಗುತ್ತದೆ. ಮೆಕ್ಕಾರ್ತಿಯ ಭಯ ಹುಟ್ಟಿಸುವ ಕಾದಂಬರಿ “ದ ರೋಡ್’ನಲ್ಲಿರುವಂತೆ ಜನರು ಅನಾಗರಿಕ ಬುಡಕಟ್ಟುಗಳಂತೆ ಪ್ರತ್ಯೇಕವಾಗಿ, ಒಬ್ಬರನ್ನೊಬ್ಬರು ತಿಂದುಹಾಕುತ್ತಾರೆ ಎನ್ನುತ್ತಿದ್ದಾರೆ.

ವಾಸ್ತವವಾದಿಗಳು ಇತಿಹಾಸದಲ್ಲಿ ಅದೆಷ್ಟೋ ಮಹಾ ವಿಪತ್ತುಗಳು ಸರಿದುಹೋದಂತೆ ಇದೂ ಹೋಗುತ್ತದೆ ಎನ್ನುತ್ತಿದ್ದಾರೆ. ದೀರ್ಘಾವಧಿಯ ಪರಿಣಾಮಗಳ ಜೊತೆ ಈಗ ಹೋರಾಡಬೇಕಿದೆ. ನಾವು, ಆಶಾವಾದಿಗಳು, ಇಂತಹ ಒಂದು ಆಘಾತ ನಮ್ಮ ಚಲನೆಯ ತಿದ್ದುಪಡಿಗೆ ಬೇಕಿತ್ತು ಎನ್ನುತ್ತೇವೆ. ಆಳವಾದ ಬದಲಾವಣೆಗಳಿಗೆ ಇದೊಂದು ಅನನ್ಯವಾದ ಅವಕಾಶ. ಕಡಿವಾಣವಿಲ್ಲದ ಭೌತವಾದ, ದುರಾಸೆ ಮತ್ತು ಹಿಂಸೆಯ ತಳಹದಿಯ ನಾಗರಿಕತೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ.

ಇದು ಚಿಂತನೆ ಮಾಡಲು ತಕ್ಕ ಸಮಯ. ನಮಗೆ ಎಂತಹ ಪ್ರಪಂಚ ಬೇಕಿದೆ? ಇದು ನಮ್ಮ ಕಾಲದ ಬಹುಮುಖ್ಯ ಪ್ರಶ್ನೆ. ಅರಿವುಳ್ಳ ಪ್ರತೀ ಗಂಡಸು ಮತ್ತು ಪ್ರತೀ ಹೆಂಗಸು ಕೇಳಿಕೊಳ್ಳಬೇಕಾದ ಪ್ರಶ್ನೆ. ಕತೆಯಲ್ಲಿ ಬಾಗ್ದಾದ್ನ ಕಲೀಫ ಕಳ್ಳನಿಗೆ ಕೇಳಬಹುದಾದ ಪ್ರಶ್ನೆ.
ನಮಗೊಂದು ಸುಂದರ ಜಗತ್ತು ಬೇಕು. ಅದು ಇಂದ್ರಿಯಗಳು ಮೆಚ್ಚಿಕೊಳ್ಳುವ ಸೌಂದರ್ಯವಲ್ಲ, ತೆರೆದ ಹೃದಯ ಮತ್ತು ಸ್ಫಟಿಕ ಸ್ಪಷ್ಟ ಮನಸ್ಸು ಗ್ರಹಿಸಬಹುದಾದ ಚೆಲುವು. ಎಲ್ಲ ರೀತಿಯ ಆಕ್ರಮಣಶೀಲತೆಯಿಂದ ರಕ್ಷಿಸಲ್ಪಟ್ಟ ಪ್ರಾಚೀನ ಗ್ರಹ ಬೇಕು.

ಪರಸ್ಪರರ ಬಗ್ಗೆ, ಉಳಿದ ಜೀವಿಗಳು ಮತ್ತು ನಿಸರ್ಗದ ಬಗ್ಗೆ ಗೌರವವಿರುವ, ಸಮತೋಲನವಿರುವ ಸಮರ್ಥನೀಯ ನಾಗರಿಕತೆ ಬೇಕು. ಎಲ್ಲರನ್ನೂ ಒಳಗೊಳ್ಳುವ, ಲಿಂಗಭೇದ, ಜನಾಂಗಭೇದ, ವರ್ಗಭೇದ, ವಯಸ್ಸಿನ ಭೇದವಿಲ್ಲದ ಅಥವಾ ನಮ್ಮನ್ನು ಪ್ರತ್ಯೇಕಿಸುವ ಯಾವುದೇ ವರ್ಗೀಕರಣವಿಲ್ಲದ ಸಮತಾವಾದಿ ನಾಗರಿಕತೆ ಬೇಕು. ಶಾಂತಿ, ಸಹಾನುಭೂತಿ, ಸಭ್ಯತೆ, ಸತ್ಯ, ಮತ್ತು ದಯೆ ಇರುವ ಪ್ರಪಂಚ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಂತೋಷ ಉಕ್ಕುವ ಜಗತ್ತು ಬೇಕು. ಅದೇ, ನಮ್ಮಂತಹ ಒಳ್ಳೆಯ ಮಾಟಗಾತಿಯರು ಕೇಳುವುದು. ಅದೊಂದು ಕಲ್ಪನೆಯಲ್ಲ, ಯೋಜನೆ. ಜೊತೆಯಾಗಿ ನಾವದನ್ನು ಸಾಧಿಸಬಹುದು.

ಕೊರೊನ ವೈರಸ್ ಬಿಕ್ಕಟ್ಟು ಮುಗಿದ ಮೇಲೆ ನಾವು ಹೊಸದೊಂದು ಸ್ಥಿತಿಯನ್ನು ಪ್ರವೇಶಿಸುತ್ತೇವೆ. ನಾವಾಗ ಮಾಡಬೇಕಾದ ಮೊದಲ ಕೆಲಸವೆಂದರೆ ಬೀದಿಗಳಲ್ಲಿ ಪರಸ್ಪರರನ್ನು ಅಪ್ಪಿಕೊಳ್ಳುವುದು! ಮನುಷ್ಯರನ್ನು ಮುಟ್ಟುವುದನ್ನೇ ಕಳೆದುಕೊಂಡಿದ್ದೇವೆ. ಆಗ ಪ್ರತೀ ಭೇಟಿಯನ್ನು ನೆನಪಿಟ್ಟುಕೊಳ್ಳುತ್ತೇವೆ, ಹೃದಯದ ವಿಷಯಗಳನ್ನು ಪ್ರೀತಿಯಿಂದ ಕಾಪಿಟ್ಟುಕೊಳ್ಳುತ್ತೇವೆ.

Previous articleಸಮ್ಮೋಹಕ ಕಲಾತ್ಮಕ ಕೃತಿಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ
Next articleವಿಶ್ವಶಾಂತಿ ಸೇವಾ ಟ್ರಸ್ಟ್: ಮೂವರು ಸಾಧಕರಿಗೆ ‘ನಮ್ಮನೆ ಪ್ರಶಸ್ತಿ’

LEAVE A REPLY

Please enter your comment!
Please enter your name here